ಭಾನುವಾರ, ಡಿಸೆಂಬರ್ 21, 2008

ಸುಸ್ವಾಸ ಮತ್ತು ಟೆಲಿಫೋನ್ - 4

ಇದುವರೆಗೆ: ಸುಸ್ವಾಸ ಒಬ್ಬ ಆಲಸಿ ಆದರೆ ತುಂಬಾ ವಿವೇಚನೆಯುಳ್ಳ ಮನುಷ್ಯ. ಅವನು ಮಧ್ಯಾಹ್ನ ಕಂಡ ಕನಸಿನಲ್ಲಿ ಮಂಜಿನ ಮನುಷ್ಯನು ಹಳೇ ಮಾದರಿಯ ಕಪ್ಪು ಟೆಲಿಫೋನನ್ನು ತೋರಿಸಿ ಸುಸ್ವಾಸನನ್ನು ಕುರಿತು "ಇದನ್ನು ನಿನ್ನ ಮನೆಯ ಲಿವಿಂಗ್ ರೂಮಿನ ಈಶಾನ್ಯ ದಿಕ್ಕಿನಲ್ಲಿ ಇರಿಸಿದರೆ, ಸಕಲ ಸಂಪತ್ತು, ಮರ್ಯಾದೆಗಳು ನಿನ್ನ ನೆರಳಿನಂತೆ ಯಾವಾಗಲೂ ನಿನ್ನನ್ನು ಹಿಂಬಾಲಿಸುತ್ತವೆ" ಎಂದು ಹೇಳಿತು. ಆ ಟೆಲಿಫೋನು, ಮನೆಗೆ ಕರೆದೊಯ್ದು ಸ್ಥಾಪಿಸುವವರೆಗೂ ಮಾತನಾಡಬಾರದೆಂಬ ನಿಬಂಧನೆಯನ್ನು ವಿಧಿಸಿತ್ತು. ಕನಸಿನ ಪ್ರಕಾರವೇ ಟೆಲಿಪುರಮ್ಮಿನಲ್ಲಿ ಸಿಕ್ಕ ಟೆಲಿಫೋನು ಸುಸ್ವಾಸನ ನಂಬಿಕೆಯನ್ನು ಇಮ್ಮಡಿಗೊಳಿಸಿತು. ಮತ್ತು ಅದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸುವುದರಿಂದ ಸಕಲ ಸಂಪತ್ತು, ಮರ್ಯಾದೆಗಳು ದೊರೆಯುವ ಬಗ್ಗೆ ವಿಶ್ವಾಸವುಂಟಾಯಿತು. ಹೀಗಾಗಿ ಆ ಟೆಲಿಫೋನನ್ನು ಹೇಗಾದರೂ ಮನೆಗೆ ತರಲೇಬೇಕೆಂಬ ಧೃಡ ನಿರ್ಧಾರದೊಂದಿಗೆ ಪ್ರತಿ ದಿನ ಬೆಳಗ್ಗೆ ಟೆಲಿಪುರಮ್ಮಿಗೆ ಹೊರಡುತ್ತಿದ್ದನು.ಆದರೆ ಪ್ರತಿ ಬಾರಿಯೂ ಉಪಾಯದಿಂದ ಸುಸ್ವಾಸನು ಮಾತನಾಡುವಂತೆ ಮಾಡಿ, ಪುನಃ ಅದನ್ನು ಪಡೆಯಲು ಮಾರನೇ ದಿನದ ಸೂರ್ಯೋದಯದವರೆಗೂ ಕಾಯಬೇಕಾಗುತ್ತದೆಂದು ತಿಳಿಸಿ ಆ ಟೆಲಿಫೋನು ಮಾಯವಾಗಿ ಹೋಗುತ್ತಿತ್ತು.

ಕೊನೆಯ ಉಸಿರು

ಸುಸ್ವಾಸನು ಎಂದಿನಂತೆ ಅಂದು ಮುಂಜಾನೆ ಕೂಡ ಟೆಲಿಪುರಮ್ಮಿನತ್ತ ತನ್ನ ಕಾರನ್ನು ನಡೆಸತೊಡಗಿದ. ಅವನ ಮನಸ್ಸು ಹಿಂದಿನ ದಿನದ ಘಟನೆಯನ್ನು ಮೆಲಕು ಹಾಕುತ್ತಿತ್ತು. ಆ ದಿನ ಟೆಲಿಫೋನು ಮೊಟಕಾದ ಕಥೆ ಹೇಳಿದ್ದರಿಂದ, ಕಥೆ ಮುಗಿಯುವ ಮೊದಲೇ ಮನೆ ತಲುಪಿ ಮಾತನಾಡುವುದನ್ನು ತಪ್ಪಿಸಿಕೊಳ್ಳಬೇಕೆಂಬ ಅವನ ಉಪಾಯ ಫಲಿಸಲಿಲ್ಲ. ಸುಸ್ವಾಸನ ಮನಸ್ಸು ಈ ತುಮುಲದಲ್ಲಿರುವಾಗಲೇ, ಮತ್ತೊಂದು ಉಪಾಯಕ್ಕೆ ನಾಂದಿ ಹಾಡಿತು.

ಕಥೆ ಮತ್ತು ಅದರ ಅವಧಿಯನ್ನು ಮೊದಲೇ ತಿಳಿದುಕೊಳ್ಳಬಹುದಾದರೆ, ಕಥೆ ಮುಗಿಯುವ ಮುನ್ನವೇ ಮನೆ ತಲುಪಿ ಮಾತನಾಡುವುದನ್ನು ತಪ್ಪಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಅದರಂತೆ ಸರಸರನೆ ಮೊಬೈಲನ್ನು ತೆಗೆದು 'ನೇಚರ್' ಎಂದು 464 ಕ್ಕೆ ಎಸ್ ಎಂ ಎಸ್ ಕಳುಹಿಸಿದ. ಕೊಡಲೇ ಬೀಪ್ ಸದ್ದು ಮಾಡಿದ ಮೊಬೈಲಿನ ಫಲಕದಲ್ಲಿ "ಸಂದೇಶ ರವಾನೆಯಾಗಿಲ್ಲ, ನಂತರ ಪ್ರಯತ್ನಿಸಿ" ಎಂದು ಮೂಡಿತು. ಹಲವಾರು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲವಾದುದರಿಂದ ಸುಸ್ವಾಸನಿಗೆ ನಿರಾಶೆಯಾಯಿತು. ಅಷ್ಟರಲ್ಲೇ ಟೆಲಿಪುರಮ್ಮಿನ ಪಾಳು ಜಾಗಕ್ಕೆ ಬಂದು ತಲುಪಿದ. ಅಲ್ಲಿದ್ದ ಕಪ್ಪು ಟೆಲಿಫೋನನ್ನು ತನ್ನ ಕಾರಿನಲ್ಲಿರಿಸಿ ಮನೆ ಕಡೆ ಮರಳಲು ಅಣಿಯಾದ.

ಎಂದಿನಂತೆ 'ಟ್ರಿಣ್, ಟ್ರಿಣ್, ಟ್ರಿಣ್' ಸದ್ದು ಕಪ್ಪು ಟೆಲಿಫೋನಿನಿಂದ ಹೊರಟಿತಾದರೂ ಅದರ ನಾದದಲ್ಲಿ ಕೊಂಚ ಬದಲಾವಣೆ ಇರುವಂತೆ ಸುಸ್ವಾಸನಿಗೆ ಅನಿಸಿತು. ಅದೇ ವೇಳೆಗೆ ಗಡಸಾದ ಧ್ವನಿಯು "ಸುಸ್ವಾಸ, ಕೇವಲ ನನ್ನ ಉಪಸ್ಥಿತಿಯಲ್ಲಿ ಮಾತ್ರ 464 ಕ್ಕೆ ಎಸ್ ಎಂ ಎಸ್ ಕಳುಹಿಸಬಹುದು" ಎಂದಿತು.
ತನ್ನ ಆಲೋಚನೆಗಳನ್ನೆಲ್ಲಾ ಸೆರೆ ಹಿಡಿಯುವ ಟೆಲಿಫೋನಿನ ಬಗ್ಗೆ ಸುಸ್ವಾಸನಿಗೆ ಅಚ್ಚರಿಯುಂಟಾಯಿತು. ಹಾಗೇ "ಇಂದು ಕೂಡ ಟೆಲಿಫೋನನ್ನು ಮನೆಯಲ್ಲಿ ಸ್ಥಾಪಿಸುವಲ್ಲಿ ವಿಫಲನಾಗುವೆ" ಎಂಬ ವಿಚಾರ ಸುಳಿಯಿತು. ಅದೇ ಸಮಯಕ್ಕೆ ಗಡಸಾದ ಧ್ವನಿಯು ತನ್ನ ಮಾತನ್ನು ಮುಂದುವರೆಸುತ್ತ " ಸುಸ್ವಾಸ ನೀನೊಬ್ಬ ವಿವೇಚನೆಯುಳ್ಳ ವ್ಯಕ್ತಿ, ಆದರೂ ನನ್ನನ್ನು ಎಮಾರಿಸುವ ಬಗ್ಗೆ ಆಲೋಚನೆ ಮಾಡಿದ್ದೀಯ. ಹೀಗಾಗಿ ಇಂದು ನನ್ನ ಕಟ್ಟಳೆಯನ್ನು ಬದಲಾಯಿಸುತ್ತಿದ್ದೇನೆ..."

ಇದನ್ನು ಕೇಳಿದ ಸುಸ್ವಾಸನಿಗೆ, ಅವನ ಉಸಿರು ಕಟ್ಟ ಕಡೆಯ ಬಾರಿಗೆ ಹೊರಗೆ ಹೋಗುತ್ತಿದೆ ಎನಿಸಿತು ! ಆದರೂ ಸಾವರಿಸಿಕೊಂಡ ಸುಸ್ವಾಸನು ಗಡಸಾದ ಧ್ವನಿಯು ಮುಂದುವರೆಸುತ್ತಿದ್ದ ಮಾತನ್ನು ಆಲಿಸತೊಡಗಿದನು.

"ಪ್ರತಿ ಸಲ ನೀನು ಮೌನವಾಗಿ ಕಥೆಯನ್ನು ಕೇಳಬೇಕಾಗಿತ್ತಲ್ಲವೇ , ಆದರೆ ಇಂದು ನೀನು ಮಾತನಾಡಬೇಕು. ಉಸಿರಿನ ಬಗ್ಗೆ ನೀನು ಹೇಳಬಲ್ಲೆಯಾದರೆ ನನ್ನನ್ನು ಮನೆಗೆ ಕರೆದೊಯ್ಯಬಹುದು!" ಎನ್ನುತ್ತಾ ಕಪ್ಪು ಟೆಲಿಫೋನು ಮಾತನ್ನು ಮುಗಿಸಿತು. ಸುಸ್ವಾಸನಿಗೆ ತಿರುಗಿ ಬರದಂತೆ ಹೊರಟಿದ್ದ ಉಸಿರು ಪುನಃ ಬಂದಂತೆ ಅನಿಸಿತು. ದೀರ್ಘವಾಗಿ ಎಳೆದುಕೊಂಡ ಶ್ವಾಸವು ಸುಸ್ವಾಸನ ಶರೀರಕ್ಕೆ ಚೇತರಿಕೆಯನ್ನು ಮತ್ತು ಮನಸ್ಸಿಗೆ ಉಲ್ಲಾಸವನ್ನು ತಂದಿತು.

ಉಸಿರಿನ ಬಗ್ಗೆ ಸುಸ್ವಾಸನು ಮಾತನಾಡತೊಡಗಿದ.

"ಉಸಿರೇ ಜೀವ, ಜೀವನ. ಮೊಟ್ಟ ಮೊದಲ ಬಾರಿಗೆ ಒಳಗೆಳೆದುಕೊಂಡ ಉಸಿರು ಮತ್ತು ಕಟ್ಟ ಕಡೆಯ ಬಾರಿಗೆ ಹೊರಬಿಡುವ ಉಸಿರು ನಮ್ಮ ಬದುಕೆಂಬ ಪ್ರಯಾಣದ ಆದಿ, ಅಂತ್ಯಗಳನ್ನು ಪ್ರತಿನಿಧಿಸುತ್ತವೆ. ಈ ಮಧ್ಯೆ ಸಾಗುವ ಜೀವ, ಜೀವನಕ್ಕೆ ನಿರಂತರವಾಗಿ ಒಳಕ್ಕೆ ಮತ್ತು ಹೊರಗೆ ಹೋಗುವ ಉಸಿರಿನ ಪ್ರಕ್ರಿಯೆ ಅತಿ ಅವಶ್ಯ. ಹೀಗಾಗಿ ಒಮ್ಮೆ ಒಳಕ್ಕೆ ತೆಗೆದುಕೊಂಡ ಉಸಿರು ಕೆಲ ಕ್ಷಣಗಳವರೆಗೆ ನಿಂತರೂ, ಪುನಃ ಹೊರಕ್ಕೆ ಹೋಗಲೇಬೇಕು. ಮತ್ತು ಹೊರಕ್ಕೆ ಹೋಗಿದ್ದು ಒಳಕ್ಕೆ ಬರಲೇ ಬೇಕು. ನಮ್ಮ ಜೀವನದಲ್ಲಿ ಜರಗುವ ಘಟನೆಗಳೂ ಇದೇ ರೀತಿಯಾಗಿ ಬರುತ್ತವೆ, ಕೆಲ ಕಾಲ ನಮ್ಮೊಂದಿಗಿದ್ದು ಹೊರಟು ಹೋಗುತ್ತವೆ. ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ, ನಮ್ಮ ಉಸಿರು ಸಂಪೂರ್ಣವಾಗಿ ನಿಲ್ಲುವವರೆಗೆ!


ಈ ಘಟನೆಗಳನ್ನು ನಾವು ಸಂತೋಷಪೂರ್ಣ, ದುಃಖದಾಯಕ, ಉಲ್ಲಾಸಭರಿತ, ನೀರಸ, ಕಿರಿಕಿರಿ, ವ್ಯಾಕುಲತೆಯಿಂದ ಕೂಡಿದ, ಸಹಿಸಲಾಧ್ಯ, ಉತ್ಸಾಹಭರಿತ ಹೀಗೆ ಅರ್ಥೈಸುತ್ತೇವೆ, ಹಣೆಪಟ್ಟಿಯನ್ನು ಲಗತ್ತಿಸುತ್ತೇವೆ. ಆದರೆ ಎಲ್ಲಾ ಘಟನೆಗಳೂ ನಮ್ಮ ಉಸಿರಿನಂತೆ ಯಾವುದೇ ಹಣೆಪಟ್ಟಿಗೆ ಸೇರಿದ್ದರೂ, ಬರುತ್ತವೆ, ಕೆಲ ಹೊತ್ತು ನಿಲ್ಲುತ್ತವೆ ಮತ್ತು ಹಾಗೇ ಹೊರಟು ಹೋಗುತ್ತವೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವ ಮೊದಲು ಹೊರಹಾಕಲ್ಪಟ್ಟಿರುತ್ತದೆ.
ಹಾಗೆಯೇ ಘಟನೆಯ ಸರಮಾಲೆಗಳು ಬಂದು ಹೋಗುತ್ತಿರುತ್ತವೆ.
ಆದ್ದರಿಂದ ಈ ಕಷ್ಟ , ಸುಖ, ದುಃಖ, ಮಣ್ಣು ಮಸಿ ಎನ್ನುತ್ತಾ ಮನಸ್ಸಿಗೆ ಹಚ್ಚಿಕೊಳ್ಳದೆ ನಮ್ಮ ಜೀವನವನ್ನು ಪರಿಪೂರ್ಣವಾಗಿ ಅನುಭವಿಸುವುದೇ ಉತ್ತಮ.


ಉಸಿರಾಟದ ಪ್ರಕ್ರಿಯೆಯನ್ನು ಗಮನಿಸಿದಾಗ ನಮಗೆ ತಿಳಿಯುವ ಅಂಶವೆಂದರೆ - ನಾವು ತೆಗೆದುಕೊಳ್ಳುವ ಗಾಳಿಯು ಆಮ್ಲಜನಕ, ಸಾರಜನಕ, ಇಂಗಾಲದ ಡೈ ಆಕ್ಸೈಡ್, ನೀರಾವಿ ಮತ್ತು ಕಲ್ಮಶಗಳ ಮಿಶ್ರಣ. ಇಷ್ಟಾದರೂ ಶರೀರವು ಅವಶ್ಯಕವಾದ ಆಮ್ಲಜನಕವನ್ನು ಮಾತ್ರ ಹೀರಿಕೊಳ್ಳುತ್ತದೆ.

ಜೀವನದಲ್ಲಿ ಸಂಭವಿಸುವ ಘಟನೆಗಳು ಕೂಡ ಅನೇಕ ವಿಚಾರಗಳ ಮತ್ತು ಸನ್ನಿವೇಶಗಳ ಮಿಶ್ರಣ. ಅವುಗಳಲ್ಲಿ ಕೆಲವು ಇಷ್ಟವಾದರೆ, ಹಲವು ಅನಿಷ್ಟವೆನಿಸುತ್ತವೆ. ಕೆಲವುಗಳ ಜೊತೆ ಸದಾ ಇರಲು ಇಚ್ಚಿಸುತ್ತೇವೆ, ಮತ್ತೆ ಕೆಲವುದರಿಂದ ದೂರವಿರಲು ಹವಣಿಸುತ್ತೇವೆ. ಮೊಟ್ಟ ಮೊದಲು ಒಳಗೆ ತೆಗೆದುಕೊಳ್ಳುವ ಉಸಿರು ಮತ್ತು ಕಟ್ಟ ಕಡೆಯದಾಗಿ ಹೊರಹಾಕುವ ಉಸಿರಿನ ನಡುವಿನ ಜೀವನದ ಪ್ರಯಾಣಕ್ಕೆ ನಿರಂತರ ಉಸಿರಾಟವು ಹೇಗೆ ಅವಶ್ಯಕವೋ, ಜೀವನದ ಪರಿಪೂರ್ಣತೆಯನ್ನು ಅನುಭವಿಸಲು ಆಯಾ ಕ್ಷಣದಲ್ಲಿ ಸಂಭವಿಸುತ್ತಿರುವ ಪ್ರತಿಯೊಂದು ಘಟನೆಗಳ ಸಂಪೂರ್ಣ ಸ್ವೀಕೃತಿ, ತದನಂತರ ಅವುಗಳಿಂದ ವಿಮುಖವಾಗುವ ಪ್ರವೃತ್ತಿಯೂ ಮಹತ್ವವಾದುದು.

ಆದ್ದರಿಂದ ಉಸಿರಾಟದ ಅರಿವೇ ಜೀವನದ ಪರಿಪೂರ್ಣತೆಯನ್ನು ಅನುಭವಿಸುವ ಮಾರ್ಗ ಸೂಚಕ. ಇದೇ ಕಾರಣಕ್ಕಾಗಿ ಪ್ರಾಚೀನ ಕಾಲದಿಂದಲೂ ನಮ್ಮ ಋಷಿ ಮುನಿಗಳು, ಹಾಗು ಆಧುನಿಕ ಯುಗದ ಗುರುವರ್ಯರು ಧ್ಯಾನದ ವೇಳೆಯಲ್ಲಿ ಉಸಿರಾಟದ ಕಡೆ ಗಮನ ಹರಿಸುವ ಬಗ್ಗೆ ಪ್ರಾಮುಖ್ಯತೆ ನೀಡಿದ್ದಾರೆ."

ಸುಸ್ವಾಸನು ಇಷ್ಟನ್ನು ಹೇಳಿ ಮುಗಿಸಿದ ನಂತರ, ಅವನ ಮನೆ ತಲಪುವವರೆಗೂ ಮೌನ ಆವರಿಸಿತ್ತು.

ಮನೆಯ ಮುಂದೆ ಕಾರನ್ನು ನಿಲ್ಲಿಸುತ್ತಿದ್ದಂತೆಯೇ, ಸುಸ್ವಾಸನು ಕಪ್ಪು ಟೆಲಿಫೋನನ್ನು ಹಿಡಿದು ತನ್ನ ಮನೆಯ ಈಶಾನ್ಯ ದಿಕ್ಕಿನಲ್ಲಿರುವ ರೂಮಿನತ್ತ ಧಾವಿಸಿದ. ಅಲ್ಲಿದ್ದ ಮೇಜಿನ ಮೇಲೆ ಟೆಲಿಫೋನನ್ನು ಇಟ್ಟು ಬಳಿಯಲ್ಲಿದ್ದ ಆಸನದಲ್ಲಿ ಹಾಗೇ ಕಣ್ಣು ಮುಚ್ಚಿ ಕುಳಿತುಕೊಂಡನು. ತಾನಿನ್ನು ಸುಖ ಸಂಪತ್ತುಗಳ ಸರದಾರನೆಂದು ಅರಿಯಲು ಸುಸ್ವಾಸನಿಗೆ ಕೆಲವು ಕ್ಷಣಗಳೇ ಬೇಕಾಯಿತು. ನಿಧಾನವಾಗಿ ತೆರೆದ ಕಣ್ಣುಗಳನ್ನು ಫೋನಿನತ್ತ ಹಾಯಿಸಿದ ಸುಸ್ವಾಸನಿಗೆ ಭಯ ಆಶ್ಚರ್ಯಗಳು ಒಟ್ಟಿಗೆ ಉಂಟಾದವು.

ಸುಸ್ವಾಸನಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಆ ಕಪ್ಪು ಟೆಲಿಫೋನು, ಮಂಜಿನ ಮನುಷ್ಯನಾಗಿ ರೂಪಾಂತರ ಹೊಂದಿತ್ತು. ಕಣ್ಣುಗಳ ರೆಪ್ಪೆ ಮಿಟುಕಿಸದಂತೆ ದಿಟ್ಟಿಸಿ ನೋಡುತ್ತಿದ್ದ ಸುಸ್ವಾಸನ್ನು ಕುರಿತು ಆ ಮಂಜಿನ ಮನುಷ್ಯ ಮಾತನಾಡತೊಡಗಿತು - " ಸುಸ್ವಾಸ ನಾನಿನ್ನು ಇಲ್ಲಿ ಇರುವ ಅವಶ್ಯಕತೆಯೇ ಇಲ್ಲ! ನೀನು ನಿಜವಾಗಿಯೂ ತುಂಬಾ ವಿವೇಚನೆಯುಳ್ಳ ಮನುಷ್ಯ. ನೀನು ಪ್ರತಿ ಕಥೆಯ ಕೊನೆಯಲ್ಲಿ ನೀಡುತ್ತಿದ್ದ ಉತ್ತರಗಳೇ ಅದಕ್ಕೆ ಸಾಕ್ಷಿ. ನೀನು ತಿಳಿದುಕೊಂಡಿರುವ ವಿಚಾರ ಸರಣಿಯ ಹುಟ್ಟು ಮತ್ತು ಅವುಗಳು ಸಾಗುವ ಪರಿ, ಅತ್ಯಮೂಲ್ಯ ಸಂಪನ್ಮೂಲವಾದ ವೇಳೆಯನ್ನು ಬಳಸಿಕೊಳ್ಳುವ ಬಗೆ, ಏರು ಪೇರಿನ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವ ರೀತಿಗಳೇ ನಿನ್ನ ಕೊನೆಯ ಉಸಿರು ಹೊರ ಹೋಗುವವರೆಗೆ ಜೀವನ ಪ್ರಯಾಣದ ಪ್ರತಿ ಕ್ಷಣವನ್ನು ಸುಖ, ಶಾಂತಿ ಮತ್ತು ಸಂಭ್ರಮಗಳಿಂದ ಅನುಭವಿಸಲು ಮಾರ್ಗ ತೋರುತ್ತವೆ. ಮತ್ತೊಂದು ಮುಖ್ಯವಾಗಿ ಅರಿಯಬೇಕಾದ ವಿಚಾರವೆಂದರೆ ಜೀವನ ಪ್ರಯಾಣದಲ್ಲಿ ಆಗಾಗ ಬರುವ ಪ್ರತಿ ನಿಲುಗಡೆಯು ಕವಲುದಾರಿಯ ನಡುವೆಯೇ! ಆದರೆ ಎಲ್ಲಾ ಹಾದಿಗಳು ಗಮ್ಯ ಸ್ಥಾನವನ್ನೇ (destination) ಸೇರುತ್ತವೆ. ಆದ್ದರಿಂದ ಜೀವನ ಪ್ರಯಾಣದಲ್ಲಿ ನಿಲುಗಡೆ ಕಂಡಾಗ ನಮಗೆ ಹಿತವೆನಿಸುವ ಹಾದಿಯನ್ನು ಆಯ್ದು ಪ್ರಯಾಣವನ್ನು ಮುಂದುವರೆಸುವುದೇ ಸುಖ, ಸಂತೋಷಗಳ ಸಿರಿತನದ ತಿಜೋರಿಯ ಕೀಲಿಕೈ.


ಅಂತಿಮವಾಗಿ ನೀನು ಎಸ್ ಎಂ ಎಸ್ ಮಾಡುತ್ತಿದ್ದ 464 ನಂಬರಿನ ರಹಸ್ಯವನ್ನು ಕೇಳು. 'ನಾಕು ಆರು ನಾಕು' ನಾಕ ಮತ್ತು ನರಕದೊಂದಿಗೆ ಪ್ರಾಸಬದ್ಧವಾಗಿದೆ. ಅದು ಸ್ವರ್ಗ ಮತ್ತು ನರಕವನ್ನು ಸಂಪರ್ಕಿಸಲು ಇರುವ ಏಕ ಮಾತ್ರ ದೂರವಾಣಿ ಸಂಖ್ಯೆ. ಅಂದರೆ ಸ್ವರ್ಗ ನರಕಗಳೆರಡನ್ನೂ ನಾವು ಇಲ್ಲಿಯೇ ಜೀವನ ಪ್ರಯಾಣದಲ್ಲಿ ಅನುಭವಿಸುತ್ತೇವೆ. ಇದು ಮೊದಲ ಮತ್ತು ಕೊನೆಯ ಉಸಿರಿನ ನಡುವೆ ನಡೆಯುವ ನಿರಂತರ ಉಸಿರಾಟದಷ್ಟೇ ಸಹಜ.

