
ಸುಸ್ವಾಸ ಒಬ್ಬ ಆಲಸಿ ಆದರೆ ತುಂಬಾ ವಿವೇಚನೆಯುಳ್ಳ ಮನುಷ್ಯ. ಅವನು ಯಾವಾಗಲೂ ಸಕಲ ವೈಭೋಗಗಳಿಂದ ಕೂಡಿದ ಜೀವನವನ್ನು ಅನುಭವಿಸುವ ಕನಸನ್ನು ಕಾಣುತ್ತಿದ್ದನು. ಒಂದು ದಿನ ಮದ್ಯಾಹ್ನ ಸುಸ್ವಾಸನು ನಗರದ ಉದ್ಯಾನವನಕ್ಕೆ ಹೋದ. ಅಲ್ಲಿನ ಸರೋವರದ ದಡದ ಬಳಿಯಿರುವ ಬೆಂಚಿನ ಮೇಲೆ ಸುಮ್ಮನೆ ಕುಳಿತುಕೊಂಡಿದ್ದ. ತಂಪಾಗಿ ಬೀಸುತ್ತಿದ್ದ ತಂಗಾಳಿಯು ಸುಸ್ವಾಸನನ್ನು ಕೆಲವೇ ಕ್ಷಣಗಳಲ್ಲಿ ದೂರದ ಸ್ವಪ್ನ ಲೋಕಕ್ಕೆ ಕರೆದೊಯ್ದಿತು. ಆದರೆ ರಿಂಗಣಿಸತೊಡಗಿದ ಅವನ ಮೊಬೈಲು ಪುನಃ ಭೂಲೋಕಕ್ಕೆ ಎಳೆದು ತಂದಿತು. ಆ ಕರೆಯು ಕ್ರೆಡಿಟ್ ಕಾರ್ಡ್ ಕಂಪನಿಯೊಂದು ಸಾಲ ನೀಡುವ ಬಗ್ಗೆ ಎಂದು ತಿಳಿದಾಗ ಸುಸ್ವಾಸನಿಗೆ ಭಯಂಕರ ಸಿಟ್ಟು ಬಂದಿತು. ಆದರೆ ಬಹು ಆಶ್ಚರ್ಯಕರ ರೀತಿಯಲ್ಲಿ ಅಂದು ತಕ್ಷಣವೇ ಶಾಂತ ಸ್ಥಿತಿಗೆ ಮರಳಿದ. ಸುಸ್ವಾಸನಿಗೆ ಅಂದು ಮುಂಜಾನೆ ದಿನಪತ್ರಿಕೆಯಲ್ಲಿ ಓದಿದ್ದ ಸಂಶೋಧನಾತ್ಮಕ ಲೇಖನವು ನೆನಪಿಗೆ ಬಂತು. ಅದರ ಪ್ರಕಾರ ಬೆಳಗಿನ ಜಾವ ಕಂಡ ಕನಸುಗಳಿಗಿಂತ ಮಧ್ಯಾಹ್ನ ಕಂಡ ಕನಸುಗಳೇ ನಿಜವಾಗುವ ಸಂಭವ ಹೆಚ್ಚು ಎಂದಿತ್ತು. ಅವರ ಅಧ್ಯಯನದ ಪ್ರಕಾರ ಮಧ್ಯಾಹ್ನದ ಕನಸುಗಳು ಶೇಕಡ 53 ರಷ್ಟು ನಿಜವಾಗಿದ್ದರೆ, ಮುಂಜಾವಿನ ಕನಸುಗಳು ಕೇವಲ 49 ರಷ್ಟು ನಿಜವಾಗಿದ್ದವು. ಸುಸ್ವಾಸನ ಒಳ ಮನಸ್ಸು ಆಗ ತಾನೇ ಕಂಡಿದ್ದ ಕನಸನ್ನು ನಂಬುವಂತೆ ಹೇಳಿತು.
