ಭಾನುವಾರ, ಡಿಸೆಂಬರ್ 21, 2008

ಸುಸ್ವಾಸ ಮತ್ತು ಟೆಲಿಫೋನ್ - 4

ಇದುವರೆಗೆ: ಸುಸ್ವಾಸ ಒಬ್ಬ ಆಲಸಿ ಆದರೆ ತುಂಬಾ ವಿವೇಚನೆಯುಳ್ಳ ಮನುಷ್ಯ. ಅವನು ಮಧ್ಯಾಹ್ನ ಕಂಡ ಕನಸಿನಲ್ಲಿ ಮಂಜಿನ ಮನುಷ್ಯನು ಹಳೇ ಮಾದರಿಯ ಕಪ್ಪು ಟೆಲಿಫೋನನ್ನು ತೋರಿಸಿ ಸುಸ್ವಾಸನನ್ನು ಕುರಿತು "ಇದನ್ನು ನಿನ್ನ ಮನೆಯ ಲಿವಿಂಗ್ ರೂಮಿನ ಈಶಾನ್ಯ ದಿಕ್ಕಿನಲ್ಲಿ ಇರಿಸಿದರೆ, ಸಕಲ ಸಂಪತ್ತು, ಮರ್ಯಾದೆಗಳು ನಿನ್ನ ನೆರಳಿನಂತೆ ಯಾವಾಗಲೂ ನಿನ್ನನ್ನು ಹಿಂಬಾಲಿಸುತ್ತವೆ" ಎಂದು ಹೇಳಿತು. ಆ ಟೆಲಿಫೋನು, ಮನೆಗೆ ಕರೆದೊಯ್ದು ಸ್ಥಾಪಿಸುವವರೆಗೂ ಮಾತನಾಡಬಾರದೆಂಬ ನಿಬಂಧನೆಯನ್ನು ವಿಧಿಸಿತ್ತು. ಕನಸಿನ ಪ್ರಕಾರವೇ ಟೆಲಿಪುರಮ್ಮಿನಲ್ಲಿ ಸಿಕ್ಕ ಟೆಲಿಫೋನು ಸುಸ್ವಾಸನ ನಂಬಿಕೆಯನ್ನು ಇಮ್ಮಡಿಗೊಳಿಸಿತು. ಮತ್ತು ಅದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸುವುದರಿಂದ ಸಕಲ ಸಂಪತ್ತು, ಮರ್ಯಾದೆಗಳು ದೊರೆಯುವ ಬಗ್ಗೆ ವಿಶ್ವಾಸವುಂಟಾಯಿತು. ಹೀಗಾಗಿ ಆ ಟೆಲಿಫೋನನ್ನು ಹೇಗಾದರೂ ಮನೆಗೆ ತರಲೇಬೇಕೆಂಬ ಧೃಡ ನಿರ್ಧಾರದೊಂದಿಗೆ ಪ್ರತಿ ದಿನ ಬೆಳಗ್ಗೆ ಟೆಲಿಪುರಮ್ಮಿಗೆ ಹೊರಡುತ್ತಿದ್ದನು.ಆದರೆ ಪ್ರತಿ ಬಾರಿಯೂ ಉಪಾಯದಿಂದ ಸುಸ್ವಾಸನು ಮಾತನಾಡುವಂತೆ ಮಾಡಿ, ಪುನಃ ಅದನ್ನು ಪಡೆಯಲು ಮಾರನೇ ದಿನದ ಸೂರ್ಯೋದಯದವರೆಗೂ ಕಾಯಬೇಕಾಗುತ್ತದೆಂದು ತಿಳಿಸಿ ಆ ಟೆಲಿಫೋನು ಮಾಯವಾಗಿ ಹೋಗುತ್ತಿತ್ತು.