ಇನ್ನು ಮೇಲೆ ವಾಸ್ತು, ಫೆಂಗ್ ಶುಯಿಗಳ ಗೋಜನ್ನು ಬಿಡು. ಜನಪ್ರಿಯವಾಗಿರುವ ಇಂತಹ ಇನ್ನೂ ಅನೇಕ ಮತಿಹೀನ ಆಚರಣೆಗಳಿವೆ. ಅವುಗಳ ಗೋಜೆಲ್ಲ ನಿನಗೇಕೆ? ನೀನು ಮಾತ್ರ ಕೀರ್ತಿ ಸಂಪತ್ತುಗಳ ಬೆನ್ನು ಹತ್ತುವುದನ್ನು ಬಿಟ್ಟು ಪ್ರಕೃತಿಯ ನಿನ್ನ ಸ್ವಂತ ಪ್ರಕೃತಿಯ ಬಗ್ಗೆ ಅರಿತು ನಿರಾಳವಾದರೆ, ಕೀರ್ತಿ ಸಂಪತ್ತುಗಳು ನಿನ್ನನ್ನೇ ಅರಸಿ ಬರುತ್ತವೆ!" ಇಷ್ಟು ಹೇಳಿದ ಮಂಜಿನ ಮನುಷ್ಯ ಸಣ್ಣ ಸುಂಟರಗಾಳಿಯಂತೆ ತಿರುಗುತ್ತಾ ಸುಸ್ವಾಸನತ್ತ ಧಾವಿಸತೊಡಗಿತು. ಅದನ್ನೇ ದಿಟ್ಟಿಸಿ ನೋಡುತ್ತಿದ್ದ ಸುಸ್ವಾಸ ಕಣ್ಣು ಮುಚ್ಚಿ ಬಾಗಿದ. ಅಷ್ಟರಲ್ಲೇ ಗರಗರನೆ ಸುತ್ತುತ್ತಿದ್ದ ಮಂಜು ಸುಸ್ವಾಸನ ಮುಖಕ್ಕೆ ರಪ್ಪನೆ ಅಪ್ಪಳಿಸಿತು.

ಮುಖದಿಂದ ಇಳಿಯುತ್ತಿದ್ದ ನೀರಿನ ಹನಿಗಳನ್ನು ಒರೆಸುತ್ತ ಕಣ್ಣು ಬಿಟ್ಟ ಸುಸ್ವಾಸ ಕಂಡದ್ದೇನು?

ಸುಸ್ವಾಸನ ಹೆಂಡತಿ ಮತ್ತು ಮಕ್ಕಳಿಬ್ಬರು, ಅವನು ಮಲಗಿದ್ದ ಬೆಂಚಿನ ಸುತ್ತಲು ನಿಂತು ಮುಖಕ್ಕೆ ನೀರನ್ನು ಚಿಮುಕಿಸುತ್ತಿದ್ದಾರೆ!

ಹೆಂಡತಿ : "ನಿಮ್ಮದೆಂತಹ ನಿದ್ದೆ, ಮೊಬೈಲು ಅಷ್ಟು ಜೋರಾಗಿ ರಿಂಗಾಗುತ್ತಿದ್ದರೂ ಎಚ್ಚರವಾಗಲಿಲ್ಲವೇ?"
ಮಕ್ಕಳು : "ಅಪ್ಪಾ, ನಾವು ಜೋಕಾಲಿ, ಜಾರುಬಂಡೆ ಮತ್ತೆ ಪಾರ್ಕಿನಲ್ಲಿರುವ ಎಲ್ಲವನ್ನೂ ಆಡಿ ಮುಗಿಸಿದ್ದೇವೆ. ನಮಗೆ ತುಂಬಾ ಹೊಟ್ಟೆ ಹಸಿಯುತ್ತಿದೆ, ಹೋಟೆಲಿಗೆ ಹೋಗೋಣ ಬಾ!"

ಸುಸ್ವಾಸನಿಗೆ ಆ ದಿನ ಮಧ್ಯಾಹ್ನ ಅಪರೂಪಕ್ಕೆ ಮಲಗಿ ದೀರ್ಘ ನಿದ್ದೆ ಮಾಡಿದ್ದರ ಬಗ್ಗೆ ವಿಷಾದವೆನಿಸಲಿಲ್ಲ.
ಏಕೆಂದರೆ ಅವನ ಎಚ್ಚರಿಕೆಯು ಈಗ ಸ್ವ-ಅರಿವಿನಿಂದ ಕೂಡಿತ್ತು!

_______________________________________________________________________________________

ಗುರುವಾರ, ನವೆಂಬರ್ 20, 2008

ಸುಸ್ವಾಸ ಮತ್ತು ಟೆಲಿಫೋನ್ - 3

ಇದುವರೆಗೆ: ಸುಸ್ವಾಸ ಒಬ್ಬ ಆಲಸಿ ಆದರೆ ತುಂಬಾ ವಿವೇಚನೆಯುಳ್ಳ ಮನುಷ್ಯ. ಅವನು ಮಧ್ಯಾಹ್ನ ಕಂಡ ಕನಸಿನಲ್ಲಿ ಮಂಜಿನ ಮನುಷ್ಯನು ಹಳೇ ಮಾದರಿಯ ಕಪ್ಪು ಟೆಲಿಫೋನನ್ನು ತೋರಿಸಿ ಸುಸ್ವಾಸನನ್ನು ಕುರಿತು "ಇದನ್ನು ನಿನ್ನ ಮನೆಯ ಲಿವಿಂಗ್ ರೂಮಿನ ಈಶಾನ್ಯ ದಿಕ್ಕಿನಲ್ಲಿ ಇರಿಸಿದರೆ, ಸಕಲ ಸಂಪತ್ತು, ಮರ್ಯಾದೆಗಳು ನಿನ್ನ ನೆರಳಿನಂತೆ ಯಾವಾಗಲೂ ನಿನ್ನನ್ನು ಹಿಂಬಾಲಿಸುತ್ತವೆ" ಎಂದು ಹೇಳಿತು. ಆ ಟೆಲಿಫೋನು, ಮನೆಗೆ ಕರೆದೊಯ್ದು ಸ್ಥಾಪಿಸುವವರೆಗೂ ಮಾತನಾಡಬಾರದೆಂಬ ನಿಬಂಧನೆಯನ್ನು ವಿಧಿಸಿತ್ತು. ಕನಸಿನ ಪ್ರಕಾರವೇ ಟೆಲಿಪುರಮ್ಮಿನಲ್ಲಿ ಸಿಕ್ಕ ಟೆಲಿಫೋನು ಸುಸ್ವಾಸನ ನಂಬಿಕೆಯನ್ನು ಇಮ್ಮಡಿಗೊಳಿಸಿತು. ಮತ್ತು ಅದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸುವುದರಿಂದ ಸಕಲ ಸಂಪತ್ತು, ಮರ್ಯಾದೆಗಳು ದೊರೆಯುವ ಬಗ್ಗೆ ವಿಶ್ವಾಸವುಂಟಾಯಿತು. ಹೀಗಾಗಿ ಆ ಟೆಲಿಫೋನನ್ನು ಹೇಗಾದರೂ ಮನೆಗೆ ತರಲೇಬೇಕೆಂಬ ಧೃಡ ನಿರ್ಧಾರದೊಂದಿಗೆ ಪ್ರತಿ ದಿನ ಬೆಳಗ್ಗೆ ಟೆಲಿಪುರಮ್ಮಿಗೆ ಹೊರಡುತ್ತಿದ್ದನು.
ಆದರೆ ಪ್ರತಿ ಬಾರಿಯೂ ಉಪಾಯದಿಂದ ಸುಸ್ವಾಸನು ಮಾತನಾಡುವಂತೆ ಮಾಡಿ, ಪುನಃ ಅದನ್ನು ಪಡೆಯಲು ಮಾರನೇ ದಿನದ ಸೂರ್ಯೋದಯದವರೆಗೂ ಕಾಯಬೇಕಾಗುತ್ತದೆಂದು ತಿಳಿಸಿ ಆ ಟೆಲಿಫೋನು ಮಾಯವಾಗಿ ಹೋಗುತ್ತಿತ್ತು.


ಧೋನಿಯ ಸಂದರ್ಶನ.

ಟೆಲಿಫೋನಿನ ವಿಧಾನವನ್ನರಿತ ಸುಸ್ವಾಸನು, ಅದನ್ನು ಏಮಾರಿಸಲು ಒಂದು ಉಪಾಯ ಹುಡುಕಿದ. ಅದರಂತೆ ಟೆಲಿಪುರಮ್ಮಿನ ಪಾಳು ಜಾಗಕ್ಕೆ ಸೂರ್ಯೋದಯಕ್ಕೆ ಮುಂಚೆಯೇ ಹೋದ. ಸೂರ್ಯನ ಪ್ರಥಮ ಕಿರಣಗಳು ಭೂಸ್ಪರ್ಶ ಮಾಡುತ್ತಿದ್ದಂತೆ ಕಪ್ಪು ಟೆಲಿಫೋನ್ ಕಾಣಿಸಿಕೊಂಡಿತು. ಕೂಡಲೇ ಅದನ್ನು ಎತ್ತಿಕೊಂಡು ತನ್ನ ಕಾರಿನ ಕಡೆ ನಡೆದನು. ಅವನೆಣಿಸಿದಂತೆ ಆ ನಸುಕಿನ ಮುಂಜಾನೆ ವಾಹನಗಳ ದಟ್ಟಣೆ ಅತಿ ವಿರಳವಾಗಿತ್ತು. ಸುಸ್ವಾಸನಿಗೆ ತನ್ನ ಯೋಜನೆ ಫಲಿಸುವ ಬಗ್ಗೆ ಖಾತ್ರಿಯಾಯಿತು. ಕಾರನ್ನು ವೇಗವಾಗಿ ನಡೆಸಿ ಟೆಲಿಫೋನಿನ ಕಥೆ ಮುಗಿಯುವ ಮೊದಲೇ ಮನೆ ಸೇರುವುದಾದರೆ ಮಾತನಾಡುವುದನ್ನು ತಪ್ಪಿಸಿಕೊಳ್ಳಬಹುದೆಂಬುದೇ ಅವನ ಉಪಾಯವಾಗಿತ್ತು. ಹೀಗಾಗಿ ಕಾರನ್ನು ವೇಗವಾಗಿ ನಡೆಸುವ ಕಡೆ ಗಮನ ಹರಿಸಿದ.

ಪ್ರತಿ ಸಲದಂತೆ ಟೆಲಿಫೋನಿನ ಟ್ರಿಣ್, ಟ್ರಿಣ್ ಕೇಳಿಸಿತು. ಯಥಾ ಪ್ರಕಾರ ಸುಸ್ವಾಸನು ಎಲ್ಲಾ ಆದೇಶಗಳನ್ನು ಸೂಕ್ತ ರೀತಿಯಲ್ಲಿ ಪಾಲಿಸಿ, ಕಿವಿಗೆ ಬ್ಲೂ ಟೂತ್ ಇಯರ್ ಫೋನನ್ನು ಸಿಗಿಸಿಕೊಂಡು, ಕಥೆಯನ್ನು ಕೇಳಲು ಸಿದ್ಧನಾದನು.

ಒಂದು ಭಾನುವಾರದ ಮುಂಜಾನೆ ಟಾಕ ಮತ್ತು ನಾಕ ಎಂಬ ದಂಪತಿಗಳು ಜೊತೆಯಾಗಿ ಟಿವಿ ನೋಡಲು ಕುಳಿತಿದ್ದರು. ಅಂದು ಅವರ ವಿವಾಹ ವಾರ್ಷಿಕೋತ್ಸವದ ದಿನ. ಆದ್ದರಿಂದ ಆ ದಿನವನ್ನು ಸ್ಮರಣೀಯವಾಗಿ ಕಳೆಯಲು ಒಡಂಬಡಿಕೆಯೊಂದನ್ನು ಮಾಡಿಕೊಂಡಿದ್ದರು. ಅದರಂತೆ ಅವರು ಆ ದಿನವನ್ನು ಯಾವುದೇ ವಿಷಯದ ಬಗ್ಗೆ ವಾದ ವಿವಾದ ಮಾಡದೇ ಕಳೆಯಬೇಕೆಂದು ನಿರ್ಧರಿಸಿದರು. ಹೀಗಾಗಿ ಟಿವಿ ರಿಮೋಟನ್ನು ಮುಟ್ಟದೆ, ಟಿವಿಯನ್ನು ಸ್ವಿಚ್ ಆನ್ ಮಾಡಿದಾಗ ಮೂಡಿದ ಚಾನೆಲ್ಲನ್ನೇ ನೋಡುತ್ತಿದ್ದರು. ಅಲ್ಲಿ ಧೋನಿಯ ಸಂದರ್ಶನವು ಪ್ರಸಾರವಾಗುತ್ತಿತ್ತು.

ಸಂದರ್ಶನಕಾರ : "ಸರ್, ನಿಮ್ಮ ಖ್ಯಾತಿ ಪರಾಕಾಷ್ಠತೆಯನ್ನು ತಲುಪಿ ಕಟ್ಟಾ ಅಭಿಮಾನಿಗಳ ದಂಡೇ ಸೃಷ್ಠಿಯಾಗಿದೆ. ರಾಷ್ಟ್ರಾಧ್ಯಕ್ಷರೊಬ್ಬರು ನಿಮ್ಮ ಉದ್ದನೆಯ ಕೂದಲಿನ ಬಗ್ಗೆ ಮೆಚ್ಚುಗೆ ಸೂಚಿಸಿದ ಸಮಯದಲ್ಲಿ ಅದೊಂದು ಫ್ಯಾಷನ್ನೇ ಆಯಿತು. ಇದೀಗ ನಿಮ್ಮ ಕತ್ತರಿಸಿದ ಕೂದಲು, ಎಲ್ಲರನ್ನು ಮಿಲಿಟರಿ ಕಟ್ ಗೆ ಹಾತೊರೆಯುವಂತೆ ಮಾಡುತ್ತಿದೆ. ಜಾಹೀರಾತಿನವರ ಗಮನ ಕೂಡ ನಿಮ್ಮ ತಲೆಕೂದಲಿನ ಮೇಲಿದೆ. ಈ ಖ್ಯಾತಿ, ಕೂಲಂಕೂಷವಾಗಿ ನಿಮ್ಮನ್ನು ಸದಾ ಅಳೆಯುವ ಪ್ರವೃತ್ತಿ, ನಾಯಕತ್ವದ ಜವಾಬ್ದಾರಿಗಳ ನಡುವೆ ನಿಮ್ಮ ಮನಸ್ಸಿನ ಪ್ರಶಾಂತತೆಯನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದೀರಿ? "

ಧೋನಿ : "ನೋಡಿ ನಿಮಗೇ ತಿಳಿದಂತೆ T-20 ವಿಶ್ವ ಕಪ್ ಗೆದ್ದಾಗ ಎಲ್ಲೆ ಮೀರಿದ ಕೊಂಡಾಡುವಿಕೆಯನ್ನು ಕಂಡ ನಾವು, ಅದಕ್ಕೂ ಮೊದಲು ವೆಸ್ಟ್ ಇಂಡೀಸಿನಲ್ಲಿ ನಡೆದ ಏಕ ದಿವಸೀಯ ವಿಶ್ವ ಕಪ್ ನ ಲೀಗ್ ಹಂತವನ್ನು ದಾಟಲಾಗದಿದ್ದಾಗ ಅತಿಯಾದ ತೆಗಳಿಕೆ ಮತ್ತು ಸ್ವಲ್ಪ ಮಟ್ಟಿನ ವೈಯಕ್ತಿಕ ಹಲ್ಲೆಯನ್ನು ಸಹಿಸಬೇಕಾಯಿತು. ಇಂತಹ ಏಳು ಬೀಳುಗಳ ವೈಪರಿತ್ಯದಿಂದ ಕೂಡಿದ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳಲು ನನ್ನ ಗುರುಗಳಾದ ಖುಷಿ ಬಾಬರ ಬಳಿಗೆ ಹೋಗಿದ್ದೆ. ಅದೊಂದು ಅಪೂರ್ವವಾದ ಅನುಭವ. ಅವರ ಕೊಠಡಿಯಲ್ಲಿ ಕಾಲಿಟ್ಟೊಡನೆಯೇ ಚಕಿತನಾದೆ. ಅತ್ಯಂತ ಸಾಧಾರಣವಾಗಿದ್ದ ಕೊಠಡಿಯು ಪಂಚತಾರಾ ಹೋಟೆಲಿನ ಕೊಠಡಿಯಂತೆ ರಾರಾಜಿಸುತ್ತಿತ್ತು. ಇದು ಹೇಗೆ ಎನ್ನುವ ವಿಚಾರ ಸುಳಿಯುತ್ತಿರುವಾಗಲೇ, ನನ್ನ ಮನವನ್ನರಿತ ಖುಷಿ ಬಾಬಾರು "ಈ ಪರಿವರ್ತನೆಗೆ ಕಾರಣ - ಅಖಿಲ ಭಾರತ ಕ್ಷೌರಿಕರ ಸಂಘದವರು ನೀಡಿದ ದೇಣಿಗೆ - ಎಂದು ನುಡಿದರು! ಹಾಗೆ ಮುಂದುವರೆಯುತ್ತಾ "ಆ ಸಂಘದ ಪದಾಧಿಕಾರಿಗಳ ಸಂತೋಷಕ್ಕೆ T-20 ವಿಶ್ವ ಕಪ್ ನ ಗೆಲುವಾಗಿದ್ದರೂ, ನಿನ್ನ ಕತ್ತರಿಸಿದ ಕೂದಲು ಅವರ ಸಂತೋಷವನ್ನು ನೂರ್ಮಡಿಗೊಳಿಸಿತ್ತು. ಇಲ್ಲಿ ನಿಜವಾಗಿ ಅರಿಯಬೇಕಾದ ಸಂಗತಿಯೆಂದರೆ, ನೀಳ ಕೇಶ ರಾಶಿ ಬಿಟ್ಟರೂ, ತದನಂತರ ಚಿಕ್ಕದಾಗಿ ಕತ್ತರಿಸಿಕೊಂಡರೂ ನಿನ್ನ ಅಭಿಮಾನಿಗಳಾರೂ ಧೋನಿಯಾಗಲಿಲ್ಲ. ಆದ್ದರಿಂದ ನೀನು ಮಾತ್ರ ಧೋನಿಯಾಗಿಯೇ ಇರು!" ಎಂದರು. ನಂತರ ನನ್ನ ಶಿರವನ್ನು ಸ್ಪರ್ಶಿಸಿ ಆಶೀರ್ವದಿಸಿದ ಖುಷಿ ಬಾಬಾರು ಮೌನ ತಾಳಿದರು. ಆಗ ನನ್ನ ಶರೀರದಲ್ಲಾದ ವಿಶಿಷ್ಟ ಶಕ್ತಿಯ ಸಂಚಲನೆಯು ನನ್ನ ಬಗ್ಗೆ ಅರಿವೊಂದನ್ನು ಮೂಡಿಸಿತು."

ಸಂದರ್ಶನಕಾರ : "ಒಂದು ಚಿಕ್ಕ ವಿರಾಮದ ಬಳಿಕ ಧೋನಿಯವರು ತಮ್ಮ ಅರಿವಿನ ಬಗ್ಗೆ ವಿವರಿಸುತ್ತಾರೆ. ಅಲ್ಲಿಯವರೆಗೆ ಬೇರೆಲ್ಲೂ ಹೋಗದಿರಿ!"

ಜಾಹೀರಾತುಗಳ ಪ್ರಸಾರ ಆರಂಭವಾಯಿತು.

ಟಾಕ ಮತ್ತು ನಾಕ ಅಭ್ಯಾಸ ಬಲದಿಂದ ಚಾನೆಲ್ ಸರ್ಫಿಂಗ್ ಮಾಡತೊಡಗಿದರು. ವಿವಿಧ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿದ್ದ ಮತ್ತಷ್ಟು ಜಾಹೀರಾತುಗಳು, ವಾರ್ತೆಗಳು, ಕ್ರಿಕೆಟ್ ಪಂದ್ಯದ ಮರುಪ್ರಸಾರ, ಪಾಕವಿಧಾನಗಳು ಹೀಗೆ ವಿವಿಧ ಕಾರ್ಯಕ್ರಮಗಳನ್ನು ನೋಡುತ್ತಾ, ನೋಡುತ್ತಾ ಪುನಃ ಧೋನಿಯ ಸಂದರ್ಶನ ಬರುತ್ತಿದ್ದ ಚಾನೆಲ್ಲಿಗೆ ಬಂದು ನಿಂತರು.

ಧೋನಿ ಮತ್ತು ಸಂದರ್ಶನಕಾರ ಪರಸ್ಪರ ಕೈ ಕುಲುಕುತ್ತಿರುವ ದೃಶ್ಯದೊಂದಿಗೆ ಕಾರ್ಯಕ್ರಮ ಮುಗಿದೇ ಹೋಯಿತು.

ಧೋನಿಯ ಅರಿವಿನ ಬಗ್ಗೆ ತಿಳಿಯಲು ಉತ್ಸುಕರಾಗಿದ್ದ ಟಾಕ ಮತ್ತು ನಾಕ ಅವರು ಚಾನೆಲ್ ಸರ್ಫಿಂಗ್ ನ ಅಭ್ಯಾಸ ಬಲದಿಂದಾಗಿ, ಸರಿಯಾದ ವೇಳೆಗೆ ಸಂದರ್ಶನ ಬಿತ್ತರಗೊಳ್ಳುತ್ತಿದ್ದ ಚಾನೆಲ್ಲಿಗೆ ಬರಲಾಗಲಿಲ್ಲ. ಅಂದು ಮುಂಜಾನೆ ಮಾಡಿಕೊಂಡಿದ್ದ ಒಡಂಬಡಿಕೆ ಮುರಿದು ಬಿತ್ತು. ಯಥಾ ಪ್ರಕಾರ ಒಬ್ಬರನ್ನೊಬ್ಬರು ನಿಂದಿಸತೊಡಗಿದರು.

"ನಿನ್ನೆ ರಾತ್ರಿಯೆಲ್ಲಾ ನಿದ್ದೆಗೆಟ್ಟು ನೋಡಿದ್ದ ಕ್ರಿಕೆಟ್ ಮ್ಯಾಚಿನ ಮರುಪ್ರಸಾರ ನೋಡುವ ಅಗತ್ಯ ನಿಮಗೇನಿತ್ತು?"

"ಓಹೋ! ನೀನು ಅದ್ಯಾವುದೋ ಹೊಸರುಚಿಯಲ್ಲಿ ಬಳಸಿದ ಪದಾರ್ಥಗಳ ಪಟ್ಟಿಗೋಸ್ಕರ ಕಾಯುತ್ತಾ ಕುಳಿತು, ಸಮಯ ಹಾಳು ಮಾಡಲ್ಲಿಲ್ಲವೇ? "

"ಇಲ್ಲ, ಇಲ್ಲ, ನೀವೇ ಆ ಕೆಲಸಕ್ಕೆ ಬಾರದ ವಾರ್ತೆಗಳನ್ನು ನೋಡುತ್ತಾ ಕುಳಿತಿದ್ದೇ ಕಾರಣ."

"ಅಯ್ಯೋ, ಬೇಡವೆಂದರೂ, ಇದು ಧಾರಾವಾಹಿಯ ಮುನ್ನೂರನೇ ಕಂತು, ಒಂಚೂರು ನೋಡಿಬಿಡೋಣ ಅಂತ ಹೇಳಿ ಸಮಯವನ್ನು ವ್ಯರ್ಥ ಮಾಡಲ್ಲಿಲ್ಲವೇ..."

ಇಷ್ಟು ಕಥೆಯ ನಂತರ ಒಂದೆರಡು ಕ್ಷಣಗಳಷ್ಟು ಕಾಲ ಮೌನವಾವರಿಸಿತು. ಹಿಂದೆಯೇ ಗಹಗಹಿಸಿ ನಗುವ ಸದ್ದು ಕೇಳಿಸಿತು. "ಸುಸ್ವಾಸ, ನನ್ನನ್ನು ಏಮಾರಿಸುವುದು ಸಾಧ್ಯವಾಗದ ಮಾತು. ಈಗ ನೀನು ಧೋನಿಯ ಅರಿವಿನ ಬಗ್ಗೆ ತಿಳಿಸಲೇಬೇಕು" ಎಂದು ಟೆಲಿಫೋನು ಹೇಳಿತು!

ಸುಸ್ವಾಸ ಬೆಚ್ಚಿಬಿದ್ದ. ಅವನ ಮನೆ ಇನ್ನೂ ಸುಮಾರು ಒಂದೂವರೆ ಕಿಲೋಮೀಟರುಗಳಷ್ಟು ದೂರದಲ್ಲಿತ್ತು. ಈ ಸಲದ ಕಥೆಯು ತುಂಬಾ ಚಿಕ್ಕದಾದುದರಿಂದ, ಅವನ ಯೋಜನೆ ಫಲಿಸಲಿಲ್ಲ. ಬೇರೆ ಮಾರ್ಗ ಕಾಣದ ಸುಸ್ವಾಸ ಮಾತನಾಡತೊಡಗಿದ.

"ಧೋನಿಯಂತೆ ಕಾಣಿಸಿಕೊಳ್ಳಬೇಕೆಂಬ ಒಂದೇ ಹಂಬಲದಿಂದ, ಮೊದಲು ಉದ್ದುದ್ದನೆಯ ಕೂದಲು ಬಿಟ್ಟಿದ್ದ ಅಭಿಮಾನಿಗಳು ನಂತರ ಚಿಕ್ಕದಾಗಿ ಕತ್ತರಿಸಿಕೊಳ್ಳಲು ನುಗ್ಗಿದರು. ಅದರಿಂದ ಅವರಲ್ಯಾರೂ ಧೋನಿಯಾಗಲಿಲ್ಲ, ಭವಿಷ್ಯದಲ್ಲೂ ಆಗುವ ಸಂಭವವೇ ಇಲ್ಲ. ಆದರೆ, ಅವರು ಕೈಕೊಂಡ ಕಾರ್ಯವು ಮತ್ತೊಬ್ಬರ ಮೇಲೆ ಪರಿಣಾಮ ಬೀರಿದ್ದವು. ಹಾಗಾಗಿ ನಾವು ಕೈಗೊಳ್ಳುವ ಪ್ರತಿ ಕಾರ್ಯವೂ ನಮ್ಮ ಸುತ್ತಲ ಪರಿಸರದ ಮೇಲೆ ಪರಿಣಾಮ ಬೀರುತ್ತದೆ.