ಆ ಕನಸಲ್ಲಿ ಸರೋವರದ ಮೇಲಿನ ಮಂಜು, ಮನುಷ್ಯನ ರೂಪ ತಾಳಿ, ಸುಸ್ವಾಸನನ್ನು ಒಂದು ಪಾಳು ಬಿದ್ದ ಜಾಗಕ್ಕೆ ಕರೆದೊಯ್ದಿತು. ಅಲ್ಲಿ ಮಂಜಿನ ಮನುಷ್ಯನು ಹಳೇ ಮಾದರಿಯ ಕಪ್ಪು ಟೆಲಿಫೋನನ್ನು ತೋರಿಸಿ ಸುಸ್ವಾಸನನ್ನು ಕುರಿತು "ಇದನ್ನು ನಿನ್ನ ಮನೆಯ ಲಿವಿಂಗ್ ರೂಮಿನ ಈಶಾನ್ಯ ದಿಕ್ಕಿನಲ್ಲಿ ಇರಿಸಿದರೆ, ಸಕಲ ಸಂಪತ್ತು, ಮರ್ಯಾದೆಗಳು ನಿನ್ನ ನೆರಳಿನಂತೆ ಯಾವಾಗಲು ನಿನ್ನನ್ನು ಹಿಂಬಾಲಿಸುತ್ತವೆ" ಎಂದು ಹೇಳಿತು. ( ಮೇಲೆ ತೋರಿಸಿರುವ ಚಿತ್ರದಲ್ಲಿರುವ ಟೆಲಿಫೋನಿನ ಮಾದರಿಯು ಸುಮಾರು ಇಪ್ಪತ್ತು ವರ್ಷಗಳಿಗಿಂತಲೂ ಹಿಂದೆ ಚಾಲ್ತಿಯಲ್ಲಿತ್ತು. ಈಗ ಇದನ್ನು ಮ್ಯುಸಿಯಮ್ಮಿನಲ್ಲೂ ಕಾಣಸಿಗುವುದು ಕಷ್ಟ! )ಸುಸ್ವಾಸನಿಗೆ, ಅಂತಹ ಟೆಲಿಫೋನ್ ಸಿಗುವುದಾದರೆ, ಅದು ಟೆಲಿಪುರಮ್ಮಿನಲ್ಲಿ ಮಾತ್ರ ಸಾಧ್ಯ ಎಂದು ಥಟ್ಟನೆ ಹೊಳೆಯಿತು.
ಟೆಲಿಪುರಂ ನಗರದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶ. ಅಲ್ಲಿಗೆ ಹೊರಡಲು ಅನುವಾದ ಸುಸ್ವಾಸನು ತನ್ನ ವಾಚಿನ ಕಡೆಗೊಮ್ಮೆ ಕಣ್ಣು ಹಾಯಿಸಿದ. ಅದಾಗಲೇ ಎರಡು ಗಂಟೆಯಾಗುತ್ತಲಿತ್ತು. ಮೊದಲ ಶಿಫ್ಟಿನ ಕೆಲಸ ಮುಗಿಯುವ ಹಾಗು ಟ್ರಾಫಿಕ್ ಜ್ಯಾಮಿಗೆ ನಾಂದಿ ಹಾಡುವ ಸಮಯವದಾಗಿತ್ತು. ಇಂತಹ ಟ್ರಾಫಿಕ್ ಜ್ಯಾಮಿನಲ್ಲಿ ಸಿಕ್ಕು ಹೆಣಗಾಡುವುದು ಸುಸ್ವಾಸನಿಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಆ ನಗರದ ಟ್ರಾಫಿಕ್ ಜ್ಯಾಮುಗಳ ಯಾತನೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸುಸ್ವಾಸನು ಟ್ರಾಫಿಕ್ಕನ್ನು ತಪ್ಪಿಸಿಕೊಳ್ಳಲು ನಿಧಿಯನ್ನೂ ಕೂಡ ಕೈಬಿಡಲು ಸಿದ್ಧನಿದ್ದ! ಆದ್ದರಿಂದ ಕನಸಿನ ನಿಧಿಯನ್ನು ತರಲು ಮಾರನೇ ದಿನದ ಮುಂಜಾನೆಯೇ ಸೂಕ್ತವೆಂದು ನಿರ್ಧರಿಸಿದನು.
