ಗುರುವಾರ, ನವೆಂಬರ್ 20, 2008

ಸುಸ್ವಾಸ ಮತ್ತು ಟೆಲಿಫೋನ್ - 3

ಇದುವರೆಗೆ: ಸುಸ್ವಾಸ ಒಬ್ಬ ಆಲಸಿ ಆದರೆ ತುಂಬಾ ವಿವೇಚನೆಯುಳ್ಳ ಮನುಷ್ಯ. ಅವನು ಮಧ್ಯಾಹ್ನ ಕಂಡ ಕನಸಿನಲ್ಲಿ ಮಂಜಿನ ಮನುಷ್ಯನು ಹಳೇ ಮಾದರಿಯ ಕಪ್ಪು ಟೆಲಿಫೋನನ್ನು ತೋರಿಸಿ ಸುಸ್ವಾಸನನ್ನು ಕುರಿತು "ಇದನ್ನು ನಿನ್ನ ಮನೆಯ ಲಿವಿಂಗ್ ರೂಮಿನ ಈಶಾನ್ಯ ದಿಕ್ಕಿನಲ್ಲಿ ಇರಿಸಿದರೆ, ಸಕಲ ಸಂಪತ್ತು, ಮರ್ಯಾದೆಗಳು ನಿನ್ನ ನೆರಳಿನಂತೆ ಯಾವಾಗಲೂ ನಿನ್ನನ್ನು ಹಿಂಬಾಲಿಸುತ್ತವೆ" ಎಂದು ಹೇಳಿತು. ಆ ಟೆಲಿಫೋನು, ಮನೆಗೆ ಕರೆದೊಯ್ದು ಸ್ಥಾಪಿಸುವವರೆಗೂ ಮಾತನಾಡಬಾರದೆಂಬ ನಿಬಂಧನೆಯನ್ನು ವಿಧಿಸಿತ್ತು. ಕನಸಿನ ಪ್ರಕಾರವೇ ಟೆಲಿಪುರಮ್ಮಿನಲ್ಲಿ ಸಿಕ್ಕ ಟೆಲಿಫೋನು ಸುಸ್ವಾಸನ ನಂಬಿಕೆಯನ್ನು ಇಮ್ಮಡಿಗೊಳಿಸಿತು. ಮತ್ತು ಅದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸುವುದರಿಂದ ಸಕಲ ಸಂಪತ್ತು, ಮರ್ಯಾದೆಗಳು ದೊರೆಯುವ ಬಗ್ಗೆ ವಿಶ್ವಾಸವುಂಟಾಯಿತು. ಹೀಗಾಗಿ ಆ ಟೆಲಿಫೋನನ್ನು ಹೇಗಾದರೂ ಮನೆಗೆ ತರಲೇಬೇಕೆಂಬ ಧೃಡ ನಿರ್ಧಾರದೊಂದಿಗೆ ಪ್ರತಿ ದಿನ ಬೆಳಗ್ಗೆ ಟೆಲಿಪುರಮ್ಮಿಗೆ ಹೊರಡುತ್ತಿದ್ದನು.
ಆದರೆ ಪ್ರತಿ ಬಾರಿಯೂ ಉಪಾಯದಿಂದ ಸುಸ್ವಾಸನು ಮಾತನಾಡುವಂತೆ ಮಾಡಿ, ಪುನಃ ಅದನ್ನು ಪಡೆಯಲು ಮಾರನೇ ದಿನದ ಸೂರ್ಯೋದಯದವರೆಗೂ ಕಾಯಬೇಕಾಗುತ್ತದೆಂದು ತಿಳಿಸಿ ಆ ಟೆಲಿಫೋನು ಮಾಯವಾಗಿ ಹೋಗುತ್ತಿತ್ತು.


ಧೋನಿಯ ಸಂದರ್ಶನ.