ಖುಷಿ ಬಾಬಾರ ಚೆನ್ನಾದ ಈ ಉದಾಹರಣೆಯು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿರೋಧಾಭಾಸವನ್ನು ಎತ್ತಿ ತೋರಿಸುವುದಲ್ಲದೇ ಅದರ ನಿರ್ವಹಣೆಯ ಮಾರ್ಗದ ಮೇಲೂ ಬೆಳಕು ಚೆಲ್ಲುತ್ತದೆ. ಇದನ್ನು ಚೆನ್ನಾಗಿ ಅರಿತುಕೊಂಡ ಧೋನಿಯು ಮಾಧ್ಯಮದವರ, ಸ್ವಘೋಷಿತ ಕ್ರಿಕೆಟ್ ಪರಿಣಿತರ ಮತ್ತು ಅಭಿಮಾನಿಗಳ ಕಡೆಯಿಂದ ಮಹಾಪುರದಂತೆ ಬರುತ್ತಿದ್ದ ಸಲಹೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮದೇ ಆದ ಕಾರ್ಯನೀತಿಯನ್ನು ಅನುಸರಿಸಿದರು. ಬ್ಯಾಟಿಂಗ್ ಮಾಡುವಾಗ ಆಕ್ರಮಕ ಶೈಲಿ ಹೊಂದಿದ್ದ ಕಪಿಲ್ ಅಥವಾ ದಾಖಲೆಗಳ ವೀರ ಸಚಿನರಂತೆ ಆಗಬೇಕೆಂಬ ಚಪಲವಾಗಲಿ, ನಾಯಕತ್ವ ವಹಿಸುವಾಗ ಅತಿರಥ ಮಹಾರಥರಾದ ಗವಾಸ್ಕರ್ ಅಥವಾ ಸ್ಟೀವ್ ವಾ ಅವರಂತೆ ಆಗಬೇಕೆಂಬ ಹಂಬಲವನ್ನು ತೊರೆದರು. ಯಾವಾಗಲೂ ವೈಯಕ್ತಿಕ ಹಿತವನ್ನು ಬದಿಗಿಟ್ಟು, ತಂಡದ ಹಿತವನ್ನು ಮುಂಚೂಣಿಯಲ್ಲಿರಿಸಿದರು. ಇದರಿಂದ ತಮ್ಮ ಮುಂದಿರುವ ಆಯ್ಕೆಗಳಲ್ಲಿ ಸಂದರ್ಭೋಚಿತವಾದುದನ್ನೇ ಆರಿಸಿ, ಕಾರ್ಯಗತಗೊಳಿಸುವುದರಲ್ಲಿ ಕುಶಲರಾದರು.

ಇದು ಜೀವನದ ಸಮತೋಲನವನ್ನು ಕಾಯ್ದುಕೊಂಡು, ಪ್ರತಿ ಕ್ಷಣವೂ ನೀಡಬಹುದಾದ ಆನಂದದ ಪರಾಕಾಷ್ಠತೆಯನ್ನು ಅನುಭವಿಸುವ ಸುಲಭ ಮಾರ್ಗವಲ್ಲದೆ ಮತ್ತೇನು? ಖುಷಿ ಬಾಬಾರ ಜೆನ್ ಮಾದರಿಯ ಸಂದೇಶವು ಧೋನಿಯ ಮೇಲೆ ಸ್ವ-ಅರಿವಿನ ಗಾಢ ಪರಿಣಾಮವನ್ನು ಬೀರಿತ್ತು."

ಹತಾಶೆಯಿಂದ ಕಂಗೆಟ್ಟಿದ್ದರೂ ಸುಸ್ವಾಸನು ಬಹು ಬೇಗನೆ ಮರುದಿನ ಬೆಳಗ್ಗೆ ಪುನಃ ಟೆಲಿಪುರಮ್ಮಿಗೆ ಹೊರಡಲು ಅಣಿಯಾಗಬೇಕಾದ ವಾಸ್ತವಿಕತೆಯನ್ನು ಸ್ವೀಕರಿಸಲು ಸಮರ್ಥನಾದ.


*******************************************
ಸೂಚನೆ : ಕ್ರಿಕೆಟ್ ಆಟಗಾರರ ಹೆಸರನ್ನು ಕಥೆಗೆ ಸೂಕ್ತವಾದ ನೆಲೆಗಟ್ಟನ್ನು ಒದಗಿಸುವುದಕ್ಕೋಸ್ಕರ ಬಳಸಲಾಗಿದೆ. ಅನ್ಯಥಾ ಕಥೆಯು ಒಂದು ಕಾಲ್ಪನಿಕ ಕೃತಿ.

______________________________________________________________________________

ಗುರುವಾರ, ನವೆಂಬರ್ 13, 2008

ನೆಹರು

ನೆಹರು
ಇವರ ತಾಯಿ ತಂದೆ ಸ್ವರೂಪ ಮತ್ತು ಮೋತಿಲಾಲ ನೆಹರು
ಹುಟ್ಟಿನಿಂದಲೇ ಆಗರ್ಭ ಶ್ರೀಮಂತರು
ಆದರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು
ಸ್ವತಂತ್ರ ಭಾರತದ ಚೊಚ್ಚಲ ಪ್ರಧಾನಿ ಇವರು
ನವ್ಯ ಭವ್ಯ ಭಾರತಕ್ಕೆ ಭದ್ರ ಬುನಾದಿ ಹಾಕಿದರು
ಮಕ್ಕಳೆಂದರೆ ಬಹು ಅಕ್ಕರೆ ತೋರುತ್ತಿದ್ದರು
ಅವರಿಗೆಲ್ಲಾ ಆಗಿದ್ದರು ಪ್ರೀತಿಯ ಚಾಚಾ ನೆಹರು.
____________________________________________________________________

ಶನಿವಾರ, ನವೆಂಬರ್ 8, 2008

ಸ್ವಾರ್ಥದಿಂದ ಪರಮಾರ್ಥದೆಡೆಗೆ

ಮುಕ್ತಿ ಮೋಕ್ಷಗಳ ಪಡೆಯಲು ಕಾತುರರಾಗಿದ್ದೀರಿ
ಆದರೆ ಯಾವ ಮಾರ್ಗ ಹಿಡಿಯಬೇಕೆಂದು ಚಿಂತಾಕ್ರಾಂತರಾಗಿದ್ದೀರಿ
ಇದಕ್ಕೆ ಸ್ವಾರ್ಥದಿಂದ ಪರಮಾರ್ಥದೆಡೆಗೆ ಹೋಗುವುದೊಂದೇ ದಾರಿ
ಆದರಿದು ಯುಗ ಯುಗಗಳಿಂದಲೂ ಕೇಳಿದಂತಿದೆ ಬಾರಿ ಬಾರಿ ?

ಸ್ವಾರ್ಥ ಪರಮಾರ್ಥಗಳ ಸರಿಯಾದ ಅರ್ಥ ತಿಳಿಯಿರಿ
ಆಗ ನೋಡಿ, ಮೋಕ್ಷ ಸಿಗುವುದು ಬಹಳ ಸುಲಭ ರೀ...
ಸ್ವಾರ್ಥ ಪರಮಾರ್ಥಗಳೆರಡರಲ್ಲೂ 'ಅರ್ಥ' ಸಾಮಾನ್ಯ ರೀ...
'ಅರ್ಥ' ಅಂದರೆ ಹಣವಲ್ಲೇನ್ರಿ... ?

ಸ್ವಾರ್ಥ : ಕೇವಲ ಸ್ವಂತಕ್ಕೋಸ್ಕರ ಹಣ ಗಳಿಸಿದಿರಿ, ಬಳಸಿದಿರಿ
ಪರರ ಒಳಿತು ಕೆಡಕುಗಳನ್ನು ಎಣಿಸದೇನೇರೀ ...
ಪರಮಾರ್ಥ : ಸ್ವಂತಕ್ಕೂ ಪರರಿಗೂ ಹಣ ಗಳಿಸಿದಿರಿ, ಬಳಸಿದಿರಿ
ಆದರೂ ಯಾರ ಹಿತಕ್ಕೂ ಧಕ್ಕೆ ಬರಲಿಲ್ಲ ರೀ...

ಆದ್ದರಿಂದ ಹಣವನ್ನು ಗಳಿಸುತ್ತಿರುವ, ಬಳಸುತ್ತಿರುವ ಬಗೆಯನ್ನು ಪರಾಮರ್ಶಿಸಿರಿ
ನಿಮ್ಮ ನಡೆ ನುಡಿ ಆಚಾರ ವಿಚಾರಗಳಲ್ಲಿ ಉತ್ತಮ ಸುಧಾರಣೆ ಕಾಣುತ್ತೀರಿ
ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದದಿಂದ ಕಳೆಯಲು ಆರಂಭಿಸುತ್ತೀರಿ
ಮುಕ್ತಿ ಮೋಕ್ಷಗಳ ಗೀಳಿಗೆ ಗತಿ ಕಾಣಿಸುತ್ತೀರಿ.
_________________________________________________________________________________________

ಭಾನುವಾರ, ಅಕ್ಟೋಬರ್ 19, 2008

ಸುಸ್ವಾಸ ಮತ್ತು ಟೆಲಿಫೋನ್ - 2

ಹಿನ್ನೆಲೆ: ಸುಸ್ವಾಸ ಒಬ್ಬ ಆಲಸಿ ಆದರೆ ತುಂಬಾ ವಿವೇಚನೆಯುಳ್ಳ ಮನುಷ್ಯ. ಅವನು ಮಧ್ಯಾಹ್ನ ಕಂಡ ಕನಸಿನಲ್ಲಿ ಮಂಜಿನ ಮನುಷ್ಯನು ಹಳೇ ಮಾದರಿಯ ಕಪ್ಪು ಟೆಲಿಫೋನನ್ನು ತೋರಿಸಿ ಸುಸ್ವಾಸನನ್ನು ಕುರಿತು "ಇದನ್ನು ನಿನ್ನ ಮನೆಯ ಲಿವಿಂಗ್ ರೂಮಿನ ಈಶಾನ್ಯ ದಿಕ್ಕಿನಲ್ಲಿ ಇರಿಸಿದರೆ, ಸಕಲ ಸಂಪತ್ತು, ಮರ್ಯಾದೆಗಳು ನಿನ್ನ ನೆರಳಿನಂತೆ ನಿನ್ನನ್ನು ಯಾವಾಗಲೂ ಹಿಂಬಾಲಿಸುತ್ತವೆ" ಎಂದು ಹೇಳಿತು. ಅದರಂತೆ ಅವನಿಗೆ ಕಪ್ಪು ಟೆಲಿಫೋನ್ ಕೂಡ ದೊರೆಯಿತು. ಆ ಟೆಲಿಫೋನು, ಮನೆಗೆ ಕರೆದೊಯ್ದು ಸ್ಥಾಪಿಸುವವರೆಗೂ ಮಾತನಾಡಬಾರೆದೆಂಬ ನಿಬಂಧನೆಯನ್ನು ವಿಧಿಸಿತು. ಆದರೆ ಉಪಾಯದಿಂದ ಸುಸ್ವಾಸನು ಮಾತನಾಡುವಂತೆ ಮಾಡಿ ಟೆಲಿಫೋನ್ ಮಾಯವಾಗಿ ಹೋಯಿತು. ಇನ್ನು ಮಾರನೇ ದಿನದ ಸೂರ್ಯೋದಯದ ನಂತರವೇ ಅದನ್ನು ಪಡೆಯಲು ಸಾಧ್ಯ.
ಮ್ಯಾಜಿಕ್ ಕ್ಯಾಶ್ ಕಾರ್ಡ್

ಕನಸಿನ ಪ್ರಕಾರವೇ ಟೆಲಿಪುರಮ್ಮಿನಲ್ಲಿ ಸಿಕ್ಕ ಟೆಲಿಫೋನ್ ಸುಸ್ವಾಸನ ನಂಬಿಕೆಯನ್ನು ಇಮ್ಮಡಿಗೊಳಿಸಿತು. ಮತ್ತು ಅದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸುವದರಿಂದ ಸಕಲ ಸಂಪತ್ತು, ಮರ್ಯಾದೆಗಳು ದೊರೆಯುವ ಬಗ್ಗೆ ವಿಶ್ವಾಸವುಂಟಾಯಿತು. ಹೀಗಾಗಿ ಆ ಟೆಲಿಫೋನನ್ನು ಹೇಗಾದರೂ ಮನೆಗೆ ತರಲೇಬೇಕೆಂಬ ದೃಡ ನಿರ್ಧಾರದೊಂದಿಗೆ ಮಾರನೇ ದಿನ ಬೆಳಗ್ಗೆ ಟೆಲಿಪುರಮ್ಮಿಗೆ ಹೊರಟನು.

ಸುಸ್ವಾಸನಿಗೆ ಹುಡುಕಾಟದ ಪ್ರಮೇಯವೇ ಇರಲಿಲ್ಲ. ಮೊದಲ ಬಾರಿಗೆ ಯಾವ ಜಾಗದಲ್ಲಿ ಟೆಲಿಫೋನನ್ನು ಕಂಡಿದ್ದನೋ, ಈಗಲೂ ಅದು ಅಲ್ಲೇ ಕಾಣಿಸಿಕೊಂಡಿತು.

ಸುಸ್ವಾಸನು ಟೆಲಿಫೋನನ್ನು ಕಾರಿನಲ್ಲಿಟ್ಟುಕೊಂಡು ಮನೆ ಕಡೆ ಹೊರಟನು. ಆಗ ಫೋನಿನಿಂದ ಹೊರಟ ಜೋರಾದ ಟ್ರಿಣ್, ಟ್ರಿಣ್ ಸದ್ದು ಕೇಳಿ ರಿಸೀವರನ್ನು ಎತ್ತಿಕೊಂಡ. ಆಗ ಗಡಸಾದ ಧ್ವನಿಯು "ಸುಸ್ವಾಸ ನನ್ನನ್ನು ಪುನಃ ಹುಡುಕಿತಂದುದಕ್ಕಾಗಿ ಧನ್ಯವಾದಗಳು. ಈ ಬಾರಿ ನಿನ್ನ ಮನೆಯಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾಗುವೆ ಎಂದು ಆಶಿಸುತ್ತೇನೆ. ಆದರೆ ನನ್ನ ಕಟ್ಟಳೆಯನ್ನು ಮಾತ್ರ ಪಾಲಿಸಲೇಬೇಕು. ನಿನ್ನ ಮೊಬೈಲಿನಿಂದ 464 ಕ್ಕೆ 'ನೇಚರ್' ಎಂದು ಎಸ್ ಎಂ ಎಸ್ ಕಳುಹಿಸಬೇಕು. ಆಗ ನೋಂದಣಿಯನ್ನು ಖಾತ್ರಿಪಡಿಸಲು ನಿನಗೊಂದು ಮೆಸೇಜ್ ಬರುತ್ತದೆ. ಅದರಲ್ಲಿ ನಾಲ್ಕು ಆಯ್ಕೆಗಳಿರುತ್ತವೆ. 1,2,3 ಅಥವಾ ಸಂಖ್ಯೆ 4 ರ ಬಟನ್ ಒತ್ತುವ ಮೂಲಕ ನಿನ್ನ ಆಯ್ಕೆಯನ್ನು ಸೂಚಿಸಬೇಕು. ಆದರೆ ಕಟ್ಟಳೆ ಪ್ರಕಾರ ನೀನು ಕೇವಲ ಸಂಖ್ಯೆ 4 ನ್ನೇ ಒತ್ತಬೇಕು ಮತ್ತು ಮನೆಯನ್ನು ತಲಪುವವರೆಗೂ ಮಾತನಾಡಕೂಡದು" ಎಂದು ಹೇಳಿ ಪುನಃ ಮುಂದುವರೆಯುತ್ತಾ "ಸುಸ್ವಾಸ ಕಟ್ಟಳೆ ಮುರಿದರೆ ನಾನು ಮಾಯವಾಗಿ ಹೋಗುವುದು ನಿನಗೀಗ ಖಚಿತವಾಗಿರುವುದರಿಂದ ಹುಷಾರು!" ಎಂದು ಎಚ್ಚರಿಕೆ ನೀಡಿತು.

ಕೂಡಲೇ ಸುಸ್ವಾಸನು 464 ಕ್ಕೆ 'ನೇಚರ್' ಎಂದು ಎಸ್ ಎಮ್ ಎಸ್ ಮಾಡಿದ. ಮರುಕ್ಷಣವೇ ಅವನ ಮೊಬೈಲಿನ ಬೀಪ್ ಬೀಪ್ ಸದ್ದು ಮೆಸೇಜ್ ಬಂದಿರುವುದನ್ನು ಸೂಚಿಸಿತು. "ನಮ್ಮಲ್ಲಿ ನೋಂದಾಯಿಸಿಕೊಂಡದ್ದಕ್ಕಾಗಿ ವಂದನೆಗಳು. ಡೇಟಿಂಗ್ ಸೇವೆಗೆ ಸಂಖ್ಯೆ 1 ನ್ನು, ಭವಿಷ್ಯವನ್ನು ಕೇಳಲು ಸಂಖ್ಯೆ 2 ನ್ನು, ಆರೋಗ್ಯದ ಸಲಹೆಗಳಿಗಾಗಿ ಸಂಖ್ಯೆ 3 ನ್ನು ಮತ್ತು ಕಥೆ ಕೇಳಲು ಸಂಖ್ಯೆ 4 ನ್ನು ಒತ್ತಿರಿ" ಎಂದು ಬಂದಿದ್ದ ಮೆಸೇಜನ್ನು ಓದಿದ ಸುಸ್ವಾಸನು ಯಾವುದೇ ವಿಚಾರಕ್ಕೂ ಆಸ್ಪದ ಕೊಡದೆ ಸಂಖ್ಯೆ 4 ನ್ನು ಒತ್ತಿದ. ಆಗ ಗಡಸಾದ ಧ್ವನಿಯು "ಸುಸ್ವಾಸ ನೀನು ಒಳ್ಳೆಯ ಕೆಲಸವನ್ನೇ ಮಾಡಿರುವೆ, ಈಗ ನಿನ್ನ ಬ್ಲೂ ಟೂತ್ ಇಯರ್ ಫೋನನ್ನು ಕಿವಿಗೆ ಸಿಗಿಸಿಕೊಂಡು ಕಥೆಯನ್ನು ಕೇಳುತ್ತಾ ಪ್ರಯಾಣವನ್ನು ಮುಂದುವರೆಸು" ಎಂದು ಹೇಳಿತು.

ಸುಸ್ವಾಸನು ಕಥೆಯನ್ನು ಕೇಳತೊಡಗಿದ.

ಭಾರತೀಯ ಮೂಲದ ಬಹು ರಾಷ್ಟೀಯ ಸಂಸ್ಥೆ - ಬಾಬಾ. ಬಾಬಾ ಸಮುದಾಯದ ಕಂಪನಿಗಳು ಹಣಕಾಸು, ತೈಲ, ಖಾದ್ಯ ವಸ್ತುಗಳು, ತಂತ್ರಜ್ಞಾನ ಹೀಗೆ ಹೆಚ್ಚು ಕಮ್ಮಿ ಎಲ್ಲಾ ಕ್ಷೇತ್ರಗಳಲ್ಲೂ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುತ್ತಿದ್ದವು. ಬಾಬಾ ಕಂಪನಿಯ ಅಧ್ಯಕ್ಷರು, ನೈತಿಕತೆಯ ಚೌಕಟ್ಟನ್ನು ಮೀರದಂತಹ ನಡವಳಿಕೆ ಹಾಗು ಜನಪರ ನೀತಿಗಳ ಅನುಸರಣೆಯಿಂದಾಗಿ ಜಗತ್ತಿನ ಗೌರವಾನ್ವಿತ ವ್ಯಕ್ತಿಗಳ ಸಮೂಹದಲ್ಲಿ ಅತಿ ವಿಶಿಷ್ಟರೆನಿಸಿದ್ದರು. ಆದರೂ ಬಾಬಾ ಕಂಪನಿಯ ಅಧ್ಯಕ್ಷರು ಚಿಂತಾಕ್ರಾಂತರಾಗಿದ್ದರು. ವೇಗವಾಗಿ ಬೆಳೆಯುತ್ತಿದ್ದ ಬಾಬಾ ಸಮುದಾಯದ ಕಂಪನಿಗಳನ್ನು ಸಮರ್ಪಕವಾಗಿ ನಿರ್ವಹಿಸಿ ಮುನ್ನಡೆಸುವಂತಹ ಸಮರ್ಥ ನಾಯಕರನ್ನು ತಯಾರು ಮಾಡಬೇಕಾಗಿತ್ತು. ಇದು ಮುಂಬರುವ ಹತ್ತು ವರ್ಷಗಳಲ್ಲೇ ಆಗಬೇಕಾದುದು, ಅಧ್ಯಕ್ಷರ ಚಿಂತೆಗೆ ಕಾರಣವಾಗಿತ್ತು. ಅದಲ್ಲದೆ ಇತ್ತೀಚಿನ ಜಾಗತಿಕ ವಿದ್ಯಮಾನಗಳು, ಕೇವಲ ಪ್ರತಿಷ್ಠಿತ ಬ್ಯುಸಿನೆಸ್ ಸ್ಕೂಲ್ ಕ್ಯಾಂಪಸ್ಸಿನಿಂದ ಬರುವ ಅಭ್ಯರ್ಥಿಗಳು ಮಾತ್ರ ಉತ್ತಮ ನಾಯಕರಾಗುತ್ತಾರೆ ಎಂಬುದನ್ನು ಹುಸಿಯಾಗಿಸಿತ್ತು. ಇಂತಹ ನೂರಾರು ಅಭ್ಯರ್ಥಿಗಳ ದಂಡನ್ನೇ ಹೊಂದಿದ್ದ ಹಣಕಾಸು ಕ್ಷೇತ್ರದ ಘಟಾನುಘಟಿ ಕಂಪನಿಗಳು ರಾತ್ರೋರಾತ್ರಿ ಮುಳುಗುತ್ತಿರುವುದು ದಿನನಿತ್ಯದ ಸಮಾಚಾರವಾಗಿದೆ. ಆದ್ದರಿಂದ ಬಾಬಾ ಕಂಪನಿಯ ಅಧ್ಯಕ್ಷರು, ಪ್ರಾರಂಭಿಕ ಹಂತದ ಉದ್ಯೋಗಿಗಳ ಆಯ್ಕೆ ವಿಧಿಯಲ್ಲಿಯೇ ಉತ್ತಮ ನಾಯಕರಾಗಬಲ್ಲವರನ್ನು ಗುರುತಿಸಲು ಯೋಚಿಸಿದರು. ಈ ವಿಷಯವನ್ನು ತಮ್ಮ ಮಾನವ ಸಂಪನ್ಮೂಲಗಳ ನಿರ್ದೇಶಕರಿಗೆ ತಿಳಿಸಿದಾಗ, ಈ ನಿಟ್ಟಿನಲ್ಲಿ ಅವರಾಗಲೇ ಹೊಸ ಯೋಜನೆಯೊಂದಿಗೆ ಸಿದ್ಧರಿದ್ದರು.

ಮೊದಲ ಹಂತದ ಲಿಖಿತ ಪರೀಕ್ಷೆಯಲ್ಲಿ ಪಾಸಾದ ಇನ್ನೂರೈವತ್ತು ಅಭ್ಯರ್ಥಿಗಳನ್ನು ಹೊಸ ಯೋಜನೆಯಡಿಯಲ್ಲಿ ರೂಪಿತವಾದ ಆಯ್ಕೆ ವಿಧಾನಕ್ಕೆ ಆರಿಸಲಾಯಿತು. ಅವರೆಲ್ಲರಿಗೂ ಕಂಪನಿಯ ತರಬೇತಿ ಕೇಂದ್ರದಲ್ಲಿ ಭಾನುವಾರ ಬೆಳಗ್ಗೆ ಹಾಜರಾಗಬೇಕೆಂದೂ, ಮತ್ತು ಅಲ್ಲೇ ಐದು ದಿನಗಳವರೆಗೆ ಇರಬೇಕಾಗುತ್ತದೆಂದು ಪತ್ರ ಮುಖೇನ ತಿಳಿಸಲಾಯಿತು.

ಬಾಬಾ ಕಂಪನಿಯ ತರಬೇತಿ ಕೇಂದ್ರವು ಪ್ರಪಂಚದ ಮುಂಚೂಣಿಯಲ್ಲಿರುವ ಅತ್ಯಂತ ಸುಸಜ್ಜಿತ ಹಾಗು ವ್ಯವಸ್ಥಿತ ತರಬೇತಿ ಕೇಂದ್ರಗಳಲ್ಲೊಂದಾಗಿತ್ತು. ಈ ಕೇಂದ್ರದ ವಿಶಾಲವಾದ ಸಭಾಂಗಣದಲ್ಲಿ ನೆರೆದಿದ್ದ ಅಭ್ಯರ್ಥಿಗಳನ್ನು ಉದ್ದೇಶಿಸಿ ಅಧ್ಯಕ್ಷರು ಸಾಂಪ್ರದಾಯಿಕ ಪರಿಚಯ ಭಾಷಣ ಮಾಡಿದರು. ಮುಂದಿನ ಐದು ದಿನಗಳವರೆಗೆ ನಡೆಯುವ ಆಯ್ಕೆ ವಿಧಾನದ ಉದ್ದೇಶ ಕೇವಲ ಉದ್ಯೋಗಿಗಳ ನೇಮಕಾತಿ ಮಾಡುವುದಲ್ಲ. ಆದರೆ ಮುಂಬರುವ ಹತ್ತು ವರ್ಷಗಳಲ್ಲಿ ಕಂಪನಿಯ ವಿವಿಧ ವಿಭಾಗಗಳನ್ನು ವ್ಯವಸ್ಥಿತವಾಗಿ ಮುನ್ನಡೆಸುವ ಹಾಗು ಅಭಿವೃದ್ದಿ ಕಡೆ ನಡೆಸುವ ಸಮರ್ಥ ನಾಯಕರುಗಳನ್ನು ಗುರುತಿಸುವ ವ್ಯವಸ್ಥೆ ಎಂಬುದನ್ನು ಮನದಟ್ಟು ಮಾಡಿದರು. ನಂತರ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ಆಯ್ಕೆ ಪ್ರಕ್ರಿಯೆಯ ಬಗ್ಗೆ ವಿವರ ನೀಡತೊಡಗಿದರು.