ಕೊನೆಯ ಉಸಿರು

ಸುಸ್ವಾಸನು ಎಂದಿನಂತೆ ಅಂದು ಮುಂಜಾನೆ ಕೂಡ ಟೆಲಿಪುರಮ್ಮಿನತ್ತ ತನ್ನ ಕಾರನ್ನು ನಡೆಸತೊಡಗಿದ. ಅವನ ಮನಸ್ಸು ಹಿಂದಿನ ದಿನದ ಘಟನೆಯನ್ನು ಮೆಲಕು ಹಾಕುತ್ತಿತ್ತು. ಆ ದಿನ ಟೆಲಿಫೋನು ಮೊಟಕಾದ ಕಥೆ ಹೇಳಿದ್ದರಿಂದ, ಕಥೆ ಮುಗಿಯುವ ಮೊದಲೇ ಮನೆ ತಲುಪಿ ಮಾತನಾಡುವುದನ್ನು ತಪ್ಪಿಸಿಕೊಳ್ಳಬೇಕೆಂಬ ಅವನ ಉಪಾಯ ಫಲಿಸಲಿಲ್ಲ. ಸುಸ್ವಾಸನ ಮನಸ್ಸು ಈ ತುಮುಲದಲ್ಲಿರುವಾಗಲೇ, ಮತ್ತೊಂದು ಉಪಾಯಕ್ಕೆ ನಾಂದಿ ಹಾಡಿತು.

ಕಥೆ ಮತ್ತು ಅದರ ಅವಧಿಯನ್ನು ಮೊದಲೇ ತಿಳಿದುಕೊಳ್ಳಬಹುದಾದರೆ, ಕಥೆ ಮುಗಿಯುವ ಮುನ್ನವೇ ಮನೆ ತಲುಪಿ ಮಾತನಾಡುವುದನ್ನು ತಪ್ಪಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಅದರಂತೆ ಸರಸರನೆ ಮೊಬೈಲನ್ನು ತೆಗೆದು 'ನೇಚರ್' ಎಂದು 464 ಕ್ಕೆ ಎಸ್ ಎಂ ಎಸ್ ಕಳುಹಿಸಿದ. ಕೊಡಲೇ ಬೀಪ್ ಸದ್ದು ಮಾಡಿದ ಮೊಬೈಲಿನ ಫಲಕದಲ್ಲಿ "ಸಂದೇಶ ರವಾನೆಯಾಗಿಲ್ಲ, ನಂತರ ಪ್ರಯತ್ನಿಸಿ" ಎಂದು ಮೂಡಿತು. ಹಲವಾರು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲವಾದುದರಿಂದ ಸುಸ್ವಾಸನಿಗೆ ನಿರಾಶೆಯಾಯಿತು. ಅಷ್ಟರಲ್ಲೇ ಟೆಲಿಪುರಮ್ಮಿನ ಪಾಳು ಜಾಗಕ್ಕೆ ಬಂದು ತಲುಪಿದ. ಅಲ್ಲಿದ್ದ ಕಪ್ಪು ಟೆಲಿಫೋನನ್ನು ತನ್ನ ಕಾರಿನಲ್ಲಿರಿಸಿ ಮನೆ ಕಡೆ ಮರಳಲು ಅಣಿಯಾದ.