ಟೆಲಿಫೋನಿನ ವಿಧಾನವನ್ನರಿತ ಸುಸ್ವಾಸನು, ಅದನ್ನು ಏಮಾರಿಸಲು ಒಂದು ಉಪಾಯ ಹುಡುಕಿದ. ಅದರಂತೆ ಟೆಲಿಪುರಮ್ಮಿನ ಪಾಳು ಜಾಗಕ್ಕೆ ಸೂರ್ಯೋದಯಕ್ಕೆ ಮುಂಚೆಯೇ ಹೋದ. ಸೂರ್ಯನ ಪ್ರಥಮ ಕಿರಣಗಳು ಭೂಸ್ಪರ್ಶ ಮಾಡುತ್ತಿದ್ದಂತೆ ಕಪ್ಪು ಟೆಲಿಫೋನ್ ಕಾಣಿಸಿಕೊಂಡಿತು. ಕೂಡಲೇ ಅದನ್ನು ಎತ್ತಿಕೊಂಡು ತನ್ನ ಕಾರಿನ ಕಡೆ ನಡೆದನು. ಅವನೆಣಿಸಿದಂತೆ ಆ ನಸುಕಿನ ಮುಂಜಾನೆ ವಾಹನಗಳ ದಟ್ಟಣೆ ಅತಿ ವಿರಳವಾಗಿತ್ತು. ಸುಸ್ವಾಸನಿಗೆ ತನ್ನ ಯೋಜನೆ ಫಲಿಸುವ ಬಗ್ಗೆ ಖಾತ್ರಿಯಾಯಿತು. ಕಾರನ್ನು ವೇಗವಾಗಿ ನಡೆಸಿ ಟೆಲಿಫೋನಿನ ಕಥೆ ಮುಗಿಯುವ ಮೊದಲೇ ಮನೆ ಸೇರುವುದಾದರೆ ಮಾತನಾಡುವುದನ್ನು ತಪ್ಪಿಸಿಕೊಳ್ಳಬಹುದೆಂಬುದೇ ಅವನ ಉಪಾಯವಾಗಿತ್ತು. ಹೀಗಾಗಿ ಕಾರನ್ನು ವೇಗವಾಗಿ ನಡೆಸುವ ಕಡೆ ಗಮನ ಹರಿಸಿದ.

ಪ್ರತಿ ಸಲದಂತೆ ಟೆಲಿಫೋನಿನ ಟ್ರಿಣ್, ಟ್ರಿಣ್ ಕೇಳಿಸಿತು. ಯಥಾ ಪ್ರಕಾರ ಸುಸ್ವಾಸನು ಎಲ್ಲಾ ಆದೇಶಗಳನ್ನು ಸೂಕ್ತ ರೀತಿಯಲ್ಲಿ ಪಾಲಿಸಿ, ಕಿವಿಗೆ ಬ್ಲೂ ಟೂತ್ ಇಯರ್ ಫೋನನ್ನು ಸಿಗಿಸಿಕೊಂಡು, ಕಥೆಯನ್ನು ಕೇಳಲು ಸಿದ್ಧನಾದನು.

ಒಂದು ಭಾನುವಾರದ ಮುಂಜಾನೆ ಟಾಕ ಮತ್ತು ನಾಕ ಎಂಬ ದಂಪತಿಗಳು ಜೊತೆಯಾಗಿ ಟಿವಿ ನೋಡಲು ಕುಳಿತಿದ್ದರು. ಅಂದು ಅವರ ವಿವಾಹ ವಾರ್ಷಿಕೋತ್ಸವದ ದಿನ. ಆದ್ದರಿಂದ ಆ ದಿನವನ್ನು ಸ್ಮರಣೀಯವಾಗಿ ಕಳೆಯಲು ಒಡಂಬಡಿಕೆಯೊಂದನ್ನು ಮಾಡಿಕೊಂಡಿದ್ದರು. ಅದರಂತೆ ಅವರು ಆ ದಿನವನ್ನು ಯಾವುದೇ ವಿಷಯದ ಬಗ್ಗೆ ವಾದ ವಿವಾದ ಮಾಡದೇ ಕಳೆಯಬೇಕೆಂದು ನಿರ್ಧರಿಸಿದರು. ಹೀಗಾಗಿ ಟಿವಿ ರಿಮೋಟನ್ನು ಮುಟ್ಟದೆ, ಟಿವಿಯನ್ನು ಸ್ವಿಚ್ ಆನ್ ಮಾಡಿದಾಗ ಮೂಡಿದ ಚಾನೆಲ್ಲನ್ನೇ ನೋಡುತ್ತಿದ್ದರು. ಅಲ್ಲಿ ಧೋನಿಯ ಸಂದರ್ಶನವು ಪ್ರಸಾರವಾಗುತ್ತಿತ್ತು.