ಪ್ರತಿ ಅಭ್ಯರ್ಥಿಗೂ ಒಂದು ಕ್ಯಾಶ್ ಕಾರ್ಡನ್ನು ನೀಡಲಾಗುವುದು. ಅದರ ಸಹಾಯದಿಂದ ತರಬೇತಿ ಕೇಂದ್ರದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಕ್ಯಾಶ್ ಕಾರ್ಡ್ ಸ್ವೈಪ್ ಮಾಡಿ ವಿವಿಧ ರೆಸ್ಟೊರೆಂಟಿನಲ್ಲಿ ಸಿಗುವ ಆಹಾರ ಪಾನೀಯಗಳು, ಶಾಪಿಂಗ್ ಮಾಲ್ ಗಳ ಮಳಿಗೆಗಳಲ್ಲಿ ಮಾರಲ್ಪಡುವ ವಸ್ತುಗಳು, ಸಿನೆಮಾ ಪ್ರದರ್ಶನಗಳು, ಪುಸ್ತಕ ಮಳಿಗೆಗಳು, ಲಾಂಡ್ರಿ ಸೇವೆ, ಬ್ಯೂಟಿ ಪಾರ್ಲರ್ ಗಳ ಸೇವೆಯನ್ನು ಬಳಸಿಕೊಳ್ಳಬಹುದು. ಮತ್ತು ಕಂಪ್ಯೂಟರ್ ಸೆಂಟರಿನ ಗೇಮಿಂಗ್ ಸ್ಟೇಶನ್ ನಿಮಗಾಗಿಯೇ ವಿಶೇಷವಾಗಿ ರೂಪಿಸಲ್ಪಟ್ಟಿದೆ. ಈ ಕಂಪ್ಯೂಟರಿನ ಇಂಟರ್ ಆಕ್ಟಿವ್ ಗೇಮ್ಸ್ ಗಳು ನಿಮಗೆ ಬಾಬಾ ಸಮುದಾಯದ ಕಂಪೆನಿಗಳ ಗುರಿಗಳು, ಅವಕಾಶಗಳು, ಅಡೆತಡೆಗಳು, ಮತ್ತು ಕಂಪನಿಯ ಕಾರ್ಯವಿಧಾನಗಳ ಬಗ್ಗೆ ಅರಿಯಲು ಸಹಾಯ ಮಾಡುತ್ತವೆ. ಈ ಕಂಪ್ಯೂಟರುಗಳನ್ನು ಕೂಡ ಕ್ಯಾಶ್ ಕಾರ್ಡನ್ನು ಸ್ವೈಪ್ ಮಾಡುವ ಮೂಲಕ ಬಳಸಿಕೊಳ್ಳಬಹುದು. ತರಬೇತಿ ಕೇಂದ್ರದಲ್ಲಿರುವ ಜಿಮ್, ವಿವಿಧ ಕ್ರೀಡಾವಳಿಗಳು ಹಾಗು ಈಜು ಕೊಳವನ್ನು ಕೂಡ ಧಾರಾಳವಾಗಿ ಉಪಯೋಗಿಸಿಕೊಳ್ಳಬಹುದು. ಈಗ ನೀವು ಅತಿ ಅವಶ್ಯವಾಗಿ ಗಮನದಲ್ಲಿಡಬೇಕಾದ ಸಂಗತಿ - ನಿಮ್ಮ ಕ್ಯಾಶ್ ಕಾರ್ಡನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಏಕೆಂದರೆ ಅದಿಲ್ಲದೆ ನೀವು ಯಾವ ಸೌಲಭ್ಯಗಳನ್ನೂ ಬಳಸಿಕೊಳ್ಳಲಾರಿರಿ. ಪ್ರತಿದಿನ ಕ್ಯಾಶ್ ಕಾರ್ಡಿನಲ್ಲಿ 2,400.00 ರೂಪಾಯಿಗಳು ಜಮೆಯಾಗುತ್ತದೆ. ಮತ್ತು ಪ್ರತಿ ಬಾರಿ ಯಾವುದೇ ಸೌಲಭ್ಯಗಳನ್ನು ಬಳಸಿಕೊಂಡಾಗ ಅದಕ್ಕೆ ನಿಗದಿಪಡಿಸಿರುವ ಮೊತ್ತವನ್ನು ಕ್ಯಾಶ್ ಕಾರ್ಡಿನಿಂದ ವಜಾ ಮಾಡಲ್ಪಡುತ್ತದೆ. ಈ ಕ್ಯಾಶ್ ಕಾರ್ಡಿನ ವಿಶೇಷವೇನೆಂದರೆ, ದಿನಕ್ಕೆ ಕೇವಲ 2,400.00 ರೂಪಾಯಿಗಳ ಮೌಲ್ಯದ ಸೌಲಭ್ಯಗಳನ್ನು ಮಾತ್ರ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ದಿನದ ಕೊನೆಯಲ್ಲಿ ಕ್ಯಾಶ್ ಕಾರ್ಡಿನಲ್ಲಿ ಉಳಿಯುವ ಯಾವುದೇ ಮೊತ್ತವನ್ನು ಅನೂರ್ಜಿತಗೊಳಿಸಲಾಗುವುದು. ಆದ್ದರಿಂದ ಆ ಮೊತ್ತವನ್ನು ಮರುದಿನ ಬಳಸಿಕೊಳ್ಳಲು ಬರುವುದಿಲ್ಲ. ಹೀಗಾಗಿ ಪ್ರತಿದಿನ ಗರಿಷ್ಠ 2400.00 ರೂಪಾಯಿಗಳಷ್ಟು ಮೌಲ್ಯದ ಸೌಲಭ್ಯಗಳನ್ನು ಮಾತ್ರ ಬಳಸಿಕೊಳ್ಳಲು ಆಗುತ್ತದೆ. ಈ ನಿಯಮಾವಳಿಗಳು ನಾಳೆ ಬೆಳಗ್ಗೆ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಐದು ದಿನಗಳ ಕಾಲ ಜಾರಿಯಲ್ಲಿರುತ್ತದೆ.

ನಿಮಗೆಲ್ಲಾ ಸಂತೋಷದ ಸುದ್ದಿಯೇನೆಂದರೆ, ಇಂದು ಕ್ಯಾಶ್ ಕಾರ್ಡಿನ ಬಳಕೆಯನ್ನು ರೂಢಿ ಮಾಡಿಕೊಳ್ಳಲು, ವಸ್ತುಗಳ ಖರೀದಿಯನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಕಾರ್ಡಿನ ಬಳಕೆಯಲ್ಲಿ ತೊಂದರೆ ಕಾಣಿಸಿದರೆ, ತಕ್ಷಣ ಸಹಾಯಕ ಕೇಂದ್ರಗಳನ್ನು ಸಂಪರ್ಕಿಸಿರಿ. ಬರುವ ಶನಿವಾರ ಸಂಜೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು. ಅಲ್ಲಿಯವರೆಗೆ ನಿಮ್ಮ ವಾಸ್ತವ್ಯ ಆನಂದಕರವಾಗಿರಲೆಂದು ಹಾರೈಸುತ್ತೇವೆ.

ಇಷ್ಟು ವಿವರಣೆ ಪಡೆದ ಅಭ್ಯರ್ಥಿಗಳು ತಮಗೆ ನಿಗದಿ ಪಡಿಸಿದ ಪ್ರತ್ಯೇಕ ರೂಮಿನತ್ತ ತೆರಳಿ ತಮ್ಮ ಲಗೇಜುಗಳನ್ನು ಜೋಡಿಸಿಟ್ಟುಕೊಂಡರು. ನಂತರ ತರಬೇತಿ ಕೇಂದ್ರದ ಕ್ಯಾಂಪಸ್ಸಿನ ತುಂಬಾ ಅಭ್ಯರ್ಥಿಗಳು ಹರಡಿಕೊಂಡರು. ಕೆಲವರು ವೈವಿಧ್ಯಮಯ ರುಚಿಕರ ತಿನಿಸುಗಳನ್ನು ಸವಿಯುವುದರಲ್ಲಿ ಮಗ್ನರಾದರೆ, ಹಲವರು ನೇರವಾಗಿ ಈಜುಕೊಳದ ಕಡೆ ಹೆಜ್ಜೆ ಹಾಕಿದರು. ಮತ್ತೆ ಕೆಲವರು ಮಾಲ್ ಗಳಲ್ಲಿ ವಸ್ತುಗಳ ಖರೀದಿಗೆ ಪ್ರಯತ್ನಿಸಿದರು. ಮೊದಲೇ ತಿಳಿಸಿದಂತೆ ಕ್ಯಾಶ್ ಕಾರ್ಡ್ ಅದಕ್ಕೆ ಆಸ್ಪದವೀಯಲಿಲ್ಲ. ಆಗ ಅವರು ಸಿನೆಮಾ ನೋಡಲು ತೆರಳಿದರು.

ಅಂತೂ ದಿನದ ಕೊನೆಯಲ್ಲಿ ಮಾನವ ಸಂಪನ್ಮೂಲ ವಿಭಾಗದವರು ದಣಿದು ಸುಸ್ತಾಗಿದ್ದರೂ ಸಂತೃಪ್ತತೆಯ ಭಾವದಲ್ಲಿದ್ದರು. ಅಂದು ಎಲ್ಲವೂ ಪೂರ್ವ ನಿಯೋಜಿತದಂತೆ ಕಾರ್ಯಗತವಾಗಿದ್ದವು. ಸಹಾಯಕ ಕೇಂದ್ರದಲ್ಲಿ ಬಂದಿದ್ದ ಒಂದೇ ಒಂದು ದೂರನ್ನು ಕೂಡ ತುರ್ತಾಗಿ ಪರಿಹರಿಸಿದ್ದರು. ಕ್ಯಾಶ್ ಕಾರ್ಡೊಂದು ತಿರುಚಿಕೊಂಡ ಕಾರಣ ಕೆಲಸ ಮಾಡುತ್ತಿರಲಿಲ್ಲ. ಅದನ್ನು ಕೂಡಲೇ ಬದಲಿಸಿಕೊಟ್ಟಿದ್ದರು. ಅಭ್ಯರ್ಥಿಗಳ ಕಾರ್ಡಿನ ಬಳಕೆಯ ಜಾಡನ್ನು ಹಿಡಿದು ಮಾಹಿತಿಯನ್ನು ಕಲೆಹಾಕಲು ವಿಶೇಷವಾದ ತಂತ್ರಾಂಶವನ್ನು ರೂಪಿಸಲಾಗಿತ್ತು. ಇದನ್ನು ದಕ್ಷತೆಯಿಂದ ನಿರ್ವಹಿಸುವಲ್ಲಿ ಮಾನವ ಸಂಪನ್ಮೂಲ ವಿಭಾಗದವರ ಮುಂದಿನ ಐದು ದಿನಗಳು ಪುರುಸೊತ್ತಿಲ್ಲದೆ ಕಳೆದುಹೋದವು.

ಅಭ್ಯರ್ಥಿಗಳಿಗಂತೂ ಆ ಐದು ದಿನಗಳು ಸ್ವರ್ಗದಲ್ಲಿದ್ದಂತೆ ಭಾಸವಾಯಿತು. ಅವರಿಗೆ ಅಲ್ಲಿ ಸಿಕ್ಕ ಆತಿಥ್ಯದಿಂದ ಉದ್ಯೋಗದ ಸಂದರ್ಶನಕ್ಕೆ ಬಂದಿದ್ದೇವೆ ಎಂಬ ಅಂಶವನ್ನು ಮರೆಸಿತ್ತು. ಕ್ಯಾಶ್ ಕಾರ್ಡನ್ನು ಶಾಪಿಂಗ್ ಮಾಲ್ ಗಳಲ್ಲಿ, ಈಜಾಟಕ್ಕೆ, ಆಹಾರ ಪಾನೀಯಗಳ ಸೇವನೆಗೆ, ಗೇಮ್ ಸ್ಟೇಷನ್ನಿನಲ್ಲಾಡಲು, ಬ್ಯೂಟಿ ಪಾರ್ಲರ್ ಹಾಗು ಲಾಂಡ್ರಿ ಸೇವೆಗೂ ಬಳಸುತ್ತಾ ಹಾಯಾಗಿದ್ದರು. ಕೆಲವರು ಇಲ್ಲಿ ದೊರಕಿದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಸ್ವೇಚ್ಛೆಯಿಂದ ಕಾರ್ಡನ್ನು ಬಳಸಿದ್ದರಿಂದ ಮಧ್ಯಾಹ್ನದ ಊಟಕ್ಕೂ ಪರದಾಡಿದರು. ಸದಾ ಸಹಾಯ ಹಸ್ತ ಚಾಚುವಂತಹ ಗುಣವುಳ್ಳ ಕೆಲವರು ತಮ್ಮ ಕ್ಯಾಶ್ ಕಾರ್ಡಿನ ಮೂಲಕ ಇಂತಹವರ ಊಟ, ಔಷಧಿಗಳ ಖರ್ಚನ್ನು ವಹಿಸಿಕೊಂಡರು. ಕನಸಿನಂತೆ ಐದು ದಿನಗಳು ಕಳೆದುಹೋದವು.

ಶನಿವಾರ ಮುಂಜಾನೆ ಅಭ್ಯರ್ಥಿಗಳೆಲ್ಲರಲ್ಲೂ ಅಚ್ಚರಿ ಮನೆ ಮಾಡಿತ್ತು. ಉಳಿದೆಡೆಯಂತೆ ಸಂದರ್ಶನದ ಯಾವ ವಿಧಿಗಳೂ ಇರಲ್ಲಿಲ್ಲವಾಗಿ ಆಯ್ಕೆಯ ಮಾನದಂಡವೇನೆಂದು ತಿಳಿಯದಿದ್ದದ್ದು ಸಾಯಂಕಾಲ ಪ್ರಕಟಿಸಲಿರುವ ಪಟ್ಟಿಯ ನಿರೀಕ್ಷೆ ಮಾಡುವುದೊಂದೇ ಅವರಿಗುಳಿದಿದ್ದ ದಾರಿ.

ಇತ್ತ ಅಧ್ಯಕ್ಷರು ಇತರ ಪದಾಧಿಕಾರಿಗಳೊಡನೆ ಸಭೆ ಸೇರಿ ಮಾನವ ಸಂಪನ್ಮೂಲ ವಿಭಾಗದವರು ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸುತ್ತಿದ್ದರು. ಆ ವರದಿಯಲ್ಲಿ ತಂತ್ರಾಂಶಕ್ಕೆ ಒದಗಿಸಿದ ಮಾನದಂಡದ ಪ್ರಕಾರ 62 ಅಭ್ಯರ್ಥಿಗಳು ಆಯ್ಕೆಯಾದ ವಿವರವಿತ್ತು.

ಪ್ರತಿ ಅಭ್ಯರ್ಥಿಗೆ ಐದು ದಿನಗಳ ಅವಧಿಗೆ ಸೌಲಭ್ಯಗಳನ್ನು ಬಳಸಲು ಒಟ್ಟು 12,000.00 ರೂಪಾಯಿಗಳನ್ನು ನೀಡಲಾಗಿತ್ತು. ಆ ಮೊತ್ತದಿಂದ ಗೇಮಿಂಗ್ ಸ್ಟೇಷನ್ನಿನ ಸೌಲಭ್ಯಕ್ಕೆ ಕನಿಷ್ಠ 3,600.00 ರೂಪಾಯಿಗಳನ್ನು ಹಾಗು ಕನಿಷ್ಠ 1,200.00 ರೂಪಾಯಿಗಳನ್ನು ತಲಾ 1) ಆಹಾರ ಮತ್ತು ಲಾಂಡ್ರಿ, 2) ಜಿಮ್, ಈಜುಕೊಳ ಮತ್ತಿತರ ಆಟೋಟಗಳು 3) ಪುಸ್ತಕಗಳ ಖರೀದಿಗೆ ಮತ್ತು 4) ಮಾಲ್, ಸಿನೆಮಾ ಮತ್ತು ಬ್ಯೂಟಿ ಪಾರ್ಲರ್ ಗಳಿಗೆ, ಹೀಗೆ ಕನಿಷ್ಠ 8,400.00 ರೂಪಾಯಿಗಳಷ್ಟು ಮೊತ್ತವನ್ನು ಖರ್ಚು ಮಾಡಿದ್ದವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಬಾಕಿ 3,600.00 ರೂಪಾಯಿಗಳ ಖರ್ಚಿನ ವಿಶ್ಲೇಷಣೆಯನ್ನು ಪರಿಗಣಿಸಿರಲಿಲ್ಲ. ಆಗ ಅಧ್ಯಕ್ಷರು 62 ಜನರಲ್ಲಿ ಎಷ್ಟು ಜನ ಬಾಕಿ 3,600.00 ರೂಪಾಯಿಗಳನ್ನು ಅನ್ಯರಿಗೆ ಆಹಾರ, ಔಷಧಿ ಕೊಳ್ಳಲು, ಗೇಮಿಂಗ್ ಸ್ಟೇಷನನ್ನು ಬಳಸಿಕೊಳ್ಳಲು ಉಪಯೋಗಿಸಿದ್ದರೆಂದು ತಿಳಿಸಬೇಕೆಂದರು. ಈ ಅಧಿಕ ಮಾನದಂಡವನ್ನು ಸಲ್ಲಿಸಿದೊಡನೆ, ಕಂಪ್ಯೂಟರಿನ ತಂತ್ರಾಂಶವು ಕೆಲವೇ ಕ್ಷಣದಲ್ಲಿ ವಿಶ್ಲೇಷಣೆ ಮಾಡಿ, 23 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಸಿದ್ಧಪಡಿಸಿತು. ತಮ್ಮ ಹೊಸ ಯೋಜನೆ ಯಶಸ್ವಿಯಾದುದಕ್ಕೆ ಎಲ್ಲರನ್ನೂ ಅಭಿನಂದಿಸುತ್ತಾ, ಆ 23 ಅಭ್ಯರ್ಥಿಗಳ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಲು ಸೂಚಿಸಿ, ಸಭೆಯನ್ನು ಮುಕ್ತಾಯಗೊಳಿಸಿದರು.

ಅಂದು ಸಂಜೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದಾಗ, ಎಲ್ಲರೂ ಅಚ್ಚರಿ ಹಾಗು ಗಲಿಬಿಲಿಗೊಳಗಾಗಿದ್ದರು.
ಇಷ್ಟು ಕಥೆಯನ್ನು ಹೇಳಿದ ಬಳಿಕ, ಇಯರ್ ಫೋನಿನಲ್ಲಿನ ಧ್ವನಿಯು ಮುಂದುವರೆಯುತ್ತಾ "ಸುಸ್ವಾಸ ನಾನು ಕೂಡ ಈ ಆಯ್ಕೆ ವಿಧಾನದಿಂದ ಗಲಿಬಿಲಿಗೊಂಡಿದ್ದೇನೆ. ಸುಸ್ವಾಸ ಈಗ ನೀನೇನಾದರೂ ತಿಳಿದೂ ಈ ವಿಧಾನದ ತರ್ಕವನ್ನು ಬಿಡಿಸಿ ತಿಳಿಸದಿದ್ದರೆ, ಸ್ಪೋಟಕಗಳಿಂದ ತುಂಬಿರುವ ಭಯೋತ್ಪಾದಕರ ಆತ್ಮಾಹುತಿ ಪಡೆಯವರ ಕಾರಿನಂತೆ ಸುಟ್ಟು ಬೂದಿಯಗುವುದು ಖಂಡಿತ!" ಎಂದು ಹೇಳುತ್ತಿದ್ದಂತೆ ನಿಶ್ಯಬ್ದ ಆವರಿಸಿತು.

ಸುಸ್ವಾಸನು ತನ್ನ ವಿವೇಚನಾ ಶಕ್ತಿಯಿಂದ ಕಥೆಯನ್ನು ಕೇಳುವಾಗಲೇ ಗ್ರಹಿಸಿದ್ದನ್ನು ಮನ ಬಿಚ್ಚಿ ಹೇಳತೊಡಗಿದ.

"ಇತ್ತೀಚಿನ ವಿದ್ಯಮಾನಗಳನ್ನು ಅವಲೋಕಿಸಿದಾಗ, ಪ್ರತಿಷ್ಠಿತ ಬ್ಯುಸಿನೆಸ್ ಸ್ಕೂಲ್ ಕ್ಯಾಂಪಸ್ಸಿನಿಂದ ಆಯ್ದ ನೂರಾರು ಉದ್ಯೋಗಿಗಳಿದ್ದರೂ, ಆರ್ಥಿಕ ಕ್ಷೇತ್ರದ ದಿಗ್ಗಜರೆನಿಸಿಕೊಂಡಂತಹ ಕಂಪನಿಗಳು ಏಕಾಏಕಿ ಮುಳುಗಿದ್ದು ಕಂಡುಬರುತ್ತದೆ. ಆದುದರಿಂದ ದಿಟವಾದ ನಾಯಕನನ್ನು ಗುರುತಿಸಲು ಶೈಕ್ಷಣಿಕ ಹಿನ್ನಲೆಯೊಂದೇ ಅಳತೆಗೋಲಾಗಲಾರದು. ಅದಲ್ಲದೆ ಹೆಚ್ಚಿನ ವ್ಯಾಸಂಗ ಮಾಡಿದ ವ್ಯಕ್ತಿಗೆ ಉದ್ಯೋಗಾರ್ಥಿಯ ಆಯ್ಕೆ ವಿಧಾನಗಳನ್ನು ಅಭ್ಯಸಿಸಿ ತಾನೇ ತಕ್ಕವನೆಂಬುವುದಾಗಿ ನಿರೂಪಿಸಿಕೊಳ್ಳುವುದು ಸುಲಭ ಸಾಧ್ಯ. ಬಾಬಾ ಕಂಪನಿಯ ಅಧ್ಯಕ್ಷರು ಹಾಗು ವ್ಯವಸ್ಥಾಪಕ ಮಂಡಳಿಯವರೆಗೆ ಇದರ ಅರಿವಿದ್ದುದರಿಂದ, ದಿಟವಾದ ನಾಯಕರನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಲು ನವನವೀನ ಯೋಜನೆಯನ್ನು ರೂಪಿಸಿದರು.

ದಿಟವಾದ ನಾಯಕನು ತನ್ನ ವೃತ್ತಿ ಜೀವನ ಹಾಗು ವೈಯಕ್ತಿಕ ಜೀವನದ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವತ್ತ ಜಾಗೃತನಾಗಿರುತ್ತಾನೆ. ತನಗೆ ದೊರೆಯುವ ಕನಿಷ್ಟತಮ ಸೌಲಭ್ಯ ಹಾಗು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಪ್ರತಿಯೊಬ್ಬರ ಏಳ್ಗೆ ಹಾಗು ಪ್ರಗತಿಪರತೆಯನ್ನು ಮುನ್ನಡೆಸುತ್ತಾನೆ. ಅಷ್ಟಲ್ಲದೆ ದಿಟವಾದ ನಾಯಕನಿಗೆ ಒದಗಿ ಬರಲಿರುವ ತೊಂದರೆಗಳನ್ನು ಗುರುತಿಸಿ ಅದಕ್ಕೆ ಸೂಕ್ತ ಸಮಾಧಾನ ಕಂಡುಕೊಳ್ಳುವ ಕ್ಷಮತೆಯಿರುತ್ತದೆ

ಬಾಬಾ ಕಂಪನಿ ರೂಪಿಸಿದ ನವೀನ ವಿಧಾನದ ತತ್ತ್ವ ತುಂಬಾ ಸರಳವಾದುದು. ಅದು - ವೇಳೆಯನ್ನು - ಪ್ರತಿಯೊಬ್ಬರಿಗೂ ದೊರೆಯುವ ಅತ್ಯಮೂಲ್ಯ ಸಂಪನ್ಮೂಲವನ್ನು ಅಭ್ಯರ್ಥಿಗಳು ಬಳಸುವ ಬಗೆಯನ್ನು ವಿಶ್ಲೇಷಣೆ ಮಾಡುತ್ತದೆ. ಇದಕ್ಕಾಗಿ ಪ್ರತಿ ನೂರು ರೂಪಾಯಿ ಒಂದು ಘಂಟೆಗೆ ಸಮನೆಂದು, ಹಾಗಾಗಿ ಅಭ್ಯರ್ಥಿಗಳಿಗೆ ನೀಡಿದ 2,400.00 ರೂಪಾಯಿಗಳು ಒಂದು ದಿನಕ್ಕೆ ಸಮವೆಂದು ಪರಿಗಣಿಸಲ್ಪಟ್ಟಿತು. ದಿನದ 24 ಘಂಟೆಗಳಲ್ಲಿ ಉಳಿಸಿದ ಸಮಯವನ್ನು ಮರುದಿನ ಬಳಸಿಕೊಳ್ಳುವುದು ಅಸಾಧ್ಯವಾದುದರಿಂದ, ಕ್ಯಾಶ್ ಕಾರ್ಡ್ ದಿನಕ್ಕೆ ಗರಿಷ್ಠ 2,400.00 ರೂಪಾಯಿಗಳನ್ನು ಮಾತ್ರ ಖರ್ಚು ಮಾಡಲು ಅವಕಾಶ ಮಾಡಿಕೊಡುತ್ತಿತ್ತು. ಮತ್ತು ದಿನದ ಕೊನೆಯಲ್ಲಿ ಉಳಿದಿರಬಹುದಾದ ಮೊತ್ತವನ್ನು ಅನೂರ್ಜಿತಗೊಳಿಸುತ್ತಿತ್ತು.