ಮರುದಿನ ಬೆಳಗಿನ ಜಾವ ಸುಸ್ವಾಸನು ಕನಸಿನಲ್ಲಿ ಕಂಡಿದ್ದ ಟೆಲಿಪುರಮ್ಮಿನ ಪಾಳು ಜಾಗಕ್ಕೆ ಬಂದ. ಅಲ್ಲೇ ರಸ್ತೆ ಬದಿಯ ಡಬ್ಬಿ ಅಂಗಡಿಯ ಮುಂದೆ ತನ್ನ ಕಾರನ್ನು ನಿಲ್ಲಿಸಿದ. ಆ ಪಾಳು ಜಾಗವು ಹಿಂದೊಮ್ಮೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಟೆಲೆಸಂಪರ್ಕ ಸಾಧನಗಳನ್ನು ತಯಾರಿಸುತ್ತಿದ್ದ ಕಾರ್ಖಾನೆಯಾಗಿತ್ತು. ತದನಂತರ ಕ್ಷಿಪ್ರವಾಗಿ ಬೆಳೆಯುತ್ತಿದ್ದ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲಾಗದೆ ಹಾಗು ಜಾಗತೀಕರಣದ ಸೆಳೆತಕ್ಕೆ ಸಿಲುಕಿ ಈ ಪರಿಸ್ಥಿತಿಯನ್ನು ತಲುಪಿತ್ತು. ಅಂತಹ ಪಾಳು ಬಿದ್ದ ಕಾರ್ಖಾನೆಯ ಆವರಣದಲ್ಲಿ ಕಪ್ಪು ಟೆಲಿಫೋನಿಗಾಗಿ ಸುಸ್ವಾಸನು ಹುಡುಕಾಡತೊಡಗಿದ. ಸೂರ್ಯನು ನೆತ್ತಿಯ ಮೇಲೆ ಬರುವವರೆಗೂ ಅಲ್ಲಿ ಬಿದ್ದಿದ್ದ ಲೋಹದ ಫ್ರೇಮುಗಳು, ಮುರಿದು ಹೋಗಿರುವ ಟೆಲಿ ಉಪಕರಣಗಳ ತುಣುಕುಗಳು, ತಂತಿಗಳು, ಹರಿದು ಮುಕ್ಕಾಗಿದ್ದ ಡಬ್ಬಗಳು ಕಂಡವೇ ಹೊರತು ಕನಸಿನ ಟೆಲಿಫೋನು ಮಾತ್ರ ಸಿಗಲಿಲ್ಲ. ಬಾಯಾರಿ ಬಳಲಿದ್ದ ಸುಸ್ವಾಸನು ಡಬ್ಬಿ ಅಂಗಡಿಯ ಬಳಿಬಂದು ನಿಂಬೆ ಶರಬತ್ತಿಗೆ ಆರ್ಡರ್ ಮಾಡಿದ.
ಸುಸ್ವಾಸನು ತನ್ನದೇ ಆದ ಯೋಚನೆಗಳಲ್ಲಿ ಮುಳುಗಿದ್ದರಿಂದ ಪಾಳು ಕಾರ್ಖನೆಯನ್ನೆ ದಿಟ್ಟಿಸಿ ನೋಡುತ್ತಿದ್ದ ಅವನ ಕಣ್ಣುಗಳಲ್ಲಿ ಬರೀ ಶೂನ್ಯತೆಯೇ ತುಂಬಿತ್ತು. ಅದೇ ಸಮಯದಲ್ಲೊಬ್ಬ ಗಿರಾಕಿಯು ಸಿಗರೇಟನ್ನು ಖರೀದಿಸಿ ಅದನ್ನು ಹೊತ್ತಿಸಿಕೊಳ್ಳಲು ಮೂಲೆಯ ಕಡೆಗೆ ತಿರುಗಿದನು. ಸಿಗರೇಟನ್ನು