ಎಂದಿನಂತೆ 'ಟ್ರಿಣ್, ಟ್ರಿಣ್, ಟ್ರಿಣ್' ಸದ್ದು ಕಪ್ಪು ಟೆಲಿಫೋನಿನಿಂದ ಹೊರಟಿತಾದರೂ ಅದರ ನಾದದಲ್ಲಿ ಕೊಂಚ ಬದಲಾವಣೆ ಇರುವಂತೆ ಸುಸ್ವಾಸನಿಗೆ ಅನಿಸಿತು. ಅದೇ ವೇಳೆಗೆ ಗಡಸಾದ ಧ್ವನಿಯು "ಸುಸ್ವಾಸ, ಕೇವಲ ನನ್ನ ಉಪಸ್ಥಿತಿಯಲ್ಲಿ ಮಾತ್ರ 464 ಕ್ಕೆ ಎಸ್ ಎಂ ಎಸ್ ಕಳುಹಿಸಬಹುದು" ಎಂದಿತು.
ತನ್ನ ಆಲೋಚನೆಗಳನ್ನೆಲ್ಲಾ ಸೆರೆ ಹಿಡಿಯುವ ಟೆಲಿಫೋನಿನ ಬಗ್ಗೆ ಸುಸ್ವಾಸನಿಗೆ ಅಚ್ಚರಿಯುಂಟಾಯಿತು. ಹಾಗೇ "ಇಂದು ಕೂಡ ಟೆಲಿಫೋನನ್ನು ಮನೆಯಲ್ಲಿ ಸ್ಥಾಪಿಸುವಲ್ಲಿ ವಿಫಲನಾಗುವೆ" ಎಂಬ ವಿಚಾರ ಸುಳಿಯಿತು. ಅದೇ ಸಮಯಕ್ಕೆ ಗಡಸಾದ ಧ್ವನಿಯು ತನ್ನ ಮಾತನ್ನು ಮುಂದುವರೆಸುತ್ತ " ಸುಸ್ವಾಸ ನೀನೊಬ್ಬ ವಿವೇಚನೆಯುಳ್ಳ ವ್ಯಕ್ತಿ, ಆದರೂ ನನ್ನನ್ನು ಎಮಾರಿಸುವ ಬಗ್ಗೆ ಆಲೋಚನೆ ಮಾಡಿದ್ದೀಯ. ಹೀಗಾಗಿ ಇಂದು ನನ್ನ ಕಟ್ಟಳೆಯನ್ನು ಬದಲಾಯಿಸುತ್ತಿದ್ದೇನೆ..."

ಇದನ್ನು ಕೇಳಿದ ಸುಸ್ವಾಸನಿಗೆ, ಅವನ ಉಸಿರು ಕಟ್ಟ ಕಡೆಯ ಬಾರಿಗೆ ಹೊರಗೆ ಹೋಗುತ್ತಿದೆ ಎನಿಸಿತು ! ಆದರೂ ಸಾವರಿಸಿಕೊಂಡ ಸುಸ್ವಾಸನು ಗಡಸಾದ ಧ್ವನಿಯು ಮುಂದುವರೆಸುತ್ತಿದ್ದ ಮಾತನ್ನು ಆಲಿಸತೊಡಗಿದನು.

"ಪ್ರತಿ ಸಲ ನೀನು ಮೌನವಾಗಿ ಕಥೆಯನ್ನು ಕೇಳಬೇಕಾಗಿತ್ತಲ್ಲವೇ , ಆದರೆ ಇಂದು ನೀನು ಮಾತನಾಡಬೇಕು. ಉಸಿರಿನ ಬಗ್ಗೆ ನೀನು ಹೇಳಬಲ್ಲೆಯಾದರೆ ನನ್ನನ್ನು ಮನೆಗೆ ಕರೆದೊಯ್ಯಬಹುದು!" ಎನ್ನುತ್ತಾ ಕಪ್ಪು ಟೆಲಿಫೋನು ಮಾತನ್ನು ಮುಗಿಸಿತು. ಸುಸ್ವಾಸನಿಗೆ ತಿರುಗಿ ಬರದಂತೆ ಹೊರಟಿದ್ದ ಉಸಿರು ಪುನಃ ಬಂದಂತೆ ಅನಿಸಿತು. ದೀರ್ಘವಾಗಿ ಎಳೆದುಕೊಂಡ ಶ್ವಾಸವು ಸುಸ್ವಾಸನ ಶರೀರಕ್ಕೆ ಚೇತರಿಕೆಯನ್ನು ಮತ್ತು ಮನಸ್ಸಿಗೆ ಉಲ್ಲಾಸವನ್ನು ತಂದಿತು.

ಉಸಿರಿನ ಬಗ್ಗೆ ಸುಸ್ವಾಸನು ಮಾತನಾಡತೊಡಗಿದ.

"ಉಸಿರೇ ಜೀವ, ಜೀವನ. ಮೊಟ್ಟ ಮೊದಲ ಬಾರಿಗೆ ಒಳಗೆಳೆದುಕೊಂಡ ಉಸಿರು ಮತ್ತು ಕಟ್ಟ ಕಡೆಯ ಬಾರಿಗೆ ಹೊರಬಿಡುವ ಉಸಿರು ನಮ್ಮ ಬದುಕೆಂಬ ಪ್ರಯಾಣದ ಆದಿ, ಅಂತ್ಯಗಳನ್ನು ಪ್ರತಿನಿಧಿಸುತ್ತವೆ. ಈ ಮಧ್ಯೆ ಸಾಗುವ ಜೀವ, ಜೀವನಕ್ಕೆ ನಿರಂತರವಾಗಿ ಒಳಕ್ಕೆ ಮತ್ತು ಹೊರಗೆ ಹೋಗುವ ಉಸಿರಿನ ಪ್ರಕ್ರಿಯೆ ಅತಿ ಅವಶ್ಯ. ಹೀಗಾಗಿ ಒಮ್ಮೆ ಒಳಕ್ಕೆ ತೆಗೆದುಕೊಂಡ ಉಸಿರು ಕೆಲ ಕ್ಷಣಗಳವರೆಗೆ ನಿಂತರೂ, ಪುನಃ ಹೊರಕ್ಕೆ ಹೋಗಲೇಬೇಕು. ಮತ್ತು ಹೊರಕ್ಕೆ ಹೋಗಿದ್ದು ಒಳಕ್ಕೆ ಬರಲೇ ಬೇಕು. ನಮ್ಮ ಜೀವನದಲ್ಲಿ ಜರಗುವ ಘಟನೆಗಳೂ ಇದೇ ರೀತಿಯಾಗಿ ಬರುತ್ತವೆ, ಕೆಲ ಕಾಲ ನಮ್ಮೊಂದಿಗಿದ್ದು ಹೊರಟು ಹೋಗುತ್ತವೆ. ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ, ನಮ್ಮ ಉಸಿರು ಸಂಪೂರ್ಣವಾಗಿ ನಿಲ್ಲುವವರೆಗೆ!


ಈ ಘಟನೆಗಳನ್ನು ನಾವು ಸಂತೋಷಪೂರ್ಣ, ದುಃಖದಾಯಕ, ಉಲ್ಲಾಸಭರಿತ, ನೀರಸ, ಕಿರಿಕಿರಿ, ವ್ಯಾಕುಲತೆಯಿಂದ ಕೂಡಿದ, ಸಹಿಸಲಾಧ್ಯ, ಉತ್ಸಾಹಭರಿತ ಹೀಗೆ ಅರ್ಥೈಸುತ್ತೇವೆ, ಹಣೆಪಟ್ಟಿಯನ್ನು ಲಗತ್ತಿಸುತ್ತೇವೆ. ಆದರೆ ಎಲ್ಲಾ ಘಟನೆಗಳೂ ನಮ್ಮ ಉಸಿರಿನಂತೆ ಯಾವುದೇ ಹಣೆಪಟ್ಟಿಗೆ ಸೇರಿದ್ದರೂ, ಬರುತ್ತವೆ, ಕೆಲ ಹೊತ್ತು ನಿಲ್ಲುತ್ತವೆ ಮತ್ತು ಹಾಗೇ ಹೊರಟು ಹೋಗುತ್ತವೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವ ಮೊದಲು ಹೊರಹಾಕಲ್ಪಟ್ಟಿರುತ್ತದೆ.
ಹಾಗೆಯೇ ಘಟನೆಯ ಸರಮಾಲೆಗಳು ಬಂದು ಹೋಗುತ್ತಿರುತ್ತವೆ.
ಆದ್ದರಿಂದ ಈ ಕಷ್ಟ , ಸುಖ, ದುಃಖ, ಮಣ್ಣು ಮಸಿ ಎನ್ನುತ್ತಾ ಮನಸ್ಸಿಗೆ ಹಚ್ಚಿಕೊಳ್ಳದೆ ನಮ್ಮ ಜೀವನವನ್ನು ಪರಿಪೂರ್ಣವಾಗಿ ಅನುಭವಿಸುವುದೇ ಉತ್ತಮ.


