ಬುಧವಾರ, ಸೆಪ್ಟೆಂಬರ್ 3, 2008

ವಜ್ರಕ್ಕಾಗಿ ಹುಡುಕಾಟ

ದಕ್ಷಿಣ ಅಫ್ರಿಕೆಯಲ್ಲಿ ಒಂದು ಜೆನ್ ಆಶ್ರಮ. ಇದೊಂದು ಅಪರೂಪದ ಸಂಗತಿಯೇ. ಚೀನಾ, ಜಪಾನುಗಳಾದರೆ ಹೆಜ್ಜೆ ಹೆಜ್ಜೆಗೂ ಜೆನ್ ನ ಅನುಯಾಯಿಗಳು ಸಿಗುತ್ತಾರೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಅದು ಹೇಗೋ ಈ ಜೆನ್ ಗುರು ಒಂದು ಆಶ್ರಮವನ್ನು ಕಟ್ಟಿಕೊಂಡು ತಮ್ಮ ಸಾಧನೆಯಲ್ಲಿ ಮುಳುಗಿಹೋಗಿದ್ದರು. ಈ ಆಶ್ರಮವು ಒಂದು ವಿಶಾಲ ಸರೋವರದ ಬಳಿಯಿತ್ತು. ಅಲ್ಲಿನ ಮತ್ತೊಂದು ವಿಶೇಷವೇನೆಂದರೆ ಬೃಹದಾಕಾರವಾಗಿ ಬೆಳೆದಿದ್ದ ಮಾವಿನ ಮರ.

ಆಫ್ರಿಕಾದಲ್ಲಿ ವಜ್ರ ಮತ್ತು ಇನ್ನಿತರ ಬೆಲೆಬಾಳುವ ಹರಳುಗಳು ಹೇರಳವಾಗಿ ದೊರೆಯುತ್ತವೆಯೆಂದು, ತಮ್ಮ ಭಾಗ್ಯವನ್ನು ಅರಸಲು ಅನೇಕರು ಆಫ್ರಿಕಾಗೆ ವಲಸೆ ಹೋಗಿದ್ದರು. ಅವರಲ್ಲಿ ಕೆಲವರು ಅತಿ ಶ್ರೀಮಂತರಾದರೆ, ಉಳಿದ ಬಹಳಷ್ಟು ಜನ ವಜ್ರದ ನಿಕ್ಷೇಪಕ್ಕಾಗಿ ಸುತ್ತಿ ಸುತ್ತಿ ಬಸವಳಿದರು. ಹೀಗೆ ಬಸವಳಿದವರಲ್ಲಿ ಭಾರತದಿಂದ ಹೋಗಿದ್ದ ಸುಸ್ವಾಸ ಕೂಡ ಒಬ್ಬ. ಸುಸ್ವಾಸ ಅತ್ಯಂತ ಕಡಿಮೆ ಸಮಯದಲ್ಲಿ ಭಾರಿ ಶ್ರೀಮಂತನಾಗಬೇಕೆಂದುಕೊಂಡು, ಭಾರತದಲ್ಲಿ ತನ್ನ ಬಳಿಯಿದ್ದ ಅಲ್ಪ ಸ್ವಲ್ಪ ಆಸ್ತಿಯನ್ನು ಮಾರಿ, ಜೀವಮಾನದ ಉಳಿತಾಯವನ್ನು ಕೂಡ ಸೇರಿಸಿ ಆಫ್ರಿಕಾಗೆ ಹೋಗಿದ್ದ. ವಜ್ರದ ನಿಕ್ಷೇಪದ ಹುಡುಕಾಟದಲ್ಲಿ ತನ್ನೆಲ್ಲಾ ಹಣವನ್ನು ಕಳೆದುಕೊಂಡು ನಿರಾಶನಾಗಿದ್ದನು. ಇಂತಹ ಸಮಯದಲ್ಲೇ ಆಫ್ರಿಕಾದ ಜೆನ್ ಗುರುವಿನ ಬಗ್ಗೆ ತಿಳಿದುಕೊಂಡು, ಭಾರತಕ್ಕೆ ಹಿಂದಿರುಗುವ ಮುನ್ನ ಒಮ್ಮೆ ಭೇಟಿಯಾಗಿ ಹೋಗೋಣವೆಂದುಕೊಂಡು ಆಶ್ರಮದ ಬಳಿ ಬಂದನು.