ಹೊತ್ತಿಸಿಕೊಳ್ಳಲಾಗದಿದ್ದರಿಂದ ಅ ಗಿರಾಕಿಯು ಅಂಗಡಿ ಮಾಲೀಕನನ್ನು ದೂರತೊಡಗಿದ. ಅಂಗಡಿಯ ಮಾಲೀಕನು ಅವನಿಗೆ ಬೆಂಕಿಪೊಟ್ಟಣವನ್ನು ಕೊಟ್ಟು ಮೂಲೆಯಲ್ಲಿದ್ದ ಕಪ್ಪಗಿನ ಡಬ್ಬಿಯಂತಹ ವಸ್ತುವನ್ನು ಅಲ್ಲಾಡಿಸಿ ಒಂದೆರಡು ಬಾರಿ ಕುಕ್ಕಿದ. ಅದು ಪ್ರಯೋಜನವಾಗದಿದ್ದಾಗ "ಅಯ್ಯೋ, ಇದೊಂದು ವಾರದಿಂದ ಕೆಟ್ಟು ಹೋಗಿ ನೂರಾರು ಗಿರಾಕಿಗಳಿಗೆ ಉತ್ತರ ಹೇಳಿ ಹೇಳಿ ಸಾಕಾಗಿಹೋಗಿದೆ. ಇದನ್ನು ಬಿಸಾಡುವುದೇ ಉತ್ತಮ " ಎಂದು ತನ್ನಲ್ಲೇ ಗೊಣಗಿಕೊಂಡ. ಈ ಗಲಾಟೆಯು ಸುಸ್ವಾಸನ ಯೋಚನಾ ಲಹರಿಯನ್ನು ತುಂಡರಿಸಿ, ಅಂಗಡಿಯ ಕಡೆ ನೋಡುವಂತೆ ಮಾಡಿತು.ಸುಸ್ವಾಸನಿಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಅವನ ಮಧ್ಯಾಹ್ನದ ಕನಸಿನಲ್ಲಿ ಮಂಜಿನ ಮನುಷ್ಯ ತೋರಿಸಿದ್ದ ಕಪ್ಪು ಟೆಲಿಫೋನ್ ಅಂಗಡಿಯ ಮೂಲೆಯಲ್ಲಿ ಕುಳಿತಿತ್ತು. ಡಬ್ಬಿ ಅಂಗಡಿಯವನು ಆ ಟೆಲಿಫೋನಿಗೆ ವಿದ್ಯುತ್ ನಿರೋಧಕದ ಒಂದು ಸಣ್ಣ ಸುರುಳಿಯನ್ನು ಸೇರಿಸಿ ಸಿಗರೇಟು ಹಚ್ಚಿಕೊಳ್ಳುವ ಅಗ್ಗಿಷ್ಟಿಕೆಯಾಗಿ ಮಾರ್ಪಡಿಸಿಕೊಂಡಿದ್ದನು! ಅದೇ ವೇಳೆಗೆ ಅಂಗಡಿಯ ಮಾಲೀಕನು ತನ್ನ ಸಹಾಯಕನನ್ನು ಕರೆದು "ಏಯ್, ಚೋಟು ಬೇಗನೆ ಅವರಿಗೆ ನಿಂಬೆ ಶರಬತ್ತು ಕೊಟ್ಟು, ಈ ದರಿದ್ರ ಪೆಟ್ಟಿಗೆಯನ್ನು ಎದುರಿನ ಪಾಳು ಜಾಗಕ್ಕೆಸೆದು ಬಾ" ಎಂದು ಹೇಳಿದನು. ಅಂಗಡಿಯವನಿಗೆ ಆ ಪೆಟ್ಟಿಗೆಯೊಡನೆ ಹಗಲೆಲ್ಲಾ ಹೆಣಗಾಡುವುದಕ್ಕಿಂತ, ಗಿರಾಕಿಗಳಿಗೆ ಬೆಂಕಿಪೊಟ್ಟಣ ಕೊಡುವುದೇ ಲೇಸೆನಿಸಿತು.