ಉಸಿರಾಟದ ಪ್ರಕ್ರಿಯೆಯನ್ನು ಗಮನಿಸಿದಾಗ ನಮಗೆ ತಿಳಿಯುವ ಅಂಶವೆಂದರೆ - ನಾವು ತೆಗೆದುಕೊಳ್ಳುವ ಗಾಳಿಯು ಆಮ್ಲಜನಕ, ಸಾರಜನಕ, ಇಂಗಾಲದ ಡೈ ಆಕ್ಸೈಡ್, ನೀರಾವಿ ಮತ್ತು ಕಲ್ಮಶಗಳ ಮಿಶ್ರಣ. ಇಷ್ಟಾದರೂ ಶರೀರವು ಅವಶ್ಯಕವಾದ ಆಮ್ಲಜನಕವನ್ನು ಮಾತ್ರ ಹೀರಿಕೊಳ್ಳುತ್ತದೆ.

ಜೀವನದಲ್ಲಿ ಸಂಭವಿಸುವ ಘಟನೆಗಳು ಕೂಡ ಅನೇಕ ವಿಚಾರಗಳ ಮತ್ತು ಸನ್ನಿವೇಶಗಳ ಮಿಶ್ರಣ. ಅವುಗಳಲ್ಲಿ ಕೆಲವು ಇಷ್ಟವಾದರೆ, ಹಲವು ಅನಿಷ್ಟವೆನಿಸುತ್ತವೆ. ಕೆಲವುಗಳ ಜೊತೆ ಸದಾ ಇರಲು ಇಚ್ಚಿಸುತ್ತೇವೆ, ಮತ್ತೆ ಕೆಲವುದರಿಂದ ದೂರವಿರಲು ಹವಣಿಸುತ್ತೇವೆ. ಮೊಟ್ಟ ಮೊದಲು ಒಳಗೆ ತೆಗೆದುಕೊಳ್ಳುವ ಉಸಿರು ಮತ್ತು ಕಟ್ಟ ಕಡೆಯದಾಗಿ ಹೊರಹಾಕುವ ಉಸಿರಿನ ನಡುವಿನ ಜೀವನದ ಪ್ರಯಾಣಕ್ಕೆ ನಿರಂತರ ಉಸಿರಾಟವು ಹೇಗೆ ಅವಶ್ಯಕವೋ, ಜೀವನದ ಪರಿಪೂರ್ಣತೆಯನ್ನು ಅನುಭವಿಸಲು ಆಯಾ ಕ್ಷಣದಲ್ಲಿ ಸಂಭವಿಸುತ್ತಿರುವ ಪ್ರತಿಯೊಂದು ಘಟನೆಗಳ ಸಂಪೂರ್ಣ ಸ್ವೀಕೃತಿ, ತದನಂತರ ಅವುಗಳಿಂದ ವಿಮುಖವಾಗುವ ಪ್ರವೃತ್ತಿಯೂ ಮಹತ್ವವಾದುದು.

ಆದ್ದರಿಂದ ಉಸಿರಾಟದ ಅರಿವೇ ಜೀವನದ ಪರಿಪೂರ್ಣತೆಯನ್ನು ಅನುಭವಿಸುವ ಮಾರ್ಗ ಸೂಚಕ. ಇದೇ ಕಾರಣಕ್ಕಾಗಿ ಪ್ರಾಚೀನ ಕಾಲದಿಂದಲೂ ನಮ್ಮ ಋಷಿ ಮುನಿಗಳು, ಹಾಗು ಆಧುನಿಕ ಯುಗದ ಗುರುವರ್ಯರು ಧ್ಯಾನದ ವೇಳೆಯಲ್ಲಿ ಉಸಿರಾಟದ ಕಡೆ ಗಮನ ಹರಿಸುವ ಬಗ್ಗೆ ಪ್ರಾಮುಖ್ಯತೆ ನೀಡಿದ್ದಾರೆ."