ಸುಸ್ವಾಸನಿಗೆ ಸರೋವರದ ಬಳಿಯಲ್ಲಿನ ಪ್ರಶಾಂತತೆ ತುಂಬಾ ಹಿಡಿಸಿತು. ಅಲ್ಲಿನ ಮಾವಿನ ಮರದ ತುಂಬಾ ಬಂಗಾರದಂತಹ ಹಣ್ಣುಗಳು ತೂಗಾಡುತ್ತಿರುವ ದೃಶ್ಯ ಅಚ್ಚರಿ ಮೂಡಿಸಿತು. ಜೆನ್ ಗುರುವಿಗೆ ಅರ್ಪಿಸಲು ಹಣ್ಣನ್ನಾದರೂ ತೆಗೆದುಕೊಂಡು ಹೋಗೋಣವೆಂದುಕೊಂಡು ಯೋಚಿಸಿ ಸುಸ್ವಾಸ ಮರದ ಬಳಿ ಬಂದನು. ಸುಸ್ವಾಸನಿಗೆ ಮರವೇರಲು ಬರುತ್ತಿರಲ್ಲಿಲ್ಲ. ಹಾಗಾಗಿ ಅಲ್ಲೇ ಬಿದ್ದಿದ್ದ ಕಲ್ಲೊಂದನ್ನು ಎತ್ತಿ ಮರದ ಕಡೆ ಎಸೆದ. ಕಲ್ಲು ಹಣ್ಣೊಂದನ್ನು ಉರುಳಿಸಿ ಸರೋವರದಲ್ಲಿ ಬಿದ್ದು ಮುಳುಗಿತು. ಸುಸ್ವಾಸ ಆ ಹಣ್ಣನ್ನು ಒರೆಸಿ ಆಶ್ರಮದ ಕಡೆ ನಡೆದ.

ಜೆನ್ ಗುರುವಿನ ಆಶೀರ್ವಾದ ಪಡೆಯಲು ಕೆಲವು ಜನರು ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಂಡ ಸುಸ್ವಾಸ ತಾನೂ ಅಲ್ಲಿ ಹೋಗಿ ನಿಂತುಕೊಂಡ. ಗುರುವಿನ ಬಳಿ ಬರುತ್ತಿದ್ದಂತೆ ಭಯಭಕ್ತಿಯಿಂದ ಮಾವಿನ ಹಣ್ಣನ್ನು ಅರ್ಪಿಸಿ ಕೈ ಜೋಡಿಸಿ ನಿಂತನು. ಆಗ ಜೆನ್ ಗುರುವು "ಸರೋವರದ ಬಳಿಯಿರುವ ಮಾವಿನ ಮರದ ಹಣ್ಣೆ?" ಎಂದು ವಿಚಾರಿಸಿದಾಗ ಸುಸ್ವಾಸನು ಹೌದೆಂದು ತಲೆಯಾಡಿಸಿದನು. "ನಿನಗೆ ಮರ ಹತ್ತಲು ಬರುವುದೇ?" ಎಂದು ಜೆನ್ ಗುರುವು ಕೇಳಿದಾಗ, ಸುಸ್ವಾಸನು "ಇಲ್ಲ, ಮರದ ಬಳಿಯಿದ್ದ ಕಲ್ಲೊಂದರಿಂದ ಈ ಹಣ್ಣನ್ನು ಬೀಳಿಸಿ ತಂದಿರುವೆ" ಎಂದುತ್ತರಿಸಿದನು. "ಹಾಗಾದರೆ ಒಂದು ವಜ್ರವು ವ್ಯರ್ಥವಾಗಿ ಸರೋವರದ ತಳವನ್ನು ಸೇರಿತು" ಎಂದು ಜೆನ್ ಗುರುವು ಹೇಳಿದಾಗ, ಸುಸ್ವಾಸನು ಗಲಿಬಿಲಿಗೊಂಡನು. ಅಲ್ಲಿಂದ ಬೇಗನೆ ಹೊರಡುವ ಆತುರತೆ ಅವನ ಮುಖದಲ್ಲಿ ಸ್ಪಷ್ಟವಾಗಿ ಮೂಡಿತ್ತು. ಅದನ್ನು ಗಮನಿಸಿದ ಜೆನ್ ಗುರುವು ಸುಸ್ವಾಸನನ್ನು ಕುರಿತು "ಹೆದರಬೇಡ, ಆ ಸರೋವರದ ಬಳಿಯಿರುವ ಎಲ್ಲಾ ಕಲ್ಲುಗಳೂ ವಜ್ರಗಳೇ. ಪ್ರತಿಯೊಂದು ವಜ್ರವೂ ನಿನಗೆ ಒಂದು ಮಾವಿನ ತೋಟವನ್ನೇ ಕೊಳ್ಳುವಷ್ಟು ಬೆಲೆಯುಳ್ಳದ್ದಾಗಿದೆ" ಎಂದು ಹೇಳಿದರು. ತನ್ನ ಕಾತುರತೆಯನ್ನು ತೋರಿಸಿಕೊಳ್ಳದೆ ಮತ್ತೊಮ್ಮೆ ಗುರುವಿಗೆ ನಮಸ್ಕರಿಸಿ ನಿಧಾನವಾಗಿ ಆಶ್ರಮದ ಹೊರಗೆ ನಡೆದ ಸುಸ್ವಾಸನು, ನಂತರ ಒಂದೇ ಉಸಿರಿಗೆ ಸರೋವರದ ಬಳಿಗೆ ಓಡಿದನು. ವಜ್ರಕ್ಕಾಗಿ ಅಲ್ಲಿ ಬಿದ್ದಿರುವ ಕಲ್ಲುಗಳೆಲ್ಲೆಲ್ಲಾ ತಡಕಾಡತೊಡಗಿದನು. ಅದೇ ಸರೋವರದ ದಡದ ಬಳಿ ಮೀನು ಹಿಡಿಯಲು ಗಾಳ ಹಾಕಿ ಕೂತಿದ್ದ ಜೆನ್ ಶಿಷ್ಯನೊಬ್ಬ ಸುಸ್ವಾಸನ ಪರದಾಟವನ್ನು ಗಮನಿಸಿದ. ಸುಸ್ವಾಸನನ್ನು ಬಳಿಗೆ ಕರೆದು, ಅವನ ಹುಡುಕಾಟದ ಕಾರಣವನ್ನು ಕೇಳಿದ. ಸುಸ್ವಾಸ ಜೆನ್ ಗುರುವಿನ ಜೊತೆ ನಡೆದ ಮಾತುಕತೆಯನ್ನು ತಿಳಿಸಿದ. ಇದು 'ಕೊಆನ್' (koan) ಮೂಲಕ ತಿಳಿಸಿರುವ ಸಂದೇಶವೆಂದು ಅರಿತ ಶಿಷ್ಯ, ಅದರ ಅರ್ಥವನ್ನು ಬಿಡಿಸಿ ವಿವರವಾಗಿ ಹೇಳತೊಡಗಿದ.