ಹೊಸ ಆಯ್ಕೆ ವಿಧಾನದ ಮಾನದಂಡದ ಪ್ರಕಾರ ಕನಿಷ್ಠ 30% ಹಣವನ್ನು ಗೇಮಿಂಗ್ ಸ್ಟೇಷನ್ನಿನ ಬಳಕೆಗೆ, ಹಾಗು ತಲಾ 10% ಹಣವನ್ನು ಆಹಾರ, ಆಟೋಟ, ಪುಸ್ತಕ ಖರೀದಿಗೆ ಮತ್ತು ಮನೋರಂಜನೆಗೆ ಬಳಸಿದವರನ್ನು ಆರಿಸಲಾಗಿತ್ತು. ಅಂದರೆ ಮೊದಲಿಗೆ ಆಯ್ದ 62 ಜನರು ನ್ಯುನತಮ 30% - 40% ರಷ್ಟು ಸಮಯವನ್ನು ವೃತ್ತಿ ಜೀವನಕ್ಕೂ, ಸುಮಾರು 30% - 40% ಸಮಯವನ್ನು ವೈಯಕ್ತಿಕ ಜೀವನದ ನಿರ್ವಹಣೆಗೂ ಅವಿರತವಾಗಿ ಬಳಸಿಕೊಳ್ಳುವ ಕಾರ್ಯಕ್ಷಮತೆ ಹೊಂದಿರುವವರು ಎಂದಾಗುತ್ತದೆ. ಅಧ್ಯಕ್ಷರು ಸೂಚಿಸಿದ ಮತ್ತೊಂದು ಮಾನದಂಡದ ಪ್ರಕಾರ ಇವರ ಪೈಕಿ ಯಾರೆಲ್ಲ ತಮ್ಮ ಬಾಕಿ 20% - 30% ಹಣವನ್ನು ಅನ್ಯರ ಅದರಲ್ಲೂ ಬೇಕಾಬಿಟ್ಟಿಯಿಂದ ಕ್ಯಾಶ್ ಕಾರ್ಡನ್ನು ಖಾಲಿ ಮಾಡಿಕೊಂಡಿದ್ದವರ ಆಹಾರ, ಔಷಧಿ ಮತ್ತು ಗೇಮಿಂಗ್ ಸ್ಟೇಷನ್ನಿನ ಬಳಕೆಗಾಗಿ ಉಪಯೋಗಿಸಿದ್ದರೋ, ಅಂತಹ 23 ಜನರನ್ನು ಆರಿಸಲಾಯಿತು. ಏಕೆಂದರೆ ಇವರಲ್ಲಿ ವೈಯಕ್ತಿಕ ಹಾಗು ವೃತ್ತಿ ಜೀವನದ ಸಮತೋಲನ ಕಾಪಾಡಿಕೊಳ್ಳುವ, ತಮ್ಮ ಮತ್ತು ತಮ್ಮ ಸುತ್ತಲಿನ ಜನರ ಬಗ್ಗೆ ಕಾಳಜಿ ಹಾಗು ವೇಳೆಯನ್ನು ಮೀಸಲಿಡುವ ಕ್ಷಮತೆಯಿದೆ. ಇದೇ ದಿಟವಾದ ನಾಯಕರಲ್ಲಿ ವ್ಯಕ್ತವಾಗುವ ಗುಣಗಳು."

ಇಷ್ಟನ್ನು ಸುಸ್ವಾಸ ಹೇಳಿ ಮುಗಿಸುತ್ತಿದ್ದಂತೆ, ಜೋರಾಗಿ ಗಹಗಹಿಸುತ್ತಾ ನಗುವ ಸದ್ದು ಕಪ್ಪು ಟೆಲಿಫೋನಿನಿಂದ ಹೊರಟಿತು. ಅದರ ಹಿಂದೆಯೇ ಗಡಸಾದ ಧ್ವನಿಯು "ಸುಸ್ವಾಸ ನೀನು ಮನೆ ತಲಪುವ ಮುನ್ನವೇ ಮಾತನಾಡಿ ನನ್ನ ಕಟ್ಟಳೆಯನ್ನು ಮುರಿದಿದ್ದಿ. ನನ್ನನ್ನು ಪುನಃ ಕಾಣಬೇಕಾದರೆ ನಾಳೆ ಸೂರ್ಯೋದಯವಾದ ನಂತರವೇ" ಎಂದು ಹೇಳುತ್ತಾ ಮಾಯವಾಯಿತು.
________________________________________________________________________________

ಶನಿವಾರ, ಅಕ್ಟೋಬರ್ 11, 2008

ಗಾಂಧಿ ತಾತ

ಗಾಂಧಿ ತಾತ
ಆಗಿದ್ದರೂ ನಮ್ಮ ನಿಮ್ಮಂತೆ ಸಾಮಾನ್ಯನೀತ
ತೊಡಗಿ ಸತ್ಯ ಶೋಧನೆಯಲ್ಲಿ ಅವಿರತ
ಭೋಧಿಸಿದ ಸತ್ಯ ಅಹಿಂಸೆಗಳನೀತ
ಬಿತ್ತಿದ ಶಾಂತಿಯುತ ಸತ್ಯಾಗ್ರಹದ ಮಂತ್ರ
ನೆಲೆಸಿರುವನು ನಮ್ಮೆಲ್ಲರ ಮನದಲಿ ಆಗಿ ರಾಷ್ಟ್ರಪಿತ.
__________________________________________________________

ಭಾನುವಾರ, ಸೆಪ್ಟೆಂಬರ್ 28, 2008

ಹುಣ್ಣಿಮೆ ಮತ್ತು ಅಮಾವಾಸ್ಯೆ

ದಸರಾ ಹಬ್ಬದ ಶುಭಾಶಯಗಳು. ನಮ್ಮ ಎಲ್ಲಾ ಹಬ್ಬಗಳು ಸಾಧಾರಣವಾಗಿ ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಪ್ರಾರಂಭವಾಗುತ್ತವೆ. ಈ ಅಮಾವಾಸ್ಯೆ ಮತ್ತು ಹುಣ್ಣಿಮೆಗಳ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ಅವುಗಳನ್ನೆಲ್ಲ ಹಿಡಿದಿಡುವ ಒಂದು ಪ್ರಯತ್ನದ ಫಲವೇ ಈ ಚುಟುಕ.

ಹುಣ್ಣಿಮೆ :
ಬಾನಿನಲ್ಲೆಲ್ಲಾ ಚೆಲ್ಲಿದೆ ಬೆಳ್ಳನೆ ಬೆಳದಿಂಗಳು
ಸ್ಪೂರ್ತಿಗೊಂಡ ಕವಿಗಳು ಹರಿಸುತ್ತಾರೆ ಕವನಗಳ ಸಾಲು ಸಾಲು.
ರೋಮ್ಯಾಂಟಿಕ್ ಮೂಡಿನಲ್ಲಿ ಮೈಮರೆಯುವರು ಕೆಲವು ಪ್ರಣಯಿಗಳು
ಆನಂದಾಶ್ಚರ್ಯಗಳಿಂದ ಕುಣಿದು ಕುಪ್ಪಳಿಸುವರು, ಹಾಲುಗಲ್ಲದ ಹಸುಳೆಗಳು
ಸುಲಭವಾಯಿತು ತಾಯಿಗೆ ಉಣಿಸಲು ಮಗುವನ್ನು, ಬಿಡದೆ ಒಂದೂ ಅಗಳು.
ಮೇಲಿನ ಯಾವ ಗುಂಪಿಗೂ ಸೇರದ ಕೆಲವು ಜನಗಳು
ಹುಚ್ಚುಚ್ಚಾಗಿ ಆಡುವರು, ಇರಲಾಗದೆ ಮಾನಸಿಕ ಸ್ಥಿಮಿತದ ಪರಿಧಿಯೊಳು.
***
ಅಮಾವಾಸ್ಯೆ :
ಮಿನುಗುತ್ತಿರುವುವು ಸಾವಿರಾರು ಚುಕ್ಕೆಗಳು ಥಳ ಥಳ
ಅನುಕೂಲವಾಗಿರುವುದು ಖಗೋಳ ವಿಜ್ಞಾನಿಗೆ ಅರಿಯಲು ಅಂತರಿಕ್ಷದ ಆಳ
ಪೂರ್ಣ ಸೂರ್ಯ ಗ್ರಹಣವಾಗುವುದು ಇದೇ ದಿನ, ಆದರೆ ಅತಿ ವಿರಳ
ಚೈತ್ರ, ವೈಶಾಖ... ಮಾಘ, ಫಾಲ್ಗುಣ, ಆದಿಯಾಗಿರುವುದು ಈ ಎಲ್ಲಾ ತಿಂಗಳುಗಳ
ಈ ದಿನವೇ ನಡೆಸುವರು ಬಹುವಾಗಿ ಪೂಜೆ ಪುನಸ್ಕಾರ, ಮಾಟ ಮಂತ್ರಗಳ
ಜನ ಸಾಮಾನ್ಯರಲ್ಲಿ ಮೂಡಿರುವ ಅಭಿಪ್ರಾಯ, ಈ ರಾತ್ರಿ ಬಹು ಕರಾಳ.
____________________________________________________________________________

ಭಾನುವಾರ, ಸೆಪ್ಟೆಂಬರ್ 21, 2008

ಸತ್ಯವಾನ ಸಾವಿತ್ರಿಯ ಗುಟ್ಟು

ಸತ್ಯವಾನ ಸಾವಿತ್ರಿಯು ಯಮರಾಜನನ್ನು ಬಹಳವಾಗಿ ಪೀಡಿಸಿದರೂ ಅವನು ಸತ್ಯವಾನನ ಪ್ರಾಣವನ್ನು ಮರಳಿ ಕೊಡಲು ಒಪ್ಪಲಿಲ್ಲ. ಕೊನೆಗೆ ಸಾವಿತ್ರಿಯು "ಯಮರಾಜನೇ, ಕಡೇ ಪಕ್ಷ ಈ ಹೂವು ಬಾಡುವವರೆಗಾದರೂ ಪ್ರಾಣವನ್ನು ಹಿಂದಿರಿಗಿಸು " ಎಂದು ಹೇಳಿ ತನ್ನ ತಲೆಯಲ್ಲಿ ಸಿಗಿಸಿಕೊಂಡಿದ್ದ ಹೂವೊಂದನ್ನು ಕೊಟ್ಟಳು.
ಆಗ ಯಮರಾಜ "ಓ! ಹೂವು ತಾನೆ? ಇದು ಎಷ್ಟು ಹೊತ್ತು ಇದ್ದೀತು " ಎಂದುಕೊಂಡು, "ತಥಾಸ್ತು" ಎಂದನು.
ಕೂಡಲೇ ಸಾವಿತ್ರಿಯು ಸತ್ಯವಾನನ ಜೊತೆ ನಡೆದೇ ಬಿಟ್ಟಳು. ಇತ್ತ ಯಮರಾಜ ಹೂವು ಬಾಡುವುದನ್ನೇ ಕಾಯುತ್ತಿದ್ದ.
ಅದಂತೂ, ಅವನ ಜನ್ಮದಲ್ಲಿಯೂ ಸಾಧ್ಯವಾಗದ ಮಾತು. ಏಕೆಂದರೆ ಸಾವಿತ್ರಿಯು ಪ್ಲಾಸ್ಟಿಕ್ ಹೂವನ್ನು ಕೊಟ್ಟಿದ್ದಳು!
_____________________________________________________________________________________

ಮಂಗಳವಾರ, ಸೆಪ್ಟೆಂಬರ್ 16, 2008

ಸುಸ್ವಾಸ ಮತ್ತು ಟೆಲಿಫೋನ್

ಬಾಳೆ ಹಣ್ಣು ತಿನ್ನುವ ಸ್ಪರ್ಧೆ.

ಸುಸ್ವಾಸ ಒಬ್ಬ ಆಲಸಿ ಆದರೆ ತುಂಬಾ ವಿವೇಚನೆಯುಳ್ಳ ಮನುಷ್ಯ. ಅವನು ಯಾವಾಗಲೂ ಸಕಲ ವೈಭೋಗಗಳಿಂದ ಕೂಡಿದ ಜೀವನವನ್ನು ಅನುಭವಿಸುವ ಕನಸನ್ನು ಕಾಣುತ್ತಿದ್ದನು. ಒಂದು ದಿನ ಮದ್ಯಾಹ್ನ ಸುಸ್ವಾಸನು ನಗರದ ಉದ್ಯಾನವನಕ್ಕೆ ಹೋದ. ಅಲ್ಲಿನ ಸರೋವರದ ದಡದ ಬಳಿಯಿರುವ ಬೆಂಚಿನ ಮೇಲೆ ಸುಮ್ಮನೆ ಕುಳಿತುಕೊಂಡಿದ್ದ. ತಂಪಾಗಿ ಬೀಸುತ್ತಿದ್ದ ತಂಗಾಳಿಯು ಸುಸ್ವಾಸನನ್ನು ಕೆಲವೇ ಕ್ಷಣಗಳಲ್ಲಿ ದೂರದ ಸ್ವಪ್ನ ಲೋಕಕ್ಕೆ ಕರೆದೊಯ್ದಿತು. ಆದರೆ ರಿಂಗಣಿಸತೊಡಗಿದ ಅವನ ಮೊಬೈಲು ಪುನಃ ಭೂಲೋಕಕ್ಕೆ ಎಳೆದು ತಂದಿತು. ಆ ಕರೆಯು ಕ್ರೆಡಿಟ್ ಕಾರ್ಡ್ ಕಂಪನಿಯೊಂದು ಸಾಲ ನೀಡುವ ಬಗ್ಗೆ ಎಂದು ತಿಳಿದಾಗ ಸುಸ್ವಾಸನಿಗೆ ಭಯಂಕರ ಸಿಟ್ಟು ಬಂದಿತು. ಆದರೆ ಬಹು ಆಶ್ಚರ್ಯಕರ ರೀತಿಯಲ್ಲಿ ಅಂದು ತಕ್ಷಣವೇ ಶಾಂತ ಸ್ಥಿತಿಗೆ ಮರಳಿದ. ಸುಸ್ವಾಸನಿಗೆ ಅಂದು ಮುಂಜಾನೆ ದಿನಪತ್ರಿಕೆಯಲ್ಲಿ ಓದಿದ್ದ ಸಂಶೋಧನಾತ್ಮಕ ಲೇಖನವು ನೆನಪಿಗೆ ಬಂತು. ಅದರ ಪ್ರಕಾರ ಬೆಳಗಿನ ಜಾವ ಕಂಡ ಕನಸುಗಳಿಗಿಂತ ಮಧ್ಯಾಹ್ನ ಕಂಡ ಕನಸುಗಳೇ ನಿಜವಾಗುವ ಸಂಭವ ಹೆಚ್ಚು ಎಂದಿತ್ತು. ಅವರ ಅಧ್ಯಯನದ ಪ್ರಕಾರ ಮಧ್ಯಾಹ್ನದ ಕನಸುಗಳು ಶೇಕಡ 53 ರಷ್ಟು ನಿಜವಾಗಿದ್ದರೆ, ಮುಂಜಾವಿನ ಕನಸುಗಳು ಕೇವಲ 49 ರಷ್ಟು ನಿಜವಾಗಿದ್ದವು. ಸುಸ್ವಾಸನ ಒಳ ಮನಸ್ಸು ಆಗ ತಾನೇ ಕಂಡಿದ್ದ ಕನಸನ್ನು ನಂಬುವಂತೆ ಹೇಳಿತು.

ಆ ಕನಸಲ್ಲಿ ಸರೋವರದ ಮೇಲಿನ ಮಂಜು, ಮನುಷ್ಯನ ರೂಪ ತಾಳಿ, ಸುಸ್ವಾಸನನ್ನು ಒಂದು ಪಾಳು ಬಿದ್ದ ಜಾಗಕ್ಕೆ ಕರೆದೊಯ್ದಿತು. ಅಲ್ಲಿ ಮಂಜಿನ ಮನುಷ್ಯನು ಹಳೇ ಮಾದರಿಯ ಕಪ್ಪು ಟೆಲಿಫೋನನ್ನು ತೋರಿಸಿ ಸುಸ್ವಾಸನನ್ನು ಕುರಿತು "ಇದನ್ನು ನಿನ್ನ ಮನೆಯ ಲಿವಿಂಗ್ ರೂಮಿನ ಈಶಾನ್ಯ ದಿಕ್ಕಿನಲ್ಲಿ ಇರಿಸಿದರೆ, ಸಕಲ ಸಂಪತ್ತು, ಮರ್ಯಾದೆಗಳು ನಿನ್ನ ನೆರಳಿನಂತೆ ಯಾವಾಗಲು ನಿನ್ನನ್ನು ಹಿಂಬಾಲಿಸುತ್ತವೆ" ಎಂದು ಹೇಳಿತು. ( ಮೇಲೆ ತೋರಿಸಿರುವ ಚಿತ್ರದಲ್ಲಿರುವ ಟೆಲಿಫೋನಿನ ಮಾದರಿಯು ಸುಮಾರು ಇಪ್ಪತ್ತು ವರ್ಷಗಳಿಗಿಂತಲೂ ಹಿಂದೆ ಚಾಲ್ತಿಯಲ್ಲಿತ್ತು. ಈಗ ಇದನ್ನು ಮ್ಯುಸಿಯಮ್ಮಿನಲ್ಲೂ ಕಾಣಸಿಗುವುದು ಕಷ್ಟ! )ಸುಸ್ವಾಸನಿಗೆ, ಅಂತಹ ಟೆಲಿಫೋನ್ ಸಿಗುವುದಾದರೆ, ಅದು ಟೆಲಿಪುರಮ್ಮಿನಲ್ಲಿ ಮಾತ್ರ ಸಾಧ್ಯ ಎಂದು ಥಟ್ಟನೆ ಹೊಳೆಯಿತು.

ಟೆಲಿಪುರಂ ನಗರದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶ. ಅಲ್ಲಿಗೆ ಹೊರಡಲು ಅನುವಾದ ಸುಸ್ವಾಸನು ತನ್ನ ವಾಚಿನ ಕಡೆಗೊಮ್ಮೆ ಕಣ್ಣು ಹಾಯಿಸಿದ. ಅದಾಗಲೇ ಎರಡು ಗಂಟೆಯಾಗುತ್ತಲಿತ್ತು. ಮೊದಲ ಶಿಫ್ಟಿನ ಕೆಲಸ ಮುಗಿಯುವ ಹಾಗು ಟ್ರಾಫಿಕ್ ಜ್ಯಾಮಿಗೆ ನಾಂದಿ ಹಾಡುವ ಸಮಯವದಾಗಿತ್ತು. ಇಂತಹ ಟ್ರಾಫಿಕ್ ಜ್ಯಾಮಿನಲ್ಲಿ ಸಿಕ್ಕು ಹೆಣಗಾಡುವುದು ಸುಸ್ವಾಸನಿಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಆ ನಗರದ ಟ್ರಾಫಿಕ್ ಜ್ಯಾಮುಗಳ ಯಾತನೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸುಸ್ವಾಸನು ಟ್ರಾಫಿಕ್ಕನ್ನು ತಪ್ಪಿಸಿಕೊಳ್ಳಲು ನಿಧಿಯನ್ನೂ ಕೂಡ ಕೈಬಿಡಲು ಸಿದ್ಧನಿದ್ದ! ಆದ್ದರಿಂದ ಕನಸಿನ ನಿಧಿಯನ್ನು ತರಲು ಮಾರನೇ ದಿನದ ಮುಂಜಾನೆಯೇ ಸೂಕ್ತವೆಂದು ನಿರ್ಧರಿಸಿದನು.

ಮರುದಿನ ಬೆಳಗಿನ ಜಾವ ಸುಸ್ವಾಸನು ಕನಸಿನಲ್ಲಿ ಕಂಡಿದ್ದ ಟೆಲಿಪುರಮ್ಮಿನ ಪಾಳು ಜಾಗಕ್ಕೆ ಬಂದ. ಅಲ್ಲೇ ರಸ್ತೆ ಬದಿಯ ಡಬ್ಬಿ ಅಂಗಡಿಯ ಮುಂದೆ ತನ್ನ ಕಾರನ್ನು ನಿಲ್ಲಿಸಿದ. ಆ ಪಾಳು ಜಾಗವು ಹಿಂದೊಮ್ಮೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಟೆಲೆಸಂಪರ್ಕ ಸಾಧನಗಳನ್ನು ತಯಾರಿಸುತ್ತಿದ್ದ ಕಾರ್ಖಾನೆಯಾಗಿತ್ತು. ತದನಂತರ ಕ್ಷಿಪ್ರವಾಗಿ ಬೆಳೆಯುತ್ತಿದ್ದ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲಾಗದೆ ಹಾಗು ಜಾಗತೀಕರಣದ ಸೆಳೆತಕ್ಕೆ ಸಿಲುಕಿ ಈ ಪರಿಸ್ಥಿತಿಯನ್ನು ತಲುಪಿತ್ತು. ಅಂತಹ ಪಾಳು ಬಿದ್ದ ಕಾರ್ಖಾನೆಯ ಆವರಣದಲ್ಲಿ ಕಪ್ಪು ಟೆಲಿಫೋನಿಗಾಗಿ ಸುಸ್ವಾಸನು ಹುಡುಕಾಡತೊಡಗಿದ. ಸೂರ್ಯನು ನೆತ್ತಿಯ ಮೇಲೆ ಬರುವವರೆಗೂ ಅಲ್ಲಿ ಬಿದ್ದಿದ್ದ ಲೋಹದ ಫ್ರೇಮುಗಳು, ಮುರಿದು ಹೋಗಿರುವ ಟೆಲಿ ಉಪಕರಣಗಳ ತುಣುಕುಗಳು, ತಂತಿಗಳು, ಹರಿದು ಮುಕ್ಕಾಗಿದ್ದ ಡಬ್ಬಗಳು ಕಂಡವೇ ಹೊರತು ಕನಸಿನ ಟೆಲಿಫೋನು ಮಾತ್ರ ಸಿಗಲಿಲ್ಲ. ಬಾಯಾರಿ ಬಳಲಿದ್ದ ಸುಸ್ವಾಸನು ಡಬ್ಬಿ ಅಂಗಡಿಯ ಬಳಿಬಂದು ನಿಂಬೆ ಶರಬತ್ತಿಗೆ ಆರ್ಡರ್ ಮಾಡಿದ.

ಸುಸ್ವಾಸನು ತನ್ನದೇ ಆದ ಯೋಚನೆಗಳಲ್ಲಿ ಮುಳುಗಿದ್ದರಿಂದ ಪಾಳು ಕಾರ್ಖನೆಯನ್ನೆ ದಿಟ್ಟಿಸಿ ನೋಡುತ್ತಿದ್ದ ಅವನ ಕಣ್ಣುಗಳಲ್ಲಿ ಬರೀ ಶೂನ್ಯತೆಯೇ ತುಂಬಿತ್ತು. ಅದೇ ಸಮಯದಲ್ಲೊಬ್ಬ ಗಿರಾಕಿಯು ಸಿಗರೇಟನ್ನು ಖರೀದಿಸಿ ಅದನ್ನು ಹೊತ್ತಿಸಿಕೊಳ್ಳಲು ಮೂಲೆಯ ಕಡೆಗೆ ತಿರುಗಿದನು. ಸಿಗರೇಟನ್ನು ಹೊತ್ತಿಸಿಕೊಳ್ಳಲಾಗದಿದ್ದರಿಂದ ಅ ಗಿರಾಕಿಯು ಅಂಗಡಿ ಮಾಲೀಕನನ್ನು ದೂರತೊಡಗಿದ. ಅಂಗಡಿಯ ಮಾಲೀಕನು ಅವನಿಗೆ ಬೆಂಕಿಪೊಟ್ಟಣವನ್ನು ಕೊಟ್ಟು ಮೂಲೆಯಲ್ಲಿದ್ದ ಕಪ್ಪಗಿನ ಡಬ್ಬಿಯಂತಹ ವಸ್ತುವನ್ನು ಅಲ್ಲಾಡಿಸಿ ಒಂದೆರಡು ಬಾರಿ ಕುಕ್ಕಿದ. ಅದು ಪ್ರಯೋಜನವಾಗದಿದ್ದಾಗ "ಅಯ್ಯೋ, ಇದೊಂದು ವಾರದಿಂದ ಕೆಟ್ಟು ಹೋಗಿ ನೂರಾರು ಗಿರಾಕಿಗಳಿಗೆ ಉತ್ತರ ಹೇಳಿ ಹೇಳಿ ಸಾಕಾಗಿಹೋಗಿದೆ. ಇದನ್ನು ಬಿಸಾಡುವುದೇ ಉತ್ತಮ " ಎಂದು ತನ್ನಲ್ಲೇ ಗೊಣಗಿಕೊಂಡ. ಈ ಗಲಾಟೆಯು ಸುಸ್ವಾಸನ ಯೋಚನಾ ಲಹರಿಯನ್ನು ತುಂಡರಿಸಿ, ಅಂಗಡಿಯ ಕಡೆ ನೋಡುವಂತೆ ಮಾಡಿತು.ಸುಸ್ವಾಸನಿಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಅವನ ಮಧ್ಯಾಹ್ನದ ಕನಸಿನಲ್ಲಿ ಮಂಜಿನ ಮನುಷ್ಯ ತೋರಿಸಿದ್ದ ಕಪ್ಪು ಟೆಲಿಫೋನ್ ಅಂಗಡಿಯ ಮೂಲೆಯಲ್ಲಿ ಕುಳಿತಿತ್ತು. ಡಬ್ಬಿ ಅಂಗಡಿಯವನು ಆ ಟೆಲಿಫೋನಿಗೆ ವಿದ್ಯುತ್ ನಿರೋಧಕದ ಒಂದು ಸಣ್ಣ ಸುರುಳಿಯನ್ನು ಸೇರಿಸಿ ಸಿಗರೇಟು ಹಚ್ಚಿಕೊಳ್ಳುವ ಅಗ್ಗಿಷ್ಟಿಕೆಯಾಗಿ ಮಾರ್ಪಡಿಸಿಕೊಂಡಿದ್ದನು! ಅದೇ ವೇಳೆಗೆ ಅಂಗಡಿಯ ಮಾಲೀಕನು ತನ್ನ ಸಹಾಯಕನನ್ನು ಕರೆದು "ಏಯ್, ಚೋಟು ಬೇಗನೆ ಅವರಿಗೆ ನಿಂಬೆ ಶರಬತ್ತು ಕೊಟ್ಟು, ಈ ದರಿದ್ರ ಪೆಟ್ಟಿಗೆಯನ್ನು ಎದುರಿನ ಪಾಳು ಜಾಗಕ್ಕೆಸೆದು ಬಾ" ಎಂದು ಹೇಳಿದನು. ಅಂಗಡಿಯವನಿಗೆ ಆ ಪೆಟ್ಟಿಗೆಯೊಡನೆ ಹಗಲೆಲ್ಲಾ ಹೆಣಗಾಡುವುದಕ್ಕಿಂತ, ಗಿರಾಕಿಗಳಿಗೆ ಬೆಂಕಿಪೊಟ್ಟಣ ಕೊಡುವುದೇ ಲೇಸೆನಿಸಿತು.

ಒಂದೇ ಕ್ಷಣದಲ್ಲಿ ಶರಬತ್ತನ್ನು ಗುಟುಕರಿಸಿದ ಸುಸ್ವಾಸನು ಅಂಗಡಿಯವನಿಗೆ ಲಗುಬಗೆಯಿಂದ ಹಣವನ್ನು ನೀಡಿ, ಚೋಟುವನ್ನು ಹಿಂಬಾಲಿಸಿದನು. ಪಾಳು ಜಾಗದ ಕಾಂಪೌಂಡಿನ ಬದಿಯಲ್ಲಿ ನಿಂತ ಸುಸ್ವಾಸನು, ಚೋಟು ಅಲ್ಲಿಂದ ಅಂಗಡಿಗೆ ಹಿಂತಿರುಗುವುದನ್ನೇ ಕಾತುರತೆಯಿಂದ ಕಾಯುತ್ತಿದ್ದ. ಚೋಟು ಅಂಗಡಿಗೆ ತಲುಪಿದ್ದು ಖಾತ್ರಿಯದೊಡನೆ, ಒಂದೇ ಹಾರಿಗೆ ಟೆಲಿಫೋನ್ ಬಿದ್ದ ಜಾಗವನ್ನು ತಲುಪಿ ಅದನ್ನು ತೆಗೆದುಕೊಂಡು ಲಗುಬಗೆಯಿಂದ ಕಾರಿನ ಬಳಿ ಬಂದ. ಮರುಕ್ಷಣದಲ್ಲಿಯೇ ಸುಸ್ವಾಸನ ಕಾರು ಮುಖ್ಯ ರಸ್ತೆಯಲ್ಲಿ ಓಡುತ್ತಿತ್ತು. ಕಪ್ಪು ಟೆಲಿಫೋನ್ ಮುಂದಿನ ಸೀಟಿನ ಮೇಲೆ ಭದ್ರವಾಗಿ ಕುಳಿತಿತ್ತು.

ಸುಸ್ವಾಸನ ಸಂತೋಷಕ್ಕೆ ಪಾರವೇ ಇರಲಿಲ್ಲ. ಟೆಲಿಫೋನ್ ಸಿಕ್ಕಿದ್ದು ಒಂದು ಕಾರಣವಾದರೆ, ಆ ಸಮಯದಲ್ಲಿ ವಾಹನಗಳ ದಟ್ಟಣೆ ಕಡಿಮೆಯಿದ್ದದ್ದು, ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು. ಹೀಗಾಗಿ ಸುಸ್ವಾಸನು ರೇಡಿಯೊ ಬಟನ್ ಅದುಮಿ ಎಫ್ ಎಮ್ ಸ್ಟೇಷನ್ನಿನ ಸಂಗೀತವನ್ನು ಸವಿಯುತ್ತಾ ಸರಾಗವಾಗಿ ತನ್ನ ಕಾರನ್ನು ಮನೆ ಕಡೆ ಮುನ್ನಡೆಸಿದ.

ಟ್ರಿಣ್ ಟ್ರಿಣ್ ಟ್ರಿಣ್ ಟ್ರಿಣ್ ಎಂಬ ಶಬ್ದ ಕೇಳಿದ ಸುಸ್ವಾಸನು, "ಈ ರಿಂಗ್ ಟೋನನ್ನು ಯಾರ ಹೆಸರಿಗೂ ಸೆಟ್ ಮಾಡಿಲ್ಲವಲ್ಲ" ಎಂದುಕೊಳ್ಳುತ್ತಲೇ ತನ್ನ ಮೊಬೈಲಿರುವ ಜೇಬಿಗೆ ಕೈ ಹಾಕಿದ. ಮೊಬೈಲಿನಲ್ಲಿ ಯಾವ ಕರೆಯೂ ಇರಲಿಲ್ಲ, ಆದರೆ ಟ್ರಿಣ್ ಟ್ರಿಣ್ ಶಬ್ದವು ಜೋರಾಗತೊಡಗಿತ್ತು. ಪಕ್ಕಕ್ಕೆ ತಿರುಗಿದ ಸುಸ್ವಾಸನಿಗೆ ಆ ಶಬ್ದವು ಕಪ್ಪು ಟೆಲಿಫೋನಿನಿಂದ ಎಂದು ತಿಳಿದು ಆಶ್ಚರ್ಯವಾಯಿತು. ಆದರೂ ಅದನ್ನು ಪರೀಕ್ಷಿಸಲೆಂದು ರಿಸೀವರನ್ನು ಎತ್ತಿಕೊಂಡನು. ಆಗ ಗಡಸಾದ ಧ್ವನಿಯೊಂದು "ಸುಸ್ವಾಸ ನನ್ನನ್ನು ಹುಡುಕಿ ತಂದುದಕ್ಕಾಗಿ ಅಭಿನಂದನೆಗಳು. ನಾನು ಮುಂದುವರೆಸುವ ಮುನ್ನ ಕಾರನ್ನು ರಸ್ತೆ ಬದಿಗೆ ನಿಲ್ಲಿಸು. ಇಲ್ಲವಾದರೆ ಕಾರು ಚಲಾಯಿಸುವಾಗ ಫೋನಿನಲ್ಲಿ ಮಾತಾಡುತ್ತಿರುವೆಯೆಂದು ಪೊಲೀಸರು ದಂಡ ಹಾಕುವರು" ಎಂದು ಹೇಳಿತು. ಕಪ್ಪು ಟೆಲಿಫೋನಿನ ಮಾತು ಆಲಿಸಲು ಸುಸ್ವಾಸನು ಕಾರನ್ನು ಬದಿಗೆ ನಿಲ್ಲಿಸಿ, ರೇಡಿಯೋವನ್ನು ಕೂಡ ಆಫ್ ಮಾಡಿದ.

ಟೆಲಿಫೋನಿನ ಗಡಸು ಧ್ವನಿ ತನ್ನ ಮಾತನ್ನು ಮುಂದುವರೆಸುತ್ತಾ, "ಈಗ ನಿನ್ನ ಆಶಯದಂತೆ ಸಕಲ ಸಂಪತ್ತು, ಮರ್ಯಾದೆಗಳು ನಿನಗೆ ದೊರೆಯುತ್ತವೆ. ಆದರೆ ಇದೆಲ್ಲವನ್ನು ಪಡೆಯಲು ಒಂದು ಕಟ್ಟಳೆಯನ್ನು ಪಾಲಿಸಬೇಕು" ಎನ್ನುತ್ತಿರುವಾಗ ಸುಸ್ವಾಸನು "ಏನದು ಕಟ್ಟಳೆ?" ಎಂದು ಕೇಳಿದನು. ಗಡಸು ಧ್ವನಿಯು ಮುಂದುವರೆಸುತ್ತಾ "ನಿನ್ನ ಮೊಬೈಲಿನಿಂದ 464 ಕ್ಕೆ 'ನೇಚರ್' ಎಂದು ಎಸ್ ಎಮ್ ಎಸ್ ಕಳುಹಿಸಬೇಕು ..." ಎಂದು ಹೇಳುತ್ತಿರುವಾಗಲೇ ಸುಸ್ವಾಸನು ಪುನಃ ಮಧ್ಯದಲ್ಲೇ "464 ಕ್ಕೆ ಕಳುಹಿಸಬೇಕಾ?" ಎಂದುಚ್ಚರಿಸಿದನು. ಆಗ ಫೋನಿನ ಧ್ವನಿಯು ಇನ್ನಷ್ಟು ಗಡಸಾಗಿ "ನನ್ನ ಮಾತುಗಳನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದಿದ್ದರೆ ನಾನೀಗಲೇ ಪಾಳು ಜಾಗಕ್ಕೆ ವಾಪಾಸ್ಸಗುತ್ತೇನೆ. ಆದರೆ ನಿನಗೆ ಅಲ್ಲಿ ಪುನಃ ಕಾಣಿಸಿಕೊಳ್ಳಬೇಕಾದರೆ ಮರುದಿನದ ಸೂರ್ಯೋದಯದವರೆಗೆ ಕಾಯಬೇಕಾಗುತ್ತದೆ." ಎಂದು ಹೇಳಿ ತನ್ನ ಮಾತನ್ನು ಮುಂದುವರೆಸಿತು, "ಹೌದು, 464 ಕ್ಕೆ ಎಸ್ ಎಮ್ ಎಸ್ ಕಳುಹಿಸಬೇಕು. ಆಗ ನೋಂದಣಿಯನ್ನು ಖಾತ್ರಿ ಪಡಿಸಲು ನಿನಗೊಂದು ಮೆಸೇಜ್ ಬರುತ್ತದೆ. ಅದರಲ್ಲಿ ನಾಲ್ಕು ಆಯ್ಕೆಗಳಿರುತ್ತವೆ. 1,2,3 ಅಥವಾ ಸಂಖ್ಯೆ 4 ರ ಬಟನ್ ಒತ್ತುವ ಮೂಲಕ ನಿನ್ನ ಆಯ್ಕೆಯನ್ನು ಸೂಚಿಸಬೇಕು. ಆದರೆ ಕಟ್ಟಳೆ ಪ್ರಕಾರ ನೀನು ಕೇವಲ ಸಂಖ್ಯೆ 4 ನ್ನೇ ಒತ್ತಬೇಕು ಮತ್ತು ಮನೆ ತಲಪುವವರೆಗೂ ಮಾತನಾಡಕೂಡದು. ಈ ಕಟ್ಟಳೆಯನ್ನು ಮುರಿದರೆ , ತಕ್ಷಣವೇ ನಾನು ಮಾಯವಾಗುತ್ತೇನೆ. ಮತ್ತು ಆಗಲೇ ಹೇಳಿದಂತೆ ನಾನು ಪುನಃ ಕಾಣಿಸಿಕೊಳ್ಳುವುದು ಮಾರನೇ ದಿನದ ಸೂರ್ಯೋದಯದ ನಂತರವೇ."

ಇದೆಲ್ಲವನ್ನು ಕೇಳಿಸಿಕೊಂಡ ಸುಸ್ವಾಸನು ಕಪ್ಪು ಟೆಲಿಫೋನನ್ನು ಕಳೆದುಕೊಳ್ಳಲು ಇಚ್ಚಿಸದೆ, 464 ಕ್ಕೆ 'ನೇಚರ್' ಎಂದು ಕೂಡಲೇ ಎಸ್ ಎಮ್ ಎಸ್ ಮಾಡಿದ. ಮರುಕ್ಷಣವೇ ಅವನ ಮೊಬೈಲಿನ ಬೀಪ್ ಬೀಪ್ ಮೆಸೇಜ್ ಬಂದಿರುವುದನ್ನು ಸೂಚಿಸಿತು.
"ನಮ್ಮಲ್ಲಿ ನೋಂದಾಯಿಸಿಕೊಂಡದ್ದಕ್ಕಾಗಿ ವಂದನೆಗಳು. ಡೇಟಿಂಗ್ ಸೇವೆಗೆ ಸಂಖ್ಯೆ 1 ನ್ನು, ಭವಿಷ್ಯವನ್ನು ಕೇಳಲು ಸಂಖ್ಯೆ 2 ನ್ನು , ಆರೋಗ್ಯದ ಸಲಹೆಗಳಿಗಾಗಿ ಸಂಖ್ಯೆ 3 ನ್ನು ಮತ್ತು ಕಥೆ ಕೇಳಲು ಸಂಖ್ಯೆ 4 ನ್ನು ಒತ್ತಿರಿ" ಎಂದು ಬಂದಿದ್ದ ಮೆಸೇಜನ್ನು ಓದಿದ ಸುಸ್ವಾಸನು ಯಾವುದೇ ವಿಚಾರಕ್ಕೂ ಆಸ್ಪದ ಕೊಡದೆ ಸಂಖ್ಯೆ 4 ನ್ನು ಒತ್ತಿದ. ಆಗ ಗಡಸಾದ ಧ್ವನಿಯು "ಸುಸ್ವಾಸ ನೀನು ಒಳ್ಳೆಯ ಕೆಲಸವನ್ನೇ ಮಾಡಿರುವೆ, ಈಗ ನಿನ್ನ ಬ್ಲೂ ಟೂತ್ ಇಯರ್ ಫೋನನ್ನು ಕಿವಿಗೆ ಸಿಗಿಸಿಕೊಂಡು ಕಾರನ್ನು ಮನೆ ಕಡೆಗೆ ಚಲಾಯಿಸು. ಕೊನೆಯದಾಗಿ ಮತ್ತೊಮ್ಮೆ ನಿನಗೆ ಎಚ್ಚರಿಕೆ ಕೊಡುತ್ತೇನೆ. ನನ್ನನ್ನು ಲಿವಿಂಗ್ ರೂಮಿನಲ್ಲಿ ಸ್ಥಾಪಿಸುವವರೆಗೂ ಮಾತನಾಡಕೂಡದು" ಎಂದು ಹೇಳಿ ಸುಮ್ಮನಾದ ಕೊಡಲೇ ಸುಸ್ವಾಸನ ಇಯರ್ ಫೋನಿನಲ್ಲಿ ಕಥೆಯೊಂದು ಪ್ರಾರಂಭವಾಯಿತು.

ಕಳೆದೊಂದು ವರ್ಷದಿಂದ ಬಿಪಿಒ ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಪ್ರತಿ ನಿತ್ಯದ ಕೆಲಸದ ಒತ್ತಡದಿಂದಾಗಿ ಬಹಳ ಬೇಸರಗೊಂಡಿದ್ದ. ಹೀಗಾಗಿ ವಾರಾಂತ್ಯದ ಜೊತೆ ಬರಲಿರುವ ಹಬ್ಬಗಳ ರಜೆಯನ್ನೂ ಸೇರಿಸಿ ಮೈಮನಗಳ ಪುನಃಶ್ಚೇತನಕ್ಕೆ ಯಾವುದಾದರೂ ವಿಶ್ರಾಂತಿ ಧಾಮಕ್ಕೆ ಹೋಗಬೇಕೆಂದು ನಿರ್ಧರಿಸಿದ. ಇಂತಹ ಐಟಿ ಬಿಟಿ ಉದ್ಯೋಗಿಗಳಿಂದಾಗಿ ವಿಶ್ರಾಂತಿ ಧಾಮಗಳು ಯೋಗ, ಧ್ಯಾನ ಶಿಬಿರಗಳು, ಪ್ರಕೃತಿ ಚಿಕಿತ್ಸೆ, ಅರೋಮ ಥೆರಪಿ, ಆಯುರ್ವೇದ ಚಿಕಿತ್ಸೆಗಳ ಪ್ಯಾಕೆಜಗಳನ್ನು ನೀಡುತ್ತಾ ದೊಡ್ಡ ಉದ್ದಿಮೆಗಳಾಗಿ ಬೆಳೆದು ಬಿಟ್ಟಿವೆ. ಒಂದು ಸೂಕ್ತ ತಾಣವನ್ನು ಹುಡುಕಲು ಆ ಬಿಪಿಒ ಉದ್ಯೋಗಿಯು ಅಂತರ್ಜಾಲದ ಮೊರೆ ಹೊಕ್ಕ. ಗೂಗಲ್ ಸರ್ಚನಲ್ಲಿ 'ವಿಶ್ರಾಂತಿ ಧಾಮ' ಎಂದು ಟೈಪ್ ಮಾಡಿ ಮೌಸನ್ನು ಕ್ಲಿಕ್ಕಿಸಿದೊಡನೆ ಕಂಪ್ಯೂಟರ್ ಪರದೆಯ ಮೇಲೆ ಮೂಡಿದ ನೂರಾರು ಲಿಂಕುಗಳ ಪಟ್ಟಿಯನ್ನು ಕಂಡು ಗಲಿಬಿಲಿಗೊಳಗಾದ. ಅಷ್ಟು ಉದ್ದನೆಯ ಪಟ್ಟಿಯಿಂದ ತನಗೆ ಬೇಕಾದ ಮಾಹಿತಿಯನ್ನು ಹುಡುಕಲು ಸ್ಕ್ರೋಲ್ ಮಾಡುತ್ತ ಪಟ್ಟಿ ಮಾಡಲ್ಪಟ್ಟ ಲಿಂಕುಗಳನ್ನು ಪರಿಶೀಲಿಸತೊಡಗಿದ.
ಹೀಗೇ ಸ್ಕ್ರೋಲ್ ಮಾಡುತ್ತಾ ಹೋಗುವಾಗ ಆಕಸ್ಮಿಕವಾಗಿ ಲಿಂಕೊಂದರ ಮೇಲೆ ಕ್ಲಿಕ್ ಮಾಡಿದನು. ಅದು 'ಯು ಟ್ಯೂಬ್ ' ವೆಬ್ ಸೈಟಿನಲ್ಲಿ ಹಾಕಿದ್ದ ವಿಡಿಯೋ ತುಣುಕಾಗಿತ್ತು. ಅದರ ಶೀರ್ಷಿಕೆ "ಬಾಳೆ ಹಣ್ಣು ತಿನ್ನುವ ಸ್ಪರ್ಧೆ - ಧ್ಯಾನ ಶಿಬಿರದ ಕೊನೆಯ ದಿನ" ಎಂದಿತ್ತು. ಕೆಲವೇ ಗಳಿಗೆಯಲ್ಲಿ ವಿಡಿಯೋ ಡೌನ ಲೋಡ್ ಮಾಡಲ್ಪಟ್ಟು, ಚಿತ್ರಗಳು ಮೂಡತೊಡಗಿತು.

ಅದೊಂದು ದೊಡ್ಡ ಸಭಾಂಗಣ. ಸುಮಾರು ನಾನ್ನೂರು ಜನರು ಗುರುಗಳ ಬರುವಿಗೆ ಕಾಯುತ್ತಿದ್ದರು. ಒಂದು ವಾರದ ಧ್ಯಾನ ಶಿಬಿರದ ಮುಕ್ತಾಯ ಸಮಾರಂಭದ ಸಂದರ್ಭದಲ್ಲಿ ಗುರುಗಳು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡತೊಡಗಿದರು. "ನಲ್ಮೆಯ ಗೆಳೆಯರೇ, ಈಗ ಪರೀಕ್ಷೆಯ ಸಮಯ! ನೀವೆಲ್ಲರೂ ಈ ಒಂದು ವಾರದಿಂದ ಅನೇಕ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ್ದೀರಿ. ಅವುಗಳಿಂದ ನಿಮ್ಮನ್ನು ನೀವು ಎಷ್ಟು ಅರಿತಿದ್ದೀರಿ, ಎಷ್ಟು ಸಹಾಯಕವಾಗಿದೆ ಎಂದು ತಿಳಿಯುವುದಕ್ಕೆ ಈ ಪರೀಕ್ಷೆ. ಆದರೆ ಈ ಸಲದ ಪರೀಕ್ಷೆ ಹೊಸದಾಗಿದೆ. ಆದ್ದರಿಂದ ನೀವೇನಾದರೂ ಈ ಮುಂಚೆ ಭಾಗವಹಿಸಿದ್ದ ಅಭ್ಯರ್ಥಿಗಳಿಂದ ತಿಳಿದು ಈ ಪರೀಕ್ಷೆಗೆ ತಯಾರಾಗಿದ್ದಾರೆ ಅದು ವ್ಯರ್ಥವೆಂದೇ ತಿಳಿಯಿರಿ. ಇನ್ನು ಮುಂದೆ ಪ್ರತಿ ಶಿಬಿರದ ಕೊನೆಗೆ ಹೊಸ ಪರೀಕ್ಷೆ ಸಿದ್ಧವಾಗಿರುತ್ತದೆ. ಮುಂಬರುವ ಶಿಬಿರಾರ್ಥಿಗಳಿಗೆ ಇದನ್ನು ನೀವು ತಿಳಿಸುವಿರೆಂದು ನಂಬಿದ್ದೇನೆ.
ಈಗ ನೀವೆಲ್ಲರೂ ನಿಮಗೆ ಅನುಕೂಲವಾದ ಭಂಗಿಯಲ್ಲಿ ಆರಾಮವಾಗಿ ಕುಳಿತುಕೊಂಡು ಕಣ್ಣುಗಳನ್ನು ಮುಚ್ಚಿರಿ. ನಿಮ್ಮ ಹಸ್ತಗಳು ತೆರೆದಿರಲಿ. ನಿಮ್ಮ ಗಮನ ಉಸಿರಾಟದ ಕಡೆಗಿರಲಿ. ಎಲ್ಲಾ ತರಹದ ಯೋಚನೆಗಳನ್ನು ಸ್ವಾಗತಿಸಿ ಮತ್ತು ಹಾಗೇ ಹೋಗಲು ಬಿಡಿ."

ಕೆಲವು ಸಮಯ ಕಳೆದ ನಂತರ ಗುರುಗಳ ಸಂಜ್ಞೆಯ ಮೇರೆಗೆ ಅಲ್ಲಿದ್ದ ಸ್ವಯಂಸೇವಕರು ಪ್ರತಿಯೊಬ್ಬ ಶಿಬಿರಾರ್ಥಿಗಳ ಕೈಯಲ್ಲಿ ಒಂದೊಂದು ಬಾಳೆ ಹಣ್ಣನ್ನು ಇಡುತ್ತಾ ಸಾಗಿದರು. ಆಗ ಗುರುಗಳು "ನಿಮ್ಮ ಕಣ್ಣುಗಳು ಮುಚ್ಚೇ ಇರಲಿ. ನಿಮ್ಮ ಸುತ್ತ ಮುತ್ತ ನಡೆಯುತ್ತಿರುವ ವಿದ್ಯಮಾನಗಳಿಂದ ವಿಚಲಿತರಾಗಬೇಡಿ. ನಿಶ್ಚಲತೆಯಿಂದ ಕುಳಿತು ನಿಮ್ಮ ಗಮನವನ್ನು ಉಸಿರಾಟದ ಮೇಲೆ ಇರಿಸಿ ಧ್ಯಾನವನ್ನು ಮುಂದುವರೆಸಿ" ಎಂದು ಹೇಳಿದರು.

ಹಾಗೇ ಸ್ವಲ್ಪ ಸಮಯ ಕಳೆದ ನಂತರ ಗುರುಗಳು "ನಿಧಾನವಾಗಿ ಎಲ್ಲರೂ ಕಣ್ಣುಗಳನ್ನು ಬಿಡಿ. ನಿಮ್ಮ ಕೈಯಲ್ಲಿರುವ ಬಾಳೆ ಹಣ್ಣನ್ನು ಒಮ್ಮೆ ಗಮನಿಸಿ. ಈಗ ಬಾಳೆ ಹಣ್ಣು ತಿನ್ನುವ ಸ್ಪರ್ಧೆ! ಆದರೆ ಆ ಬಾಳೆ ಹಣ್ಣನ್ನು ಎಲ್ಲರೂ ನೋಡುವಂತಹ ಜಾಗದಲ್ಲಿ ತಿನ್ನಬೇಕು. ಇದಕ್ಕೆ ನಿಮಗಿರುವ ಕಾಲಾವಕಾಶ ಕೇವಲ ಹತ್ತು ನಿಮಿಷಗಳು ಮಾತ್ರ." ಎಂದರು.

ಎಲ್ಲಾ ಶಿಬಿರಾರ್ಥಿಗಳು ಬಾಳೆ ಹಣ್ಣಿನ ಸಿಪ್ಪೆ ಸುಲಿದು ಇತರರ ಗಮನ ಸೆಳೆಯುತ್ತಾ ತಿನ್ನತೊಡಗಿದರು. ಅಷ್ಟೊಂದು ಜನರ ಗಮನ ಸೆಳೆಯುವುದು ಕಷ್ಟದ ಕೆಲಸವೇ ಸರಿ. ಹೀಗಾಗಿ ಅಲ್ಲಿ ನೂಕು ನುಗ್ಗಲಾಟದ ಪರಿಸ್ಥಿತಿಯುಂಟಾಗಿತ್ತು. ಆಗ ಒಬ್ಬ ಶಿಬಿರಾರ್ಥಿಯು ಗುರುಗಳು ಕುಳಿತಿದ್ದ ವೇದಿಕೆಯ ಕಡೆ ಜೋರಾಗಿ ಓಡಿದನು. ಈ ಘಟನೆಯಿಂದ ಎಲ್ಲಾ ಶಿಬಿರಾರ್ಥಿಗಳ ಗಮನ ಗುರುಗಳ ಕಡೆ ತಿರುಗಿತು. ಆಗ ಗುರುಗಳ ಕಡೆ ಓಡಿದ್ದ ಶಿಬಿರಾರ್ಥಿಯು ಥಟ್ಟನೆ ಗುರುಗಳ ಹಿಂದೆ ಅವಿತುಕೊಂಡನು. ಒಂದೆರಡು ಕ್ಷಣದ ನಂತರ, ಬಾಳೆ ಹಣ್ಣಿನ ಸಿಪ್ಪೆಯನ್ನು ಎಲ್ಲರಿಗೂ ಕಾಣುವಂತೆ ತಿರುಗಿಸುತ್ತಾ ತನ್ನ ಸ್ಥಳಕ್ಕೆ ಬಂದು ಕುಳಿತ. ಇದೇನು ಹುಚ್ಚಾಟವೆಂದುಕೊಂಡ ಉಳಿದ ಶಿಬಿರಾರ್ಥಿಗಳು ಅಲ್ಲಿ ನೆರೆದಿದ್ದವರ ಗಮನ ಸೆಳೆಯುತ್ತಾ ಬಾಳೆ ಹಣ್ಣು ತಿನ್ನುವ ತಾಲೀಮನ್ನು ಮುಂದುವರೆಸಿದರು. ಹತ್ತು ನಿಮಿಷಗಳ ಕಾಲಾವಧಿ ಮುಗಿದ ನಂತರ ಗುರುಗಳು ಎಲ್ಲರಿಗೂ ತಮ್ಮ ತಮ್ಮ ಸ್ಥಾನಗಳಲ್ಲಿ ಶಾಂತವಾಗಿ ಕುಳಿತುಕೊಂಡು, ಒಬ್ಬಬ್ಬರೇ ತಮ್ಮ ಅನುಭವಗಳನ್ನು ಎಲ್ಲರೊಡನೆ ಮುಕ್ತವಾಗಿ ಹಂಚಿಕೊಳ್ಳುವಂತೆ ಹೇಳಿದರು.

ಮೊದಲನೆಯದಾಗಿ ವೇದಿಕೆಯನ್ನೇರಿ ಬಂದ ಶಿಬಿರಾರ್ಥಿಯು "ಗುರುಗಳೇ, ಬಾಳೆ ಹಣ್ಣು ತಿನ್ನುವ ಸ್ಪರ್ಧೆಯು ಮೇಲ್ನೋಟಕ್ಕೆ ಅತ್ಯಂತ ಸರಳವೆನಿಸಿದರೂ, ಇಪ್ಪತೈದು ಜನರು ಕೂಡ ನಾನು ಹಣ್ಣನ್ನು ತಿನ್ನುವಾಗ ನೋಡುವಂತೆ ಮಾಡಲು ಸಾಧ್ಯವಾಗದೆ ಹೋಯಿತು" ಎಂದನು.