ಸುಸ್ವಾಸನು ಇಷ್ಟನ್ನು ಹೇಳಿ ಮುಗಿಸಿದ ನಂತರ, ಅವನ ಮನೆ ತಲಪುವವರೆಗೂ ಮೌನ ಆವರಿಸಿತ್ತು.

ಮನೆಯ ಮುಂದೆ ಕಾರನ್ನು ನಿಲ್ಲಿಸುತ್ತಿದ್ದಂತೆಯೇ, ಸುಸ್ವಾಸನು ಕಪ್ಪು ಟೆಲಿಫೋನನ್ನು ಹಿಡಿದು ತನ್ನ ಮನೆಯ ಈಶಾನ್ಯ ದಿಕ್ಕಿನಲ್ಲಿರುವ ರೂಮಿನತ್ತ ಧಾವಿಸಿದ. ಅಲ್ಲಿದ್ದ ಮೇಜಿನ ಮೇಲೆ ಟೆಲಿಫೋನನ್ನು ಇಟ್ಟು ಬಳಿಯಲ್ಲಿದ್ದ ಆಸನದಲ್ಲಿ ಹಾಗೇ ಕಣ್ಣು ಮುಚ್ಚಿ ಕುಳಿತುಕೊಂಡನು. ತಾನಿನ್ನು ಸುಖ ಸಂಪತ್ತುಗಳ ಸರದಾರನೆಂದು ಅರಿಯಲು ಸುಸ್ವಾಸನಿಗೆ ಕೆಲವು ಕ್ಷಣಗಳೇ ಬೇಕಾಯಿತು. ನಿಧಾನವಾಗಿ ತೆರೆದ ಕಣ್ಣುಗಳನ್ನು ಫೋನಿನತ್ತ ಹಾಯಿಸಿದ ಸುಸ್ವಾಸನಿಗೆ ಭಯ ಆಶ್ಚರ್ಯಗಳು ಒಟ್ಟಿಗೆ ಉಂಟಾದವು.

ಸುಸ್ವಾಸನಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಆ ಕಪ್ಪು ಟೆಲಿಫೋನು, ಮಂಜಿನ ಮನುಷ್ಯನಾಗಿ ರೂಪಾಂತರ ಹೊಂದಿತ್ತು. ಕಣ್ಣುಗಳ ರೆಪ್ಪೆ ಮಿಟುಕಿಸದಂತೆ ದಿಟ್ಟಿಸಿ ನೋಡುತ್ತಿದ್ದ ಸುಸ್ವಾಸನ್ನು ಕುರಿತು ಆ ಮಂಜಿನ ಮನುಷ್ಯ ಮಾತನಾಡತೊಡಗಿತು - " ಸುಸ್ವಾಸ ನಾನಿನ್ನು ಇಲ್ಲಿ ಇರುವ ಅವಶ್ಯಕತೆಯೇ ಇಲ್ಲ! ನೀನು ನಿಜವಾಗಿಯೂ ತುಂಬಾ ವಿವೇಚನೆಯುಳ್ಳ ಮನುಷ್ಯ. ನೀನು ಪ್ರತಿ ಕಥೆಯ ಕೊನೆಯಲ್ಲಿ ನೀಡುತ್ತಿದ್ದ ಉತ್ತರಗಳೇ ಅದಕ್ಕೆ ಸಾಕ್ಷಿ. ನೀನು ತಿಳಿದುಕೊಂಡಿರುವ ವಿಚಾರ ಸರಣಿಯ ಹುಟ್ಟು ಮತ್ತು ಅವುಗಳು ಸಾಗುವ ಪರಿ, ಅತ್ಯಮೂಲ್ಯ ಸಂಪನ್ಮೂಲವಾದ ವೇಳೆಯನ್ನು ಬಳಸಿಕೊಳ್ಳುವ ಬಗೆ, ಏರು ಪೇರಿನ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವ ರೀತಿಗಳೇ ನಿನ್ನ ಕೊನೆಯ ಉಸಿರು ಹೊರ ಹೋಗುವವರೆಗೆ ಜೀವನ ಪ್ರಯಾಣದ ಪ್ರತಿ ಕ್ಷಣವನ್ನು ಸುಖ, ಶಾಂತಿ ಮತ್ತು ಸಂಭ್ರಮಗಳಿಂದ ಅನುಭವಿಸಲು ಮಾರ್ಗ ತೋರುತ್ತವೆ. ಮತ್ತೊಂದು ಮುಖ್ಯವಾಗಿ ಅರಿಯಬೇಕಾದ ವಿಚಾರವೆಂದರೆ ಜೀವನ ಪ್ರಯಾಣದಲ್ಲಿ ಆಗಾಗ ಬರುವ ಪ್ರತಿ ನಿಲುಗಡೆಯು ಕವಲುದಾರಿಯ ನಡುವೆಯೇ! ಆದರೆ ಎಲ್ಲಾ ಹಾದಿಗಳು ಗಮ್ಯ ಸ್ಥಾನವನ್ನೇ (destination) ಸೇರುತ್ತವೆ. ಆದ್ದರಿಂದ ಜೀವನ ಪ್ರಯಾಣದಲ್ಲಿ ನಿಲುಗಡೆ ಕಂಡಾಗ ನಮಗೆ ಹಿತವೆನಿಸುವ ಹಾದಿಯನ್ನು ಆಯ್ದು ಪ್ರಯಾಣವನ್ನು ಮುಂದುವರೆಸುವುದೇ ಸುಖ, ಸಂತೋಷಗಳ ಸಿರಿತನದ ತಿಜೋರಿಯ ಕೀಲಿಕೈ.


ಅಂತಿಮವಾಗಿ ನೀನು ಎಸ್ ಎಂ ಎಸ್ ಮಾಡುತ್ತಿದ್ದ 464 ನಂಬರಿನ ರಹಸ್ಯವನ್ನು ಕೇಳು. 'ನಾಕು ಆರು ನಾಕು' ನಾಕ ಮತ್ತು ನರಕದೊಂದಿಗೆ ಪ್ರಾಸಬದ್ಧವಾಗಿದೆ. ಅದು ಸ್ವರ್ಗ ಮತ್ತು ನರಕವನ್ನು ಸಂಪರ್ಕಿಸಲು ಇರುವ ಏಕ ಮಾತ್ರ ದೂರವಾಣಿ ಸಂಖ್ಯೆ. ಅಂದರೆ ಸ್ವರ್ಗ ನರಕಗಳೆರಡನ್ನೂ ನಾವು ಇಲ್ಲಿಯೇ ಜೀವನ ಪ್ರಯಾಣದಲ್ಲಿ ಅನುಭವಿಸುತ್ತೇವೆ. ಇದು ಮೊದಲ ಮತ್ತು ಕೊನೆಯ ಉಸಿರಿನ ನಡುವೆ ನಡೆಯುವ ನಿರಂತರ ಉಸಿರಾಟದಷ್ಟೇ ಸಹಜ.