ಸಂದರ್ಶನಕಾರ : "ಸರ್, ನಿಮ್ಮ ಖ್ಯಾತಿ ಪರಾಕಾಷ್ಠತೆಯನ್ನು ತಲುಪಿ ಕಟ್ಟಾ ಅಭಿಮಾನಿಗಳ ದಂಡೇ ಸೃಷ್ಠಿಯಾಗಿದೆ. ರಾಷ್ಟ್ರಾಧ್ಯಕ್ಷರೊಬ್ಬರು ನಿಮ್ಮ ಉದ್ದನೆಯ ಕೂದಲಿನ ಬಗ್ಗೆ ಮೆಚ್ಚುಗೆ ಸೂಚಿಸಿದ ಸಮಯದಲ್ಲಿ ಅದೊಂದು ಫ್ಯಾಷನ್ನೇ ಆಯಿತು. ಇದೀಗ ನಿಮ್ಮ ಕತ್ತರಿಸಿದ ಕೂದಲು, ಎಲ್ಲರನ್ನು ಮಿಲಿಟರಿ ಕಟ್ ಗೆ ಹಾತೊರೆಯುವಂತೆ ಮಾಡುತ್ತಿದೆ. ಜಾಹೀರಾತಿನವರ ಗಮನ ಕೂಡ ನಿಮ್ಮ ತಲೆಕೂದಲಿನ ಮೇಲಿದೆ. ಈ ಖ್ಯಾತಿ, ಕೂಲಂಕೂಷವಾಗಿ ನಿಮ್ಮನ್ನು ಸದಾ ಅಳೆಯುವ ಪ್ರವೃತ್ತಿ, ನಾಯಕತ್ವದ ಜವಾಬ್ದಾರಿಗಳ ನಡುವೆ ನಿಮ್ಮ ಮನಸ್ಸಿನ ಪ್ರಶಾಂತತೆಯನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದೀರಿ? "

ಧೋನಿ : "ನೋಡಿ ನಿಮಗೇ ತಿಳಿದಂತೆ T-20 ವಿಶ್ವ ಕಪ್ ಗೆದ್ದಾಗ ಎಲ್ಲೆ ಮೀರಿದ ಕೊಂಡಾಡುವಿಕೆಯನ್ನು ಕಂಡ ನಾವು, ಅದಕ್ಕೂ ಮೊದಲು ವೆಸ್ಟ್ ಇಂಡೀಸಿನಲ್ಲಿ ನಡೆದ ಏಕ ದಿವಸೀಯ ವಿಶ್ವ ಕಪ್ ನ ಲೀಗ್ ಹಂತವನ್ನು ದಾಟಲಾಗದಿದ್ದಾಗ ಅತಿಯಾದ ತೆಗಳಿಕೆ ಮತ್ತು ಸ್ವಲ್ಪ ಮಟ್ಟಿನ ವೈಯಕ್ತಿಕ ಹಲ್ಲೆಯನ್ನು ಸಹಿಸಬೇಕಾಯಿತು. ಇಂತಹ ಏಳು ಬೀಳುಗಳ ವೈಪರಿತ್ಯದಿಂದ ಕೂಡಿದ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳಲು ನನ್ನ ಗುರುಗಳಾದ ಖುಷಿ ಬಾಬರ ಬಳಿಗೆ ಹೋಗಿದ್ದೆ. ಅದೊಂದು ಅಪೂರ್ವವಾದ ಅನುಭವ. ಅವರ ಕೊಠಡಿಯಲ್ಲಿ ಕಾಲಿಟ್ಟೊಡನೆಯೇ ಚಕಿತನಾದೆ. ಅತ್ಯಂತ ಸಾಧಾರಣವಾಗಿದ್ದ ಕೊಠಡಿಯು ಪಂಚತಾರಾ ಹೋಟೆಲಿನ ಕೊಠಡಿಯಂತೆ ರಾರಾಜಿಸುತ್ತಿತ್ತು. ಇದು ಹೇಗೆ ಎನ್ನುವ ವಿಚಾರ ಸುಳಿಯುತ್ತಿರುವಾಗಲೇ, ನನ್ನ ಮನವನ್ನರಿತ ಖುಷಿ ಬಾಬಾರು "ಈ ಪರಿವರ್ತನೆಗೆ ಕಾರಣ - ಅಖಿಲ ಭಾರತ ಕ್ಷೌರಿಕರ ಸಂಘದವರು ನೀಡಿದ ದೇಣಿಗೆ - ಎಂದು ನುಡಿದರು! ಹಾಗೆ ಮುಂದುವರೆಯುತ್ತಾ "ಆ ಸಂಘದ ಪದಾಧಿಕಾರಿಗಳ ಸಂತೋಷಕ್ಕೆ T-20 ವಿಶ್ವ ಕಪ್ ನ ಗೆಲುವಾಗಿದ್ದರೂ, ನಿನ್ನ ಕತ್ತರಿಸಿದ ಕೂದಲು ಅವರ ಸಂತೋಷವನ್ನು ನೂರ್ಮಡಿಗೊಳಿಸಿತ್ತು. ಇಲ್ಲಿ ನಿಜವಾಗಿ ಅರಿಯಬೇಕಾದ ಸಂಗತಿಯೆಂದರೆ, ನೀಳ ಕೇಶ ರಾಶಿ ಬಿಟ್ಟರೂ, ತದನಂತರ ಚಿಕ್ಕದಾಗಿ ಕತ್ತರಿಸಿಕೊಂಡರೂ ನಿನ್ನ ಅಭಿಮಾನಿಗಳಾರೂ ಧೋನಿಯಾಗಲಿಲ್ಲ. ಆದ್ದರಿಂದ ನೀನು ಮಾತ್ರ ಧೋನಿಯಾಗಿಯೇ ಇರು!" ಎಂದರು. ನಂತರ ನನ್ನ ಶಿರವನ್ನು ಸ್ಪರ್ಶಿಸಿ ಆಶೀರ್ವದಿಸಿದ ಖುಷಿ ಬಾಬಾರು ಮೌನ ತಾಳಿದರು. ಆಗ ನನ್ನ ಶರೀರದಲ್ಲಾದ ವಿಶಿಷ್ಟ ಶಕ್ತಿಯ ಸಂಚಲನೆಯು ನನ್ನ ಬಗ್ಗೆ ಅರಿವೊಂದನ್ನು ಮೂಡಿಸಿತು."

ಸಂದರ್ಶನಕಾರ : "ಒಂದು ಚಿಕ್ಕ ವಿರಾಮದ ಬಳಿಕ ಧೋನಿಯವರು ತಮ್ಮ ಅರಿವಿನ ಬಗ್ಗೆ ವಿವರಿಸುತ್ತಾರೆ. ಅಲ್ಲಿಯವರೆಗೆ ಬೇರೆಲ್ಲೂ ಹೋಗದಿರಿ!"

ಜಾಹೀರಾತುಗಳ ಪ್ರಸಾರ ಆರಂಭವಾಯಿತು.

ಟಾಕ ಮತ್ತು ನಾಕ ಅಭ್ಯಾಸ ಬಲದಿಂದ ಚಾನೆಲ್ ಸರ್ಫಿಂಗ್ ಮಾಡತೊಡಗಿದರು. ವಿವಿಧ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿದ್ದ ಮತ್ತಷ್ಟು ಜಾಹೀರಾತುಗಳು, ವಾರ್ತೆಗಳು, ಕ್ರಿಕೆಟ್ ಪಂದ್ಯದ ಮರುಪ್ರಸಾರ, ಪಾಕವಿಧಾನಗಳು ಹೀಗೆ ವಿವಿಧ ಕಾರ್ಯಕ್ರಮಗಳನ್ನು ನೋಡುತ್ತಾ, ನೋಡುತ್ತಾ ಪುನಃ ಧೋನಿಯ ಸಂದರ್ಶನ ಬರುತ್ತಿದ್ದ ಚಾನೆಲ್ಲಿಗೆ ಬಂದು ನಿಂತರು.

ಧೋನಿ ಮತ್ತು ಸಂದರ್ಶನಕಾರ ಪರಸ್ಪರ ಕೈ ಕುಲುಕುತ್ತಿರುವ ದೃಶ್ಯದೊಂದಿಗೆ ಕಾರ್ಯಕ್ರಮ ಮುಗಿದೇ ಹೋಯಿತು.

ಧೋನಿಯ ಅರಿವಿನ ಬಗ್ಗೆ ತಿಳಿಯಲು ಉತ್ಸುಕರಾಗಿದ್ದ ಟಾಕ ಮತ್ತು ನಾಕ ಅವರು ಚಾನೆಲ್ ಸರ್ಫಿಂಗ್ ನ ಅಭ್ಯಾಸ ಬಲದಿಂದಾಗಿ, ಸರಿಯಾದ ವೇಳೆಗೆ ಸಂದರ್ಶನ ಬಿತ್ತರಗೊಳ್ಳುತ್ತಿದ್ದ ಚಾನೆಲ್ಲಿಗೆ ಬರಲಾಗಲಿಲ್ಲ. ಅಂದು ಮುಂಜಾನೆ ಮಾಡಿಕೊಂಡಿದ್ದ ಒಡಂಬಡಿಕೆ ಮುರಿದು ಬಿತ್ತು. ಯಥಾ ಪ್ರಕಾರ ಒಬ್ಬರನ್ನೊಬ್ಬರು ನಿಂದಿಸತೊಡಗಿದರು.

"ನಿನ್ನೆ ರಾತ್ರಿಯೆಲ್ಲಾ ನಿದ್ದೆಗೆಟ್ಟು ನೋಡಿದ್ದ ಕ್ರಿಕೆಟ್ ಮ್ಯಾಚಿನ ಮರುಪ್ರಸಾರ ನೋಡುವ ಅಗತ್ಯ ನಿಮಗೇನಿತ್ತು?"

"ಓಹೋ! ನೀನು ಅದ್ಯಾವುದೋ ಹೊಸರುಚಿಯಲ್ಲಿ ಬಳಸಿದ ಪದಾರ್ಥಗಳ ಪಟ್ಟಿಗೋಸ್ಕರ ಕಾಯುತ್ತಾ ಕುಳಿತು, ಸಮಯ ಹಾಳು ಮಾಡಲ್ಲಿಲ್ಲವೇ? "

"ಇಲ್ಲ, ಇಲ್ಲ, ನೀವೇ ಆ ಕೆಲಸಕ್ಕೆ ಬಾರದ ವಾರ್ತೆಗಳನ್ನು ನೋಡುತ್ತಾ ಕುಳಿತಿದ್ದೇ ಕಾರಣ."

"ಅಯ್ಯೋ, ಬೇಡವೆಂದರೂ, ಇದು ಧಾರಾವಾಹಿಯ ಮುನ್ನೂರನೇ ಕಂತು, ಒಂಚೂರು ನೋಡಿಬಿಡೋಣ ಅಂತ ಹೇಳಿ ಸಮಯವನ್ನು ವ್ಯರ್ಥ ಮಾಡಲ್ಲಿಲ್ಲವೇ..."

ಇಷ್ಟು ಕಥೆಯ ನಂತರ ಒಂದೆರಡು ಕ್ಷಣಗಳಷ್ಟು ಕಾಲ ಮೌನವಾವರಿಸಿತು. ಹಿಂದೆಯೇ ಗಹಗಹಿಸಿ ನಗುವ ಸದ್ದು ಕೇಳಿಸಿತು. "ಸುಸ್ವಾಸ, ನನ್ನನ್ನು ಏಮಾರಿಸುವುದು ಸಾಧ್ಯವಾಗದ ಮಾತು. ಈಗ ನೀನು ಧೋನಿಯ ಅರಿವಿನ ಬಗ್ಗೆ ತಿಳಿಸಲೇಬೇಕು" ಎಂದು ಟೆಲಿಫೋನು ಹೇಳಿತು!

ಸುಸ್ವಾಸ ಬೆಚ್ಚಿಬಿದ್ದ. ಅವನ ಮನೆ ಇನ್ನೂ ಸುಮಾರು ಒಂದೂವರೆ ಕಿಲೋಮೀಟರುಗಳಷ್ಟು ದೂರದಲ್ಲಿತ್ತು. ಈ ಸಲದ ಕಥೆಯು ತುಂಬಾ ಚಿಕ್ಕದಾದುದರಿಂದ, ಅವನ ಯೋಜನೆ ಫಲಿಸಲಿಲ್ಲ. ಬೇರೆ ಮಾರ್ಗ ಕಾಣದ ಸುಸ್ವಾಸ ಮಾತನಾಡತೊಡಗಿದ.

"ಧೋನಿಯಂತೆ ಕಾಣಿಸಿಕೊಳ್ಳಬೇಕೆಂಬ ಒಂದೇ ಹಂಬಲದಿಂದ, ಮೊದಲು ಉದ್ದುದ್ದನೆಯ ಕೂದಲು ಬಿಟ್ಟಿದ್ದ ಅಭಿಮಾನಿಗಳು ನಂತರ ಚಿಕ್ಕದಾಗಿ ಕತ್ತರಿಸಿಕೊಳ್ಳಲು ನುಗ್ಗಿದರು. ಅದರಿಂದ ಅವರಲ್ಯಾರೂ ಧೋನಿಯಾಗಲಿಲ್ಲ, ಭವಿಷ್ಯದಲ್ಲೂ ಆಗುವ ಸಂಭವವೇ ಇಲ್ಲ. ಆದರೆ, ಅವರು ಕೈಕೊಂಡ ಕಾರ್ಯವು ಮತ್ತೊಬ್ಬರ ಮೇಲೆ ಪರಿಣಾಮ ಬೀರಿದ್ದವು. ಹಾಗಾಗಿ ನಾವು ಕೈಗೊಳ್ಳುವ ಪ್ರತಿ ಕಾರ್ಯವೂ ನಮ್ಮ ಸುತ್ತಲ ಪರಿಸರದ ಮೇಲೆ ಪರಿಣಾಮ ಬೀರುತ್ತದೆ.