ಎರಡನೆಯದಾಗಿ ಅನುಭವ ಹಂಚಿಕೊಳ್ಳಲು ಬಂದ ಅಭ್ಯರ್ಥಿಯು "ಗುರುಗಳೇ, ನನ್ನ ಎಣಿಕೆಯ ಪ್ರಕಾರ ಕನಿಷ್ಟ ಪಕ್ಷ ನೂರು ಜನರಾದರೂ ನಾನು ಹಣ್ಣು ತಿನ್ನುತ್ತಿರುವುದನ್ನು ನೋಡಿದ್ದಾರೆ. ಆದ್ದರಿಂದ ಈ ಸ್ಪರ್ಧೆಯಲ್ಲಿ ಗೆಲವು ನನ್ನದೇ" ಎಂದನು.

ಈ ವೇಳೆಗೆ ವೇದಿಕೆಯ ಬಳಿ ಅನೇಕರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಸೇರತೊಡಗಿದರು. ಅವರನ್ನೆಲ್ಲಾ ಸ್ವಯಂಸೇವಕರು ನಿಯಂತ್ರಿಸುತ್ತಾ ಸಾಲಾಗಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಆಗ ಗುರುಗಳು "ತುಂಬಾ ಹೊತ್ತಾಗುತ್ತಿದೆಯಾದ್ದರಿಂದ ಇನ್ನು ಮೂರು ಜನರಿಗೆ ಮಾತ್ರ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಸಮಯಾವಕಾಶವಿದೆ" ಎಂದರು.

ನಂತರ ಬಂದ ಅಭ್ಯರ್ಥಿಯು "ಗುರುಗಳೇ, ಒಬ್ಬ ಅಭ್ಯರ್ಥಿಯು ನಿಮ್ಮ ಪ್ರಶ್ನೆಯನ್ನು ತಪ್ಪಾಗಿ ಅರ್ಥೈಸಿಕೊಂಡು ನಿಮ್ಮ ಹಿಂದೆ ಅವಿತುಕೊಂಡು ಯಾರಿಗೂ ಕಾಣದಂತೆ ಹಣ್ಣನ್ನು ತಿಂದು ಬಿಟ್ಟ." ಎಂದು ಹೇಳಿದ.
ಛಂಗನೇ ನೆಗೆಯುತ್ತಾ ಬಂದ ನಾಲ್ಕನೇ ಅಭ್ಯರ್ಥಿಯು "ಗುರುಗಳೇ, ನಾನು ಹಣ್ಣು ತಿನ್ನುವುದು ನೋಡಲೆಂದು ಬೇರೆಯವರ ಗಮನ ಸೆಳೆಯುವುದಕ್ಕೆ ಬಹಳೇ ಕಷ್ಟವಾಯಿತು. ಪ್ರತಿಯೊಬ್ಬರ ಲಕ್ಷ್ಯವು ಇನ್ನೊಬ್ಬರ ಗಮನ ಸೆಳೆದು ಹಣ್ಣು ತಿನ್ನುವುದನ್ನು ನೋಡುವವರನ್ನು ಎಣಿಸುವುದರ ಕಡೆಗಿತ್ತೇ ವಿನಃ ನಾನು ತಿನ್ನುವ ಕಡೆ ಗಮನವೇ ಕೊಡಲಿಲ್ಲ!" ಎಂದಾಗ ಸಭಿಕರೆಲ್ಲ ಘೊಳ್ಳನೆ ನಕ್ಕರು.
"ಎಂಭತ್ತು, ಎಂಭತ್ತೊಂದು ಎಂದು ನಾನು ಹಣ್ಣು ತಿನ್ನುತ್ತಿರುವುದನ್ನು, ನೋಡುತ್ತಿದ್ದವರನ್ನು ಎಣಿಸುತ್ತಿರುವಾಗಲೇ, ಬಾಳೆ ಹಣ್ಣನ್ನು ಪೂರ್ತಿಯಾಗಿ ಮುಗಿಸಿರುವುದು ನನ್ನ ಗಮನಕ್ಕೆ ಬಂತು. ಆದ್ದರಿಂದ ಮುಂದುವರೆಸಲು ಸಾಧ್ಯವಾಗಲಿಲ್ಲ. ಇನ್ನೊಂದು ಹಣ್ಣನ್ನು ಕೊಡುವ ಏರ್ಪಾಡು ಮಾಡಿದ್ದರೆ ನಾನೇ ಈ ಸ್ಪರ್ಧೆಯಲ್ಲಿ ಗೆಲ್ಲುತ್ತಿದ್ದೆ ಗುರುಗಳೇ" ಎಂದಾಗ ಸಭಿಕರೆಲ್ಲಾ ಪುನಃ ನಗೆಗಡಲಲ್ಲಿ ಮುಳುಗಿದರು.

ಗುರುಗಳು ತಮ್ಮ ಆಸನದಿಂದ ಎದ್ದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಮೈಕಿನ ಬಳಿ ಬಂದರು. ಇದೇ ಸಮಯಕ್ಕೆ ಸರಿಯಾಗಿ ತಾಂತ್ರಿಕ ದೋಷದಿಂದಾಗಿ ಕಂಪ್ಯೂಟರಿನಿಂದ ಬರುತ್ತಿದ್ದ ಧ್ವನಿಯು ಸ್ಥಗಿತಗೊಂಡಿತು. ಕೇವಲ ದೃಶ್ಯ ಮಾತ್ರ ಸ್ಪಷ್ಟವಾಗಿ ಓಡುತ್ತಿತ್ತು. ಆದರೂ ಪೂರ್ಣ ತನ್ಮಯತೆಯಿಂದ ನೋಡುತ್ತಿದ್ದ ಬಿಪಿಒ ಉದ್ಯೋಗಿಯು ಧ್ವನಿರಹಿತ ವಿಡಿಯೋ ತುಣುಕನ್ನು ನೋಡುವುದನ್ನು ಮುಂದುವರೆಸಿದ.

ಆ ದೃಶ್ಯಾವಳಿಯಲ್ಲಿ ಗುರುಗಳು ಒಬ್ಬ ಅಭ್ಯರ್ಥಿಯನ್ನು ವೇದಿಕೆಯ ಮೇಲೆ ಕರೆದು ಕೆಲವು ಮಾತುಗಳಾಡಿದ ನಂತರ ಸಭಿಕರಲ್ಲಿ ಸ್ವಲ್ಪ ಜನ ಕೈಯೆತ್ತುವುದು, ಮತ್ತು ಇನ್ನೂ ನಾಲ್ಕು ಅಭ್ಯರ್ಥಿಗಳ ಜೊತೆ ನಿಂತಾಗಲು ಕೇವಲ ಕೆಲವೇ ಸಭಿಕರು ಕೈಯೆತ್ತಿದ್ದು ಕಂಡುಬಂತು. ನಂತರದ ದೃಶ್ಯದಲ್ಲಿ ಗುರುಗಳು ತಮ್ಮ ಹಿಂದೆ ಅವಿತು ಬಾಳೆ ಹಣ್ಣು ತಿಂದಿದ್ದವನ ಜೊತೆ ನಿಂತಿದ್ದರು. ಆಗ ಹೆಚ್ಚು ಕಮ್ಮಿ ಎಲ್ಲಾ ಸಭಿಕರು ಕೈ ಎತ್ತಿದರು. ನಂತರ ಗುರುಗಳು ತಮ್ಮ ಆಸನದ ಹಿಂದಿನಿಂದ ಬಾಳೆ ಹಣ್ಣಿನ ತಿರುಳನ್ನು ತೋರಿಸಿ ಕೆಲ ಮಾತುಗಳನ್ನಾಡುತ್ತಿದ್ದಂತೆ ಸಭಿಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿರುವ ದೃಶ್ಯದೊಂದಿಗೆ ಆ ವಿಡಿಯೋ ತುಣುಕು ಮುಕ್ತಾಯವಾಯಿತು.

ಸುಸ್ವಾಸನ ಇಯರ್ ಫೋನಿನ ಧ್ವನಿಯು ಹಾಗೇ ಮುಂದುವರೆಯುತ್ತಾ "ಸ್ವಾರಸ್ಯಕರ ಸಮಯದಲ್ಲೇ ವಿಡಿಯೋ ತುಣುಕಿನ ಧ್ವನಿ ಕೈಕೊಟ್ಟದ್ದರಿಂದ ಬಿಪಿಒ ಉದ್ಯೋಗಿಗಾದಷ್ಟೇ ನಿರಾಶೆ ನನಗೂ ಆಗಿದೆ. ಬಾಳೆ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಗೆದ್ದವರಾರು ಎಂಬ ಬಗ್ಗೆ ಒಂದು ಊಹೆ ಇದೆಯಾದರೂ, ಗೆದ್ದ ವ್ಯಕ್ತಿ ಹಾಗು ಅವನನ್ನು ಆರಿಸಿದ ಕಾರಣ ತಿಳಿಯಲು ಅತ್ಯಂತ ಕುತೂಹಲಿಯಾಗಿದ್ದೇನೆ. ಸುಸ್ವಾಸ ಈಗ ನೀನೇನಾದರೂ ತಿಳಿದೂ ನನ್ನ ಕುತೂಹಲವನ್ನು ತಣಿಸದಿದ್ದರೆ ಸ್ಪೋಟಕಗಳಿಂದ ತುಂಬಿರುವ ಭಯೋತ್ಪಾದಕ ಆತ್ಮಾಹುತಿ ಪಡೆಯವರ ಕಾರಿನಂತೆ ಸುಟ್ಟು ಬೂದಿಯಾಗುವುದು ಖಂಡಿತ!" ಎಂದು ಹೇಳುತ್ತಿದ್ದಂತೆ ನಿಶ್ಯಬ್ದ ಆವರಿಸಿತು.

ಸುಸ್ವಾಸ ತನ್ನ ವಿವೇಚನೆ ಹಾಗು ಬಾಳಿನ ನಿಗೂಢ ಅರ್ಥಗಳನ್ನು ಅರಿಯುವ ಬಗ್ಗೆ ಅವನಿಗಿರುವ ಹುರುಪಿನಿಂದಾಗಿ ವಿಡಿಯೋ ತುಣುಕಿನ ಕೊನೆಯ ಭಾಗದಲ್ಲಿ ನಡೆದಿರಬಹುದಾದ ಘಟನೆಯನ್ನು ಶೀಘ್ರವಾಗಿ ಗ್ರಹಿಸಿ ಹೇಳತೊಡಗಿದ. ಗುರುಗಳು ಮೊದಲಿಗೆ 'ನೂರು ಜನರು ಹಣ್ಣು ತಿನ್ನುವುದು ನೋಡಿದ್ದಾರೆ ಆದ್ದರಿಂದ ನನಗೇ ಈ ಸ್ಪರ್ಧೆಯಲ್ಲಿ ಗೆಲವು' ಎಂದ ವ್ಯಕ್ತಿಯನ್ನು ಕರೆದರು. ನಂತರ ಆ ವ್ಯಕ್ತಿ ಹಣ್ಣು ತಿನ್ನುವುದನ್ನು ನೋಡಿರುವ ಶಿಬಿರಾರ್ಥಿಗಳು ಕೈ ಎತ್ತುವ ಮೂಲಕ ಸೂಚಿಸಬೇಕೆಂದಾಗ ಕೇವಲ ಹತ್ತು ಹದಿನೈದು ಜನರು ಕೈಯೆತ್ತಿದರು. ಅದೇ ರೀತಿಯಾಗಿ ಇಪ್ಪತ್ತೈದು, ಎಂಭತ್ತೊಂದು ಜನಗಳು ನೋಡುವಂತೆ ತಿಂದಿದ್ದೇವೆ ಎಂದು ಹೇಳಿಕೊಂಡ ಅಭ್ಯರ್ಥಿಗಳಿಗೂ ಕೂಡ ಆಶ್ಚರ್ಯಕರವಾಗಿ ಕೇವಲ ಕೆಲವೇ ಕೈಗಳು ಮೇಲಕ್ಕೆ ಹೋದವು.ತದನಂತರ ಗುರುಗಳು ತಮ್ಮ ಹಿಂದೆ ಅವಿತುಕೊಂಡು ಎಲ್ಲರಿಗೂ ಬಾಳೆ ಸಿಪ್ಪೆಯನ್ನು ತೋರಿಸಿದ್ದ ಅಭ್ಯರ್ಥಿಯನ್ನು ವೇದಿಕೆಗೆ ಕರೆದು, ಈ ವ್ಯಕ್ತಿಯು ನನ್ನ ಹಿಂದೆ ಹಣ್ಣನ್ನು ತಿಂದಿರುವನೆಂದು ಖಾತ್ರಿಯಾಗಿರುವವರೆಲ್ಲ ಕೈಯೆತ್ತಿ ಎಂದಾಗ, ಹೆಚ್ಚು ಕಡಿಮೆ ಎಲ್ಲರೂ ಕೈ ಎತ್ತಿದರು. ಮುಗುಳ್ನಗೆ ಬೀರುತ್ತಿದ್ದ ಗುರುಗಳು ಅವನೇ ಸ್ಪರ್ಧೆಯನ್ನು ಗೆದ್ದಿದ್ದಾನೆ ಎಂದು ಘೋಷಿಸಿದರು ಮತ್ತು ತಮ್ಮ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಂಡರು.

ಬಾಳೆ ಹಣ್ಣು ತಿನ್ನುವ ಸ್ಪರ್ಧೆಯು ನಮ್ಮ ದಿನ ನಿತ್ಯದ ಜೀವನದಲ್ಲಿ ಕಾಡುವ ಉಭಯ ಸಂಕಟಗಳು ಮತ್ತು ವಿರೋಧಾಭಾಸಗಳನ್ನು ಬಿಂಬಿಸಲೆಂದೇ ಯೋಜಿಸಲಾಗಿದೆ. ಈ ಸ್ಪರ್ಧೆ ಗೆದ್ದ ವ್ಯಕ್ತಿಗೆ ಉಭಯ ಸಂಕಟಗಳ, ವಿರೋಧಾಭಾಸಗಳ ಅರಿವಿದ್ದುದರಿಂದಲೇ ಅವನ್ನು ನಿಭಾಯಿಸುವ ಉಪಾಯವೂ ಅವನಿಗೆ ಹೊಳೆಯಿತು. ನಾಲ್ಕು ನೂರು ಜನರೂ ನೋಡುವಂತೆ ಬಾಳೆ ಹಣ್ಣು ತಿನ್ನುವುದು ಅಸಾಧ್ಯವೇ ಸರಿ. ಏಕೆಂದರೆ ಪ್ರತಿಯೊಬ್ಬರೂ ಇತರರ ಗಮನ ಸೆಳೆದು ತಾವು ಹಣ್ಣು ತಿನ್ನುತ್ತಿರುವುದನ್ನು ನೋಡುವವರನ್ನು ಎಣಿಸುವ ಕಾತುರದಲ್ಲಿರುತ್ತಾರೆ. ಹೀಗಾಗಿ ಇನ್ನೊಬ್ಬರು ಹಣ್ಣು ತಿನ್ನುವುದನ್ನು ನೋಡಲು ಆಗುವುದೇ ಇಲ್ಲ! ಸ್ಪರ್ಧೆ ಗೆದ್ದ ವ್ಯಕ್ತಿ ಇದನ್ನು ತಿಳಿದುಕೊಂಡಿದ್ದರಿಂದ ತಾನು ಬಾಳೆ ಹಣ್ಣನ್ನು ತಿನ್ನದಿದ್ದರೂ, ಉಳಿದ ಶಿಬಿರಾರ್ಥಿಗಳಿಗೆ ಅವನು ತಿಂದಂತೆ ಭಾಸವಾಗುವ ಹಾಗೆ ಉಪಾಯ ಮಾಡಿದ್ದನು.

ಗುರುಗಳು ತಮ್ಮ ಆಸನದ ಹಿಂಬಾಗದಲ್ಲಿದ್ದ ಬಾಳೆ ಹಣ್ಣಿನ ತಿರುಳನ್ನು ತೋರಿಸುತ್ತಾ, ಸ್ಪರ್ಧೆ ಗೆದ್ದ ವ್ಯಕ್ತಿಯು ಬಹಳ ಚಾಣಾಕ್ಷತೆಯಿಂದ ಎಲ್ಲರೂ ನೋಡುವಂತಹ ಸ್ಥಳದಲ್ಲಿ ಬಾಳೆ ಹಣ್ಣನ್ನು ತಿನ್ನುವುದು ಅಸಾಧ್ಯವಾದುದರಿಂದ, ಅದನ್ನು ತಿನ್ನಲಿಲ್ಲ. ಆದರೆ ನನ್ನ ಹಿಂದೆ ಅವಿತುಕೊಂಡು ಬಾಳೆ ಹಣ್ಣಿನ ತಿರುಳನ್ನು ಇಲ್ಲೇ ಬಿಟ್ಟು, ಬರೇ ಸಿಪ್ಪೆಯನ್ನು ಕೈಯಲ್ಲಿ ತಿರುಗಿಸುತ್ತಾ ಎಲ್ಲರೂ ನೋಡುವಂತೆ ಮಾಡಿದ ಉಪಾಯ ಫಲಿಸಿ, ಉಳಿದೆಲ್ಲರಿಗೂ ಹಣ್ಣನ್ನು ತಿಂದಂತೆ ಭಾಸವಾಗುವ ಹಾಗೆ ಮಾಡಿದ ಎಂದು ತಿಳಿಸಿದರು. ಹಾಗೇ ತಮ್ಮ ಮಾತನ್ನು ಮುಂದುವರೆಸುತ್ತಾ, "ಈ ಸ್ಪರ್ಧೆಯಿಂದ ನಾವು ಕಲಿಯಬೇಕಾದ ಪಾಠವೇನೆಂದರೆ ನಮ್ಮ ಬಾಳಿನ ಉದ್ದೇಶದ ಅರಿವು ಮೂಡಿದರೆ, ಆ ಉದ್ದೇಶಗಳನ್ನು ಈಡೇರಿಸುವ ದಾರಿಗಳೂ ತಾವಾಗಿಯೇ ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಐವರು ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ. ಸ್ಪರ್ಧೆಯನ್ನು ಯಾವ ಸಂದೇಶದ ಅರಿವನ್ನು ಮೂಡಿಸಬೇಕೆಂದು ಯೋಜಿಸಲಾಗಿತ್ತೋ ಅದನ್ನು ತಮ್ಮ ಅನಿಸಿಕೆಗಳ ಮೂಲಕ ತೋರ್ಪಡಿಸಿ, ಬಾಳೆ ಹಣ್ಣು ತಿನ್ನುವ ಸ್ಪರ್ಧೆ ಯಶಸ್ವಿಯಾಗುವಲ್ಲಿ ಸಹಕರಿಸಿದ್ದಾರೆ.

ನಾವು ಯಾವುದೇ ಕಾರ್ಯ ಕೈಗೊಳ್ಳಬೇಕೆಂದಾಗ ಕೆಲವು ವಿಚಾರ ಸರಣಿಗಳು ಮೋಡಗಳಂತೆ ಕವಿದು ನಮ್ಮ ದೃಷ್ಟಿಯನ್ನು ಮಸುಕುಗೊಳಿಸಿ ಗುರಿ ಮುಟ್ಟುವ ದಾರಿ ಕಾಣದಂತೆ ಮಾಡುತ್ತವೆ. ಇಂತಹ ವಿಚಾರ ಸರಣಿಗಳಾವುವೆಂದರೆ :

ಆರಂಭ ಶೂರರಂತೆ ಎಲ್ಲಾ ಕಾರ್ಯಗಳು ಸುಲಭವೆಂದು ಎಣಿಸಿ ಬಲು ಉತ್ಸಾಹದಿಂದ ಆರಂಭಿಸುತ್ತೇವೆ. ಆದರೆ ಒಂದು ಸಣ್ಣ ಅಡ್ಡಿ ಎದುರಾದರೂ ನಮ್ಮ ಹೆಜ್ಜೆಯನ್ನು ಹಿಂದೆಗೆಯುತ್ತೇವೆ.
ಮೊದಲನೇ ಅಭ್ಯರ್ಥಿಯ ಅನಿಸಿಕೆ ಇದನ್ನು ಸ್ಪಷ್ಟವಾಗಿಸುತ್ತದೆ.

ಕೇವಲ ಕಷ್ಟಗಳೇ ಗೋಚರವಾಗಿ ಮುಂದುವರೆಯುವ ಉತ್ಸಾಹವನ್ನು ಕುಗ್ಗಿಸುತ್ತವೆ.
ಇದನ್ನು ನಾಲ್ಕನೇ ಅಭ್ಯರ್ಥಿಯ ಅನಿಸಿಕೆಯಿಂದ ತಿಳಿಯಬಹುದು.

ನಾವೆಂದಿಗೂ ಜಯಶಾಲಿಗಳು ಎಂದು ತೋರ್ಪಡಿಸಿಕೊಳ್ಳಲು ಇಚ್ಚಿಸುತ್ತೇವೆ.
ಅನೇಕ ವೇಳೆ ನಾವು ಮಾಡುವ ಕಾರ್ಯ ಇತರರ ಗಮನ ಸೆಳೆಯಲು ಮತ್ತು ತನ್ಮೂಲಕ ನಮ್ಮ ಯೋಗ್ಯತೆಯ ರುಜುವಾತುಪಡಿಸಲೆಂದೇ ಇರುತ್ತದೆ. ಈ ತರಹದ ವಿಚಾರ ಸರಣಿಯು ಎರಡನೇ ಅಭ್ಯರ್ಥಿಯ ಅನಿಸಿಕೆಯಲ್ಲಿ ಚೆನ್ನಾಗಿ ಅಭಿವ್ಯಕ್ತಿಸಲ್ಪಟ್ಟಿದೆ.

ನಮ್ಮ ವಿಫಲತೆಗಳನ್ನು ಮುಚ್ಚಿಕೊಳ್ಳಲು ಅನ್ಯರನ್ನು ದೂರುವ ಹಾಗು ಇತರರ ದೋಷಗಳನ್ನೆಣಿಸುವ ಪ್ರವೃತ್ತಿ.
ಈ ತರಹದ ವಿಚಾರ ಸರಣಿಯ ಅರಿವನ್ನು ಮೂರನೇ ಅಭ್ಯರ್ಥಿಯ ಅನಿಸಿಕೆಯು ತಿಳಿಸಿಕೊಡುತ್ತದೆ.

ನಮ್ಮ ಬಳಿ ಇರುವ ಸಂಪನ್ಮೂಲಗಳು ಯಾವಾಗಲೂ ಅಭಾವಪೂರಿತವಾದದ್ದು.
ಈ ರೀತಿಯ ವಿಚಾರ ಸರಣಿ ಉಂಟಾಗುವ ಬಗ್ಗೆ ಐದನೇ ಅಭ್ಯರ್ಥಿಯು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಮೂಲಕ ಅತ್ತ್ಯುತ್ತಮವಾಗಿ ತೋರಿಸಿಕೊಟ್ಟಿದ್ದಾರೆ.

ಬಾಳೆ ಹಣ್ಣು ತಿನ್ನುವ ಸ್ಪರ್ಧೆ ಗೆದ್ದ ವ್ಯಕ್ತಿಯ ನಡವಳಿಕೆಯು, ಸಾಮನ್ಯವಾಗಿ ಆರಂಭದಲ್ಲಿ ಬರುವ ಈ ತರಹದ ವಿಚಾರ ಸರಣಿಗಳ ಅರಿವು ಮೂಡಿದರೂ ಸಾಕು, ಅವುಗಳನ್ನು ಒತ್ತಟ್ಟಿಗಿರಿಸಿ ಹೊಸ ವಿಚಾರ ಸರಣಿಗೆ ನಂದಿ ಹಾಡಬಹುದು. ಮತ್ತು ಹೀಗೆ ಹುಟ್ಟುಹಾಕಿದ ಹೊಸ ವಿಚಾರ ಸರಣಿಯು ಬಾಳೆ ಹಣ್ಣನ್ನು ಎಲ್ಲರೂ ನೋಡುವಂತಹ ಸ್ಥಳದಲ್ಲಿ ತಿನ್ನಲು ಸಾಧ್ಯವಿಲ್ಲವೆಂಬ ತಿಳುವಳಿಕೆ ಮೂಡಿಸಿ, ಸ್ಪರ್ಧೆ ಗೆಲ್ಲುವ ಯುಕ್ತಿಯನ್ನೂ ಒದಗಿಸಿಕೊಡುತ್ತದೆ ಎಂಬ ಸತ್ಯವನ್ನು ತಿಳಿಸಿಕೊಟ್ಟಿತು." ಗುರುಗಳ ಈ ಸ್ಪಷ್ಟನೆ ಕೇಳಿ ಮೂಕವಿಸ್ಮಿತರಾಗಿದ್ದ ಸಭಿಕರೆಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆಯತೊಡಗಿದರು.

ಇಷ್ಟನ್ನು ಸುಸ್ವಾಸನು ಹೇಳಿ ಮುಗಿಸುತ್ತಿದ್ದಂತೆ, ಜೋರಾಗಿ ಗಹಗಹಿಸುತ್ತ ನಗುವ ಸದ್ದು ಕಪ್ಪು ಟೆಲಿಫೋನಿನಿಂದ ಹೊರಟಿತು. ಅದರ ಹಿಂದೆಯೇ ಗಡಸಾದ ಧ್ವನಿಯು "ಸುಸ್ವಾಸ ನೀನು ಮನೆ ತಲುಪುವ ಮುನ್ನವೇ ಮಾತನಾಡಿ ನನ್ನ ಕಟ್ಟಳೆಯನ್ನು ಮುರಿದಿದ್ದಿ. ನನ್ನನ್ನು ಪುನಃ ಕಾಣಬೇಕಾದರೆ ನಾಳೆ ಸೂರ್ಯೋದಯವಾದ ನಂತರವೇ" ಎಂದು ಹೇಳುತ್ತಾ ಮಾಯವಾಯಿತು. ________________________________________________________________________________

ಮಂಗಳವಾರ, ಸೆಪ್ಟೆಂಬರ್ 9, 2008

ಕತ್ತೆ ಮರಿ

ಮರಿ ಕತ್ತೆ ಮರಿ ಕತ್ತೆ
ಮುಖದ ತುಂಬಾ ಮುಗ್ಧತೆ
ಪ್ರತಿನಿತ್ಯ ಹೊರುವುದು ರಾಶಿ ರಾಶಿ ಬಟ್ಟೆ
ಚಕಾರವೆತ್ತದೆ ಜೀವನವಿಡೀ ಚಾಕರಿಯ ಮಾಡುತ್ತೆ
ಅಗಸನು ಕೊಡದಿದ್ದರೂ ಸಂಬಳ ಭತ್ಯೆ
ಆದರೂ ಕೆಲಸ ಮಾಡದವರನ್ನು ಬೈಯುತ್ತಾರೆ
ಏಯ್ , ಏನೋ? ಕತ್ತೆ !
__________________________________________________________________

ಶುಕ್ರವಾರ, ಸೆಪ್ಟೆಂಬರ್ 5, 2008

ಶಿಕ್ಷಕರ ದಿನಾಚರಣೆ

ಗುರುದೇವೋ ಭವ ಎಂಬುದು ಶಾಸ್ತ್ರಗಳ ಅಂಬೋಣ
ಗುರುವಿನ ಮಾರ್ಗದರ್ಶನವಿಲ್ಲದೆ ಪಾಂಡಿತ್ಯ ಗಳಿಸಲಾಗದಣ್ಣ
ಸದಾ ಅವರನ್ನು ಗೌರವ ಆದರಗಳಿಂದ ಕಾಣೋಣ
ಸೆಪ್ಟೆಂಬರ್ 5 ರಂದು ಆಚರಿಸಿ ಶಿಕ್ಷಕರ ದಿನ
ಸ್ಮರಿಸೋಣ ಗುರುತತ್ವದ ಚಿರ ಋಣ .
______________________________________________________________________

ಬುಧವಾರ, ಸೆಪ್ಟೆಂಬರ್ 3, 2008

ವಜ್ರಕ್ಕಾಗಿ ಹುಡುಕಾಟ

ದಕ್ಷಿಣ ಅಫ್ರಿಕೆಯಲ್ಲಿ ಒಂದು ಜೆನ್ ಆಶ್ರಮ. ಇದೊಂದು ಅಪರೂಪದ ಸಂಗತಿಯೇ. ಚೀನಾ, ಜಪಾನುಗಳಾದರೆ ಹೆಜ್ಜೆ ಹೆಜ್ಜೆಗೂ ಜೆನ್ ನ ಅನುಯಾಯಿಗಳು ಸಿಗುತ್ತಾರೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಅದು ಹೇಗೋ ಈ ಜೆನ್ ಗುರು ಒಂದು ಆಶ್ರಮವನ್ನು ಕಟ್ಟಿಕೊಂಡು ತಮ್ಮ ಸಾಧನೆಯಲ್ಲಿ ಮುಳುಗಿಹೋಗಿದ್ದರು. ಈ ಆಶ್ರಮವು ಒಂದು ವಿಶಾಲ ಸರೋವರದ ಬಳಿಯಿತ್ತು. ಅಲ್ಲಿನ ಮತ್ತೊಂದು ವಿಶೇಷವೇನೆಂದರೆ ಬೃಹದಾಕಾರವಾಗಿ ಬೆಳೆದಿದ್ದ ಮಾವಿನ ಮರ.

ಆಫ್ರಿಕಾದಲ್ಲಿ ವಜ್ರ ಮತ್ತು ಇನ್ನಿತರ ಬೆಲೆಬಾಳುವ ಹರಳುಗಳು ಹೇರಳವಾಗಿ ದೊರೆಯುತ್ತವೆಯೆಂದು, ತಮ್ಮ ಭಾಗ್ಯವನ್ನು ಅರಸಲು ಅನೇಕರು ಆಫ್ರಿಕಾಗೆ ವಲಸೆ ಹೋಗಿದ್ದರು. ಅವರಲ್ಲಿ ಕೆಲವರು ಅತಿ ಶ್ರೀಮಂತರಾದರೆ, ಉಳಿದ ಬಹಳಷ್ಟು ಜನ ವಜ್ರದ ನಿಕ್ಷೇಪಕ್ಕಾಗಿ ಸುತ್ತಿ ಸುತ್ತಿ ಬಸವಳಿದರು. ಹೀಗೆ ಬಸವಳಿದವರಲ್ಲಿ ಭಾರತದಿಂದ ಹೋಗಿದ್ದ ಸುಸ್ವಾಸ ಕೂಡ ಒಬ್ಬ. ಸುಸ್ವಾಸ ಅತ್ಯಂತ ಕಡಿಮೆ ಸಮಯದಲ್ಲಿ ಭಾರಿ ಶ್ರೀಮಂತನಾಗಬೇಕೆಂದುಕೊಂಡು, ಭಾರತದಲ್ಲಿ ತನ್ನ ಬಳಿಯಿದ್ದ ಅಲ್ಪ ಸ್ವಲ್ಪ ಆಸ್ತಿಯನ್ನು ಮಾರಿ, ಜೀವಮಾನದ ಉಳಿತಾಯವನ್ನು ಕೂಡ ಸೇರಿಸಿ ಆಫ್ರಿಕಾಗೆ ಹೋಗಿದ್ದ. ವಜ್ರದ ನಿಕ್ಷೇಪದ ಹುಡುಕಾಟದಲ್ಲಿ ತನ್ನೆಲ್ಲಾ ಹಣವನ್ನು ಕಳೆದುಕೊಂಡು ನಿರಾಶನಾಗಿದ್ದನು. ಇಂತಹ ಸಮಯದಲ್ಲೇ ಆಫ್ರಿಕಾದ ಜೆನ್ ಗುರುವಿನ ಬಗ್ಗೆ ತಿಳಿದುಕೊಂಡು, ಭಾರತಕ್ಕೆ ಹಿಂದಿರುಗುವ ಮುನ್ನ ಒಮ್ಮೆ ಭೇಟಿಯಾಗಿ ಹೋಗೋಣವೆಂದುಕೊಂಡು ಆಶ್ರಮದ ಬಳಿ ಬಂದನು.

ಸುಸ್ವಾಸನಿಗೆ ಸರೋವರದ ಬಳಿಯಲ್ಲಿನ ಪ್ರಶಾಂತತೆ ತುಂಬಾ ಹಿಡಿಸಿತು. ಅಲ್ಲಿನ ಮಾವಿನ ಮರದ ತುಂಬಾ ಬಂಗಾರದಂತಹ ಹಣ್ಣುಗಳು ತೂಗಾಡುತ್ತಿರುವ ದೃಶ್ಯ ಅಚ್ಚರಿ ಮೂಡಿಸಿತು. ಜೆನ್ ಗುರುವಿಗೆ ಅರ್ಪಿಸಲು ಹಣ್ಣನ್ನಾದರೂ ತೆಗೆದುಕೊಂಡು ಹೋಗೋಣವೆಂದುಕೊಂಡು ಯೋಚಿಸಿ ಸುಸ್ವಾಸ ಮರದ ಬಳಿ ಬಂದನು. ಸುಸ್ವಾಸನಿಗೆ ಮರವೇರಲು ಬರುತ್ತಿರಲ್ಲಿಲ್ಲ. ಹಾಗಾಗಿ ಅಲ್ಲೇ ಬಿದ್ದಿದ್ದ ಕಲ್ಲೊಂದನ್ನು ಎತ್ತಿ ಮರದ ಕಡೆ ಎಸೆದ. ಕಲ್ಲು ಹಣ್ಣೊಂದನ್ನು ಉರುಳಿಸಿ ಸರೋವರದಲ್ಲಿ ಬಿದ್ದು ಮುಳುಗಿತು. ಸುಸ್ವಾಸ ಆ ಹಣ್ಣನ್ನು ಒರೆಸಿ ಆಶ್ರಮದ ಕಡೆ ನಡೆದ.

ಜೆನ್ ಗುರುವಿನ ಆಶೀರ್ವಾದ ಪಡೆಯಲು ಕೆಲವು ಜನರು ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಂಡ ಸುಸ್ವಾಸ ತಾನೂ ಅಲ್ಲಿ ಹೋಗಿ ನಿಂತುಕೊಂಡ. ಗುರುವಿನ ಬಳಿ ಬರುತ್ತಿದ್ದಂತೆ ಭಯಭಕ್ತಿಯಿಂದ ಮಾವಿನ ಹಣ್ಣನ್ನು ಅರ್ಪಿಸಿ ಕೈ ಜೋಡಿಸಿ ನಿಂತನು. ಆಗ ಜೆನ್ ಗುರುವು "ಸರೋವರದ ಬಳಿಯಿರುವ ಮಾವಿನ ಮರದ ಹಣ್ಣೆ?" ಎಂದು ವಿಚಾರಿಸಿದಾಗ ಸುಸ್ವಾಸನು ಹೌದೆಂದು ತಲೆಯಾಡಿಸಿದನು. "ನಿನಗೆ ಮರ ಹತ್ತಲು ಬರುವುದೇ?" ಎಂದು ಜೆನ್ ಗುರುವು ಕೇಳಿದಾಗ, ಸುಸ್ವಾಸನು "ಇಲ್ಲ, ಮರದ ಬಳಿಯಿದ್ದ ಕಲ್ಲೊಂದರಿಂದ ಈ ಹಣ್ಣನ್ನು ಬೀಳಿಸಿ ತಂದಿರುವೆ" ಎಂದುತ್ತರಿಸಿದನು. "ಹಾಗಾದರೆ ಒಂದು ವಜ್ರವು ವ್ಯರ್ಥವಾಗಿ ಸರೋವರದ ತಳವನ್ನು ಸೇರಿತು" ಎಂದು ಜೆನ್ ಗುರುವು ಹೇಳಿದಾಗ, ಸುಸ್ವಾಸನು ಗಲಿಬಿಲಿಗೊಂಡನು. ಅಲ್ಲಿಂದ ಬೇಗನೆ ಹೊರಡುವ ಆತುರತೆ ಅವನ ಮುಖದಲ್ಲಿ ಸ್ಪಷ್ಟವಾಗಿ ಮೂಡಿತ್ತು. ಅದನ್ನು ಗಮನಿಸಿದ ಜೆನ್ ಗುರುವು ಸುಸ್ವಾಸನನ್ನು ಕುರಿತು "ಹೆದರಬೇಡ, ಆ ಸರೋವರದ ಬಳಿಯಿರುವ ಎಲ್ಲಾ ಕಲ್ಲುಗಳೂ ವಜ್ರಗಳೇ. ಪ್ರತಿಯೊಂದು ವಜ್ರವೂ ನಿನಗೆ ಒಂದು ಮಾವಿನ ತೋಟವನ್ನೇ ಕೊಳ್ಳುವಷ್ಟು ಬೆಲೆಯುಳ್ಳದ್ದಾಗಿದೆ" ಎಂದು ಹೇಳಿದರು. ತನ್ನ ಕಾತುರತೆಯನ್ನು ತೋರಿಸಿಕೊಳ್ಳದೆ ಮತ್ತೊಮ್ಮೆ ಗುರುವಿಗೆ ನಮಸ್ಕರಿಸಿ ನಿಧಾನವಾಗಿ ಆಶ್ರಮದ ಹೊರಗೆ ನಡೆದ ಸುಸ್ವಾಸನು, ನಂತರ ಒಂದೇ ಉಸಿರಿಗೆ ಸರೋವರದ ಬಳಿಗೆ ಓಡಿದನು. ವಜ್ರಕ್ಕಾಗಿ ಅಲ್ಲಿ ಬಿದ್ದಿರುವ ಕಲ್ಲುಗಳೆಲ್ಲೆಲ್ಲಾ ತಡಕಾಡತೊಡಗಿದನು. ಅದೇ ಸರೋವರದ ದಡದ ಬಳಿ ಮೀನು ಹಿಡಿಯಲು ಗಾಳ ಹಾಕಿ ಕೂತಿದ್ದ ಜೆನ್ ಶಿಷ್ಯನೊಬ್ಬ ಸುಸ್ವಾಸನ ಪರದಾಟವನ್ನು ಗಮನಿಸಿದ. ಸುಸ್ವಾಸನನ್ನು ಬಳಿಗೆ ಕರೆದು, ಅವನ ಹುಡುಕಾಟದ ಕಾರಣವನ್ನು ಕೇಳಿದ. ಸುಸ್ವಾಸ ಜೆನ್ ಗುರುವಿನ ಜೊತೆ ನಡೆದ ಮಾತುಕತೆಯನ್ನು ತಿಳಿಸಿದ. ಇದು 'ಕೊಆನ್' (koan) ಮೂಲಕ ತಿಳಿಸಿರುವ ಸಂದೇಶವೆಂದು ಅರಿತ ಶಿಷ್ಯ, ಅದರ ಅರ್ಥವನ್ನು ಬಿಡಿಸಿ ವಿವರವಾಗಿ ಹೇಳತೊಡಗಿದ.

ವಜ್ರವೆಂದರೆ ಹೊಳಪುಳ್ಳದ್ದು, ಅತ್ಯಂತ ಬೆಲೆಬಾಳುವ ಹಾಗು ಅತಿ ಕಠಿಣವಾದ ವಸ್ತು ಎಂದು ನಮಗೆ ತಿಳಿದಿದೆ. ಇದನ್ನು ಅತ್ಯಂತ ಜೋಪಾನ ಮಾಡುತ್ತಾರೆ, ಬೆಲೆಬಾಳುವ ಆಭರಣಗಳಲ್ಲಿ ಬಳಸುತ್ತಾರೆ, ಅತ್ಯಂತ ಕಠಿಣವಾದ ವಸ್ತುಗಳನ್ನು ಕತ್ತರಿಸಲು ಉಪಯೋಗಿಸುತ್ತಾರೆ ಮತ್ತು ವಜ್ರವು ಮಹಾನ್ ಚಕ್ರವರ್ತಿಗಳ ತಲೆಯ ಮೇಲೂ ಕುಳಿತುಕೊಳ್ಳುತ್ತದೆ (ಕಿರೀಟದಲ್ಲಿ). ಆದರೆ ಈ ರೀತಿಯಾಗಿ ಕಾಣುವ ಮುನ್ನ ಸಾಣೆ ಹಿಡಿದು ಪಾಲಿಶ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ವಜ್ರವು ಕೇವಲ ಸಾಮಾನ್ಯ ಕಲ್ಲಿನಂತೆ ಕಾಣುತ್ತದೆ. ಕಲ್ಲು ಕೇವಲ ಹಣ್ಣನ್ನು ಉದುರಿಸುವ ತನಕ ಮಾತ್ರ ಗಮನದಲ್ಲಿದ್ದು ನಂತರ ಸರೋವರದ ತಳವನ್ನು ಸೇರಿ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗುತ್ತದೆ. ಆದುದರಿಂದ ನಾವೆಲ್ಲರೂ ಮಾಡಬೇಕಾದ ಮೊದಲ ಕೆಲಸವೆಂದರೆ, ನಾವು ಪ್ರತಿಯೊಬ್ಬರೂ ವಜ್ರದಂತೆ ಅಸಾಮಾನ್ಯರು, ವಿಶಿಷ್ಟರು ಎಂದರಿಯಬೇಕು, ವಿಶ್ವಾಸವಿಡಬೇಕು. ಆಗ ನಮ್ಮ ಪರಿಶ್ರಮ ಹಾಗು ನಮಗೆ ಬಂದೊದಗುವ ಕಷ್ಟಗಳು ಸತತವಾಗಿ ಸಾಣೆ ಹಿಡಿದು, ಪಾಲಿಶ್ ಮಾಡಿ, ಕಲ್ಲಿನಂತೆ ಕಾಣುವ ವಜ್ರವನ್ನು ಅತ್ಯಮೂಲ್ಯವಾದ ಕೊಹಿನೂರಗಿಂತಲೂ ಜಗತ್ಪ್ರಸಿದ್ದಿ ಗಳಿಸುವಂತೆ ಮಾಡಲು ನೆರವಾಗುತ್ತವೆ.

ಪರಿಶ್ರಮ ಪಡಲು ಮತ್ತು ಕಷ್ಟಗಳನ್ನು ಎದುರಿಸಲು ಛಲವಿಲ್ಲದೇ ಹೋದರೆ, ನಾವು ಬರೀ ಕಲ್ಲಿನಂತೆ ಕಾಣುತ್ತೇವೆ. ನಮ್ಮನ್ನು ಆಗ ಸಮಾಜವು ತನಗೆ ಬೇಕಾದಂತೆ ಬಳಸಿಕೊಂಡು ಬಿಸಾಡುತ್ತದೆ. ಆದರೆ ಇದಕ್ಕೆ ನಾವೇ ಹೊಣೆಗಾರರಾಗಿರುತ್ತೇವೆ.ಆದ್ದರಿಂದ 'ನಾವು ವಜ್ರದಂತೆ ಅಸಾಮಾನ್ಯರು' ಎಂಬ ಅರಿವು ಬರುವುದು ಮುಖ್ಯ. ಒಮ್ಮೆ ಈ ಅರಿವು ಮೂಡಿತೆಂದರೆ, ಪರಿಶ್ರಮ ಪಡುವುದರಲ್ಲಿ ಮತ್ತು ತೊಂದರೆಗಳನ್ನು ಎದುರಿಸುವಲ್ಲಿ ಬಹು ಸಮರ್ಥರಾಗುತ್ತೇವೆ. ಏಕೆಂದರೆ ಈ ಪರಿಶ್ರಮ ಹಾಗು ಜೀವನದಲ್ಲಿ ಒದಗಿ ಬರುವ ಕಷ್ಟಗಳು ನಮಗೆ ಸಾಣೆ ಹಿಡಿಯುವ, ಪಾಲಿಶ್ ಮಾಡುವ ಉಪಕರಣಗಳಂತೆ ಕಾಣತೊಡಗುತ್ತವೆ. ಆಗ ನಮ್ಮನ್ನು ಸಮಾಜವು ಕೊಹಿನೂರ್ ವಜ್ರದಂತೆ ಆದರಿಸುತ್ತದೆ, ಆರಾಧಿಸುತ್ತದೆ.

ಈ ಸ್ಪಷ್ಟೀಕರಣದ ನಂತರ ಸುಸ್ವಾಸನಿಗೆ ತಾನೇ ಒಂದು ಅತ್ಯಮೂಲ್ಯವಾದ ವಜ್ರವಾಗಿರುವಾಗ, ಹೊರಗಡೆ ವಜ್ರಕ್ಕಾಗಿ ಹುಡುಕಾಟ ನಡೆಸುವುದು ವ್ಯರ್ಥವೆಂದು ಮನದಟ್ಟಾಯಿತು. ಆ ಶಿಷ್ಯನಿಗೆ ಮನಃಪೂರ್ವಕವಾದ ವಂದನೆಗಳನ್ನು ಸಲ್ಲಿಸಿದನು. ಮುಂದೆ ಭಾರತಕ್ಕೆ ಮರಳಿ ತನ್ನ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡನು. ಸಂತೋಷದಿಂದ ಜೀವನದ ಪರಿಶ್ರಮಗಳನ್ನು, ಕಷ್ಟಗಳನ್ನು ಎದುರಿಸಿದನು. ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತ ಸಾಗಿದನು. ಅನೇಕ ವಜ್ರದ ಗಣಿಗಳ ಮಾಲೀಕನೂ ಆದನು!.
_______________________________________________________________________

ಕೃಷ್ಣನ ಸಂದೇಶ

ಕೃಷ್ಣನು ನೀಡಿದ ಮಹಾನ್ ಸಂದೇಶ
ನಿಷ್ಕಾಮ ಕರ್ಮ ಮಾಡಲು ಹೆಚ್ಚುವುದು ಸುಖ ಸಂತೋಷ.
ಇದುವೇ ಗೀತೋಪದೇಶದ ಸಾರಾಂಶ.
____________________________________

ಯಾರು ನಂಬರ್ ಒನ್?

ಸಲ್ಮಾನ್ ಖಾನ್ ಶಾರುಕ್ ಖಾನ್
ಹೊಡೆದಾಡುತ್ತಿದ್ದಾರೆ
ಯಾರೆಂದು ನಂಬರ್ ಒನ್ ?
ಅಮಿತಾಭ್ ಬಚ್ಚನ್
ಹೇಳುತ್ತಾರೆ
ನಾನೆಂದಿಗೂ ನಂಬರ್ ಒನ್!
________________________________________________

ವಿಕಟ ಚುಟುಕ ಮಾಲೆ - ಭಾರತದ ರಾಜಕೀಯ.

ಮನಮೋಹನ್ ಸಿಂಗ್
ಭಾರತ ಸರ್ಕಾರದ ಕಿಂಗ್.
***
ಸೋನಿಯಾ ಗಾಂಧಿ
ಭಾರತ ಸರ್ಕಾರ ಇವರ ಬಂಧಿ.
***
ಲಾಲ್ ಕೃಷ್ಣ ಅಡ್ವಾಣಿ
ಹುಡುಕುತ್ತಿದ್ದಾರೆ ಹಾದಿ
ರಾಮ ಜಿನ್ನಾರ ನಡುವಣ.
***
ಅಮರನಾಥ್ ಸಿಂಗ್ ಮುಲಾಯಮ್
ತಯಾರಿಸುತ್ತಿದ್ದಾರೆ
ರಾಜಕೀಯ ಕುದುರೆಗಳ ಲಗಾಮ್ .
***
ಪ್ರಕಾಶ್ ಕರಾಟ್
ಒಣ ಮಾತಿನ ಆರ್ಭಟ
ಉಳಿಯಿತು ಕೇವಲ ಚಿಪ್ಪಿನ ಕರಟ .
***
ಮಾಯಾವತಿ
ಸ್ಥಾಪಿಸಿಯೂ ಸ್ವಂತ ಮೂರುತಿ
ಕೀರ್ತಿಗಾಗಿ ಯಾವಾಗಲೂ ಹಲುಬುತಿ.
***
ಸೋಮನಾಥ್ ಚಟರ್ಜಿ
ಆಗಿದ್ದಾರೆ
ಗಲಭೆ ಮಾಡುವ ಸಂಸದರಿಗೆ ಭರ್ಜಿ.
***
ಅನಿಲ್ ಮತ್ತು ಮುಖೇಶ್ ಅಂಬಾನಿ
ಆಸ್ತಿಯ ವಿಭಜನೆ ಸರಿಯಿಲ್ಲವೆಂದು ಗುಮಾನಿ
ರಾಜಕೀಯ ಪ್ರಭಾವದಿಂದ ಭಾರಿ ಹಣಾಹಣಿ .
___________________________________________________________________

ಷೇರು ಮಾರುಕಟ್ಟೆ

ಷೇರುಮಾರುಕಟ್ಟೆಯಲ್ಲಿ ನಡೆಯುವ ಕಸರತ್ತು
BEAR BULL ಗಳ ಮಸಲತ್ತು
ಆಡಿದರೆ ಸರಿಯಾಗಿ ಗಮ್ಮತ್ತು
ಇಲ್ಲವಾದರೆ ತಿರುಪೆ ಎತ್ತು.
_____________________________________________________________

ಕೋಲ ಪಾನೀಯಗಳು

ಪೆಪ್ಸಿಕೋಲ ಕೋಕೊಕೋಲ
ಬರೇ ಸಕ್ಕರೆ ನೀರಿಗೆ ಗ್ಯಾಸಿನ ಬಲ
ಆದರೂ ಹೆಚ್ಚುತ್ತಿದೆ ಜನರ ಚಪಲ
ಇದೆಲ್ಲಾ ಜಾಹೀರಾತಿನ 'ಕೋಲಾ' ಹಲ .
___________________________________________________________

ಪ್ರವಾಹದ ಪರಿಸ್ಥಿತಿ

ತುಂಗೆ ಕೃಷ್ಣಾ ನೇತ್ರಾವತಿ ಶರಾವತಿ
ನದಿಗಳು ಹರಿಯುತಿರಲು ಪ್ರವಾಹ ಉಕ್ಕಿ
ಕರೆಂಟಿಗೆ ಇನ್ನು ತೊಂದರೆಯಿಲ್ಲವೆಂದು ನೆಚ್ಚಿ
ಖುಷಿ ಪಡುತ್ತಿದ್ದಾರೆ ಬೆಂಗಳೂರ ಜನ
ಮನೆಗಳು ನಾಶವಾಗುತಿರಲು ಪ್ರವಾಹದಲ್ಲಿ ಕೊಚ್ಚಿ
ನಿಟ್ಟುಸಿರು ಬಿಡುತ್ತಿದ್ದರೆ ಕೆಳದಂಡೆ ಜನ.
__________________________________________________________________

ಸ್ವಾತಂತ್ರ್ಯ ದಿನಕ್ಕೆ ಸಮರ್ಪಿತ ಚುಟುಕಗಳು

ಸ್ವಾತಂತ್ರ್ಯ:
ಸಂದವು ವರುಷಗಳು ಅರವತ್ತು
ಸಿಕ್ಕರೂ ಹಲವಾರು ಸವಲತ್ತು
ರಾಜಕಾರಣಿಗಳು ಮಾಡಿದ ಕರಾಮತ್ತು
ದೇಶಕ್ಕಿಲ್ಲವಾಯಿತು ಕಿಮ್ಮತ್ತು.
_______________________
ಇವ ಕನ್ನಡದವ ಅವ ತಮಿಳಿನವ
ಇವ ಹಿಂದು ಅವ ಮುಸ್ಲಿಂ ಮತದವ
ಹೀಗೆಂದೇಕೆ ಎಣಿಸುತ್ತೀರಿ
ಅವ ಪರಕೀಯ ಇವ ನಮ್ಮವ
ಹೀಗಾಗಿಯೇ ಕಾಣುತ್ತಿದ್ದೇವೆ ಎಲ್ಲೆಲ್ಲೂ
ಅಲ್ಲೋಲ ಕಲ್ಲೋಲವ
ಬನ್ನಿರಿ ಎಲ್ಲರೂ ಒಂದಾಗಿ ಬಾಳುವ
ನಮ್ಮೆಲ್ಲರ ಶಕ್ತಿಯ ಒಗ್ಗೂಡಿಸುವ
ಕಟ್ಟಿ ಬೆಳೆಸೋಣ ಭವ್ಯ ಭಾರತವ.
_____________________

ಕಾರು-ಬಾರು

ಮಾರುತಿ ಟೊಯೋಟಾ ಜನರಲ್ ಮೋಟಾರು
ತರುತ್ತಿವೆ ಹೊಸ ಹೊಸ ಲಕ್ಷುರಿ ಕಾರು
ಜನ ಸಾಮಾನ್ಯರಿಗೇಕೆ ಇದರ ಜೋರು
ಸುಗಮವಾಗಿ ನಡೆದರೆ ಸಾಕು ದಿನ ನಿತ್ಯದ ಕಾರುಬಾರು .
_____________________________________________________________________