ಒಂದೇ ಕ್ಷಣದಲ್ಲಿ ಶರಬತ್ತನ್ನು ಗುಟುಕರಿಸಿದ ಸುಸ್ವಾಸನು ಅಂಗಡಿಯವನಿಗೆ ಲಗುಬಗೆಯಿಂದ ಹಣವನ್ನು ನೀಡಿ, ಚೋಟುವನ್ನು ಹಿಂಬಾಲಿಸಿದನು. ಪಾಳು ಜಾಗದ ಕಾಂಪೌಂಡಿನ ಬದಿಯಲ್ಲಿ ನಿಂತ ಸುಸ್ವಾಸನು, ಚೋಟು ಅಲ್ಲಿಂದ ಅಂಗಡಿಗೆ ಹಿಂತಿರುಗುವುದನ್ನೇ ಕಾತುರತೆಯಿಂದ ಕಾಯುತ್ತಿದ್ದ. ಚೋಟು ಅಂಗಡಿಗೆ ತಲುಪಿದ್ದು ಖಾತ್ರಿಯದೊಡನೆ, ಒಂದೇ ಹಾರಿಗೆ ಟೆಲಿಫೋನ್ ಬಿದ್ದ ಜಾಗವನ್ನು ತಲುಪಿ ಅದನ್ನು ತೆಗೆದುಕೊಂಡು ಲಗುಬಗೆಯಿಂದ ಕಾರಿನ ಬಳಿ ಬಂದ. ಮರುಕ್ಷಣದಲ್ಲಿಯೇ ಸುಸ್ವಾಸನ ಕಾರು ಮುಖ್ಯ ರಸ್ತೆಯಲ್ಲಿ ಓಡುತ್ತಿತ್ತು. ಕಪ್ಪು ಟೆಲಿಫೋನ್ ಮುಂದಿನ ಸೀಟಿನ ಮೇಲೆ ಭದ್ರವಾಗಿ ಕುಳಿತಿತ್ತು.
ಸುಸ್ವಾಸನ ಸಂತೋಷಕ್ಕೆ ಪಾರವೇ ಇರಲಿಲ್ಲ. ಟೆಲಿಫೋನ್ ಸಿಕ್ಕಿದ್ದು ಒಂದು ಕಾರಣವಾದರೆ, ಆ ಸಮಯದಲ್ಲಿ ವಾಹನಗಳ ದಟ್ಟಣೆ ಕಡಿಮೆಯಿದ್ದದ್ದು, ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು. ಹೀಗಾಗಿ ಸುಸ್ವಾಸನು ರೇಡಿಯೊ ಬಟನ್ ಅದುಮಿ ಎಫ್ ಎಮ್ ಸ್ಟೇಷನ್ನಿನ ಸಂಗೀತವನ್ನು ಸವಿಯುತ್ತಾ ಸರಾಗವಾಗಿ ತನ್ನ ಕಾರನ್ನು ಮನೆ ಕಡೆ ಮುನ್ನಡೆಸಿದ.
ಟ್ರಿಣ್ ಟ್ರಿಣ್ ಟ್ರಿಣ್ ಟ್ರಿಣ್ ಎಂಬ ಶಬ್ದ ಕೇಳಿದ ಸುಸ್ವಾಸನು, "ಈ ರಿಂಗ್ ಟೋನನ್ನು ಯಾರ ಹೆಸರಿಗೂ ಸೆಟ್ ಮಾಡಿಲ್ಲವಲ್ಲ" ಎಂದುಕೊಳ್ಳುತ್ತಲೇ ತನ್ನ ಮೊಬೈಲಿರುವ ಜೇಬಿಗೆ ಕೈ ಹಾಕಿದ. ಮೊಬೈಲಿನಲ್ಲಿ ಯಾವ ಕರೆಯೂ ಇರಲಿಲ್ಲ, ಆದರೆ ಟ್ರಿಣ್ ಟ್ರಿಣ್ ಶಬ್ದವು ಜೋರಾಗತೊಡಗಿತ್ತು. ಪಕ್ಕಕ್ಕೆ ತಿರುಗಿದ ಸುಸ್ವಾಸನಿಗೆ ಆ ಶಬ್ದವು ಕಪ್ಪು ಟೆಲಿಫೋನಿನಿಂದ ಎಂದು ತಿಳಿದು ಆಶ್ಚರ್ಯವಾಯಿತು. ಆದರೂ ಅದನ್ನು ಪರೀಕ್ಷಿಸಲೆಂದು ರಿಸೀವರನ್ನು ಎತ್ತಿಕೊಂಡನು. ಆಗ ಗಡಸಾದ ಧ್ವನಿಯೊಂದು "ಸುಸ್ವಾಸ ನನ್ನನ್ನು ಹುಡುಕಿ ತಂದುದಕ್ಕಾಗಿ ಅಭಿನಂದನೆಗಳು. ನಾನು ಮುಂದುವರೆಸುವ ಮುನ್ನ ಕಾರನ್ನು ರಸ್ತೆ