ಖುಷಿ ಬಾಬಾರ ಚೆನ್ನಾದ ಈ ಉದಾಹರಣೆಯು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿರೋಧಾಭಾಸವನ್ನು ಎತ್ತಿ ತೋರಿಸುವುದಲ್ಲದೇ ಅದರ ನಿರ್ವಹಣೆಯ ಮಾರ್ಗದ ಮೇಲೂ ಬೆಳಕು ಚೆಲ್ಲುತ್ತದೆ. ಇದನ್ನು ಚೆನ್ನಾಗಿ ಅರಿತುಕೊಂಡ ಧೋನಿಯು ಮಾಧ್ಯಮದವರ, ಸ್ವಘೋಷಿತ ಕ್ರಿಕೆಟ್ ಪರಿಣಿತರ ಮತ್ತು ಅಭಿಮಾನಿಗಳ ಕಡೆಯಿಂದ ಮಹಾಪುರದಂತೆ ಬರುತ್ತಿದ್ದ ಸಲಹೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮದೇ ಆದ ಕಾರ್ಯನೀತಿಯನ್ನು ಅನುಸರಿಸಿದರು. ಬ್ಯಾಟಿಂಗ್ ಮಾಡುವಾಗ ಆಕ್ರಮಕ ಶೈಲಿ ಹೊಂದಿದ್ದ ಕಪಿಲ್ ಅಥವಾ ದಾಖಲೆಗಳ ವೀರ ಸಚಿನರಂತೆ ಆಗಬೇಕೆಂಬ ಚಪಲವಾಗಲಿ, ನಾಯಕತ್ವ ವಹಿಸುವಾಗ ಅತಿರಥ ಮಹಾರಥರಾದ ಗವಾಸ್ಕರ್ ಅಥವಾ ಸ್ಟೀವ್ ವಾ ಅವರಂತೆ ಆಗಬೇಕೆಂಬ ಹಂಬಲವನ್ನು ತೊರೆದರು. ಯಾವಾಗಲೂ ವೈಯಕ್ತಿಕ ಹಿತವನ್ನು ಬದಿಗಿಟ್ಟು, ತಂಡದ ಹಿತವನ್ನು ಮುಂಚೂಣಿಯಲ್ಲಿರಿಸಿದರು. ಇದರಿಂದ ತಮ್ಮ ಮುಂದಿರುವ ಆಯ್ಕೆಗಳಲ್ಲಿ ಸಂದರ್ಭೋಚಿತವಾದುದನ್ನೇ ಆರಿಸಿ, ಕಾರ್ಯಗತಗೊಳಿಸುವುದರಲ್ಲಿ ಕುಶಲರಾದರು.

ಇದು ಜೀವನದ ಸಮತೋಲನವನ್ನು ಕಾಯ್ದುಕೊಂಡು, ಪ್ರತಿ ಕ್ಷಣವೂ ನೀಡಬಹುದಾದ ಆನಂದದ ಪರಾಕಾಷ್ಠತೆಯನ್ನು ಅನುಭವಿಸುವ ಸುಲಭ ಮಾರ್ಗವಲ್ಲದೆ ಮತ್ತೇನು? ಖುಷಿ ಬಾಬಾರ ಜೆನ್ ಮಾದರಿಯ ಸಂದೇಶವು ಧೋನಿಯ ಮೇಲೆ ಸ್ವ-ಅರಿವಿನ ಗಾಢ ಪರಿಣಾಮವನ್ನು ಬೀರಿತ್ತು."

ಹತಾಶೆಯಿಂದ ಕಂಗೆಟ್ಟಿದ್ದರೂ ಸುಸ್ವಾಸನು ಬಹು ಬೇಗನೆ ಮರುದಿನ ಬೆಳಗ್ಗೆ ಪುನಃ ಟೆಲಿಪುರಮ್ಮಿಗೆ ಹೊರಡಲು ಅಣಿಯಾಗಬೇಕಾದ ವಾಸ್ತವಿಕತೆಯನ್ನು ಸ್ವೀಕರಿಸಲು ಸಮರ್ಥನಾದ.


*******************************************
ಸೂಚನೆ : ಕ್ರಿಕೆಟ್ ಆಟಗಾರರ ಹೆಸರನ್ನು ಕಥೆಗೆ ಸೂಕ್ತವಾದ ನೆಲೆಗಟ್ಟನ್ನು ಒದಗಿಸುವುದಕ್ಕೋಸ್ಕರ ಬಳಸಲಾಗಿದೆ. ಅನ್ಯಥಾ ಕಥೆಯು ಒಂದು ಕಾಲ್ಪನಿಕ ಕೃತಿ.