ವಜ್ರವೆಂದರೆ ಹೊಳಪುಳ್ಳದ್ದು, ಅತ್ಯಂತ ಬೆಲೆಬಾಳುವ ಹಾಗು ಅತಿ ಕಠಿಣವಾದ ವಸ್ತು ಎಂದು ನಮಗೆ ತಿಳಿದಿದೆ. ಇದನ್ನು ಅತ್ಯಂತ ಜೋಪಾನ ಮಾಡುತ್ತಾರೆ, ಬೆಲೆಬಾಳುವ ಆಭರಣಗಳಲ್ಲಿ ಬಳಸುತ್ತಾರೆ, ಅತ್ಯಂತ ಕಠಿಣವಾದ ವಸ್ತುಗಳನ್ನು ಕತ್ತರಿಸಲು ಉಪಯೋಗಿಸುತ್ತಾರೆ ಮತ್ತು ವಜ್ರವು ಮಹಾನ್ ಚಕ್ರವರ್ತಿಗಳ ತಲೆಯ ಮೇಲೂ ಕುಳಿತುಕೊಳ್ಳುತ್ತದೆ (ಕಿರೀಟದಲ್ಲಿ). ಆದರೆ ಈ ರೀತಿಯಾಗಿ ಕಾಣುವ ಮುನ್ನ ಸಾಣೆ ಹಿಡಿದು ಪಾಲಿಶ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ವಜ್ರವು ಕೇವಲ ಸಾಮಾನ್ಯ ಕಲ್ಲಿನಂತೆ ಕಾಣುತ್ತದೆ. ಕಲ್ಲು ಕೇವಲ ಹಣ್ಣನ್ನು ಉದುರಿಸುವ ತನಕ ಮಾತ್ರ ಗಮನದಲ್ಲಿದ್ದು ನಂತರ ಸರೋವರದ ತಳವನ್ನು ಸೇರಿ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗುತ್ತದೆ. ಆದುದರಿಂದ ನಾವೆಲ್ಲರೂ ಮಾಡಬೇಕಾದ ಮೊದಲ ಕೆಲಸವೆಂದರೆ, ನಾವು ಪ್ರತಿಯೊಬ್ಬರೂ ವಜ್ರದಂತೆ ಅಸಾಮಾನ್ಯರು, ವಿಶಿಷ್ಟರು ಎಂದರಿಯಬೇಕು, ವಿಶ್ವಾಸವಿಡಬೇಕು. ಆಗ ನಮ್ಮ ಪರಿಶ್ರಮ ಹಾಗು ನಮಗೆ ಬಂದೊದಗುವ ಕಷ್ಟಗಳು ಸತತವಾಗಿ ಸಾಣೆ ಹಿಡಿದು, ಪಾಲಿಶ್ ಮಾಡಿ, ಕಲ್ಲಿನಂತೆ ಕಾಣುವ ವಜ್ರವನ್ನು ಅತ್ಯಮೂಲ್ಯವಾದ ಕೊಹಿನೂರಗಿಂತಲೂ ಜಗತ್ಪ್ರಸಿದ್ದಿ ಗಳಿಸುವಂತೆ ಮಾಡಲು ನೆರವಾಗುತ್ತವೆ.