ಇನ್ನು ಮೇಲೆ ವಾಸ್ತು, ಫೆಂಗ್ ಶುಯಿಗಳ ಗೋಜನ್ನು ಬಿಡು. ಜನಪ್ರಿಯವಾಗಿರುವ ಇಂತಹ ಇನ್ನೂ ಅನೇಕ ಮತಿಹೀನ ಆಚರಣೆಗಳಿವೆ. ಅವುಗಳ ಗೋಜೆಲ್ಲ ನಿನಗೇಕೆ? ನೀನು ಮಾತ್ರ ಕೀರ್ತಿ ಸಂಪತ್ತುಗಳ ಬೆನ್ನು ಹತ್ತುವುದನ್ನು ಬಿಟ್ಟು ಪ್ರಕೃತಿಯ ನಿನ್ನ ಸ್ವಂತ ಪ್ರಕೃತಿಯ ಬಗ್ಗೆ ಅರಿತು ನಿರಾಳವಾದರೆ, ಕೀರ್ತಿ ಸಂಪತ್ತುಗಳು ನಿನ್ನನ್ನೇ ಅರಸಿ ಬರುತ್ತವೆ!" ಇಷ್ಟು ಹೇಳಿದ ಮಂಜಿನ ಮನುಷ್ಯ ಸಣ್ಣ ಸುಂಟರಗಾಳಿಯಂತೆ ತಿರುಗುತ್ತಾ ಸುಸ್ವಾಸನತ್ತ ಧಾವಿಸತೊಡಗಿತು. ಅದನ್ನೇ ದಿಟ್ಟಿಸಿ ನೋಡುತ್ತಿದ್ದ ಸುಸ್ವಾಸ ಕಣ್ಣು ಮುಚ್ಚಿ ಬಾಗಿದ. ಅಷ್ಟರಲ್ಲೇ ಗರಗರನೆ ಸುತ್ತುತ್ತಿದ್ದ ಮಂಜು ಸುಸ್ವಾಸನ ಮುಖಕ್ಕೆ ರಪ್ಪನೆ ಅಪ್ಪಳಿಸಿತು.

ಮುಖದಿಂದ ಇಳಿಯುತ್ತಿದ್ದ ನೀರಿನ ಹನಿಗಳನ್ನು ಒರೆಸುತ್ತ ಕಣ್ಣು ಬಿಟ್ಟ ಸುಸ್ವಾಸ ಕಂಡದ್ದೇನು?

ಸುಸ್ವಾಸನ ಹೆಂಡತಿ ಮತ್ತು ಮಕ್ಕಳಿಬ್ಬರು, ಅವನು ಮಲಗಿದ್ದ ಬೆಂಚಿನ ಸುತ್ತಲು ನಿಂತು ಮುಖಕ್ಕೆ ನೀರನ್ನು ಚಿಮುಕಿಸುತ್ತಿದ್ದಾರೆ!

ಹೆಂಡತಿ : "ನಿಮ್ಮದೆಂತಹ ನಿದ್ದೆ, ಮೊಬೈಲು ಅಷ್ಟು ಜೋರಾಗಿ ರಿಂಗಾಗುತ್ತಿದ್ದರೂ ಎಚ್ಚರವಾಗಲಿಲ್ಲವೇ?"
ಮಕ್ಕಳು : "ಅಪ್ಪಾ, ನಾವು ಜೋಕಾಲಿ, ಜಾರುಬಂಡೆ ಮತ್ತೆ ಪಾರ್ಕಿನಲ್ಲಿರುವ ಎಲ್ಲವನ್ನೂ ಆಡಿ ಮುಗಿಸಿದ್ದೇವೆ. ನಮಗೆ ತುಂಬಾ ಹೊಟ್ಟೆ ಹಸಿಯುತ್ತಿದೆ, ಹೋಟೆಲಿಗೆ ಹೋಗೋಣ ಬಾ!"

ಸುಸ್ವಾಸನಿಗೆ ಆ ದಿನ ಮಧ್ಯಾಹ್ನ ಅಪರೂಪಕ್ಕೆ ಮಲಗಿ ದೀರ್ಘ ನಿದ್ದೆ ಮಾಡಿದ್ದರ ಬಗ್ಗೆ ವಿಷಾದವೆನಿಸಲಿಲ್ಲ.
ಏಕೆಂದರೆ ಅವನ ಎಚ್ಚರಿಕೆಯು ಈಗ ಸ್ವ-ಅರಿವಿನಿಂದ ಕೂಡಿತ್ತು!

_______________________________________________________________________________________