______________________________________________________________________________

ಗುರುವಾರ, ನವೆಂಬರ್ 13, 2008

ನೆಹರು

ನೆಹರು
ಇವರ ತಾಯಿ ತಂದೆ ಸ್ವರೂಪ ಮತ್ತು ಮೋತಿಲಾಲ ನೆಹರು
ಹುಟ್ಟಿನಿಂದಲೇ ಆಗರ್ಭ ಶ್ರೀಮಂತರು
ಆದರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು
ಸ್ವತಂತ್ರ ಭಾರತದ ಚೊಚ್ಚಲ ಪ್ರಧಾನಿ ಇವರು
ನವ್ಯ ಭವ್ಯ ಭಾರತಕ್ಕೆ ಭದ್ರ ಬುನಾದಿ ಹಾಕಿದರು
ಮಕ್ಕಳೆಂದರೆ ಬಹು ಅಕ್ಕರೆ ತೋರುತ್ತಿದ್ದರು
ಅವರಿಗೆಲ್ಲಾ ಆಗಿದ್ದರು ಪ್ರೀತಿಯ ಚಾಚಾ ನೆಹರು.
____________________________________________________________________

ಶನಿವಾರ, ನವೆಂಬರ್ 8, 2008

ಸ್ವಾರ್ಥದಿಂದ ಪರಮಾರ್ಥದೆಡೆಗೆ

ಮುಕ್ತಿ ಮೋಕ್ಷಗಳ ಪಡೆಯಲು ಕಾತುರರಾಗಿದ್ದೀರಿ
ಆದರೆ ಯಾವ ಮಾರ್ಗ ಹಿಡಿಯಬೇಕೆಂದು ಚಿಂತಾಕ್ರಾಂತರಾಗಿದ್ದೀರಿ
ಇದಕ್ಕೆ ಸ್ವಾರ್ಥದಿಂದ ಪರಮಾರ್ಥದೆಡೆಗೆ ಹೋಗುವುದೊಂದೇ ದಾರಿ
ಆದರಿದು ಯುಗ ಯುಗಗಳಿಂದಲೂ ಕೇಳಿದಂತಿದೆ ಬಾರಿ ಬಾರಿ ?

ಸ್ವಾರ್ಥ ಪರಮಾರ್ಥಗಳ ಸರಿಯಾದ ಅರ್ಥ ತಿಳಿಯಿರಿ
ಆಗ ನೋಡಿ, ಮೋಕ್ಷ ಸಿಗುವುದು ಬಹಳ ಸುಲಭ ರೀ...
ಸ್ವಾರ್ಥ ಪರಮಾರ್ಥಗಳೆರಡರಲ್ಲೂ 'ಅರ್ಥ' ಸಾಮಾನ್ಯ ರೀ...
'ಅರ್ಥ' ಅಂದರೆ ಹಣವಲ್ಲೇನ್ರಿ... ?

ಸ್ವಾರ್ಥ : ಕೇವಲ ಸ್ವಂತಕ್ಕೋಸ್ಕರ ಹಣ ಗಳಿಸಿದಿರಿ, ಬಳಸಿದಿರಿ
ಪರರ ಒಳಿತು ಕೆಡಕುಗಳನ್ನು ಎಣಿಸದೇನೇರೀ ...
ಪರಮಾರ್ಥ : ಸ್ವಂತಕ್ಕೂ ಪರರಿಗೂ ಹಣ ಗಳಿಸಿದಿರಿ, ಬಳಸಿದಿರಿ
ಆದರೂ ಯಾರ ಹಿತಕ್ಕೂ ಧಕ್ಕೆ ಬರಲಿಲ್ಲ ರೀ...

ಆದ್ದರಿಂದ ಹಣವನ್ನು ಗಳಿಸುತ್ತಿರುವ, ಬಳಸುತ್ತಿರುವ ಬಗೆಯನ್ನು ಪರಾಮರ್ಶಿಸಿರಿ
ನಿಮ್ಮ ನಡೆ ನುಡಿ ಆಚಾರ ವಿಚಾರಗಳಲ್ಲಿ ಉತ್ತಮ ಸುಧಾರಣೆ ಕಾಣುತ್ತೀರಿ
ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದದಿಂದ ಕಳೆಯಲು ಆರಂಭಿಸುತ್ತೀರಿ
ಮುಕ್ತಿ ಮೋಕ್ಷಗಳ ಗೀಳಿಗೆ ಗತಿ ಕಾಣಿಸುತ್ತೀರಿ.
_________________________________________________________________________________________