ಪರಿಶ್ರಮ ಪಡಲು ಮತ್ತು ಕಷ್ಟಗಳನ್ನು ಎದುರಿಸಲು ಛಲವಿಲ್ಲದೇ ಹೋದರೆ, ನಾವು ಬರೀ ಕಲ್ಲಿನಂತೆ ಕಾಣುತ್ತೇವೆ. ನಮ್ಮನ್ನು ಆಗ ಸಮಾಜವು ತನಗೆ ಬೇಕಾದಂತೆ ಬಳಸಿಕೊಂಡು ಬಿಸಾಡುತ್ತದೆ. ಆದರೆ ಇದಕ್ಕೆ ನಾವೇ ಹೊಣೆಗಾರರಾಗಿರುತ್ತೇವೆ.ಆದ್ದರಿಂದ 'ನಾವು ವಜ್ರದಂತೆ ಅಸಾಮಾನ್ಯರು' ಎಂಬ ಅರಿವು ಬರುವುದು ಮುಖ್ಯ. ಒಮ್ಮೆ ಈ ಅರಿವು ಮೂಡಿತೆಂದರೆ, ಪರಿಶ್ರಮ ಪಡುವುದರಲ್ಲಿ ಮತ್ತು ತೊಂದರೆಗಳನ್ನು ಎದುರಿಸುವಲ್ಲಿ ಬಹು ಸಮರ್ಥರಾಗುತ್ತೇವೆ. ಏಕೆಂದರೆ ಈ ಪರಿಶ್ರಮ ಹಾಗು ಜೀವನದಲ್ಲಿ ಒದಗಿ ಬರುವ ಕಷ್ಟಗಳು ನಮಗೆ ಸಾಣೆ ಹಿಡಿಯುವ, ಪಾಲಿಶ್ ಮಾಡುವ ಉಪಕರಣಗಳಂತೆ ಕಾಣತೊಡಗುತ್ತವೆ. ಆಗ ನಮ್ಮನ್ನು ಸಮಾಜವು ಕೊಹಿನೂರ್ ವಜ್ರದಂತೆ ಆದರಿಸುತ್ತದೆ, ಆರಾಧಿಸುತ್ತದೆ.

ಈ ಸ್ಪಷ್ಟೀಕರಣದ ನಂತರ ಸುಸ್ವಾಸನಿಗೆ ತಾನೇ ಒಂದು ಅತ್ಯಮೂಲ್ಯವಾದ ವಜ್ರವಾಗಿರುವಾಗ, ಹೊರಗಡೆ ವಜ್ರಕ್ಕಾಗಿ ಹುಡುಕಾಟ ನಡೆಸುವುದು ವ್ಯರ್ಥವೆಂದು ಮನದಟ್ಟಾಯಿತು. ಆ ಶಿಷ್ಯನಿಗೆ ಮನಃಪೂರ್ವಕವಾದ ವಂದನೆಗಳನ್ನು ಸಲ್ಲಿಸಿದನು. ಮುಂದೆ ಭಾರತಕ್ಕೆ ಮರಳಿ ತನ್ನ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡನು. ಸಂತೋಷದಿಂದ ಜೀವನದ ಪರಿಶ್ರಮಗಳನ್ನು, ಕಷ್ಟಗಳನ್ನು ಎದುರಿಸಿದನು. ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತ ಸಾಗಿದನು. ಅನೇಕ ವಜ್ರದ ಗಣಿಗಳ ಮಾಲೀಕನೂ ಆದನು!.
_______________________________________________________________________

ಕಾಮೆಂಟ್‌ಗಳಿಲ್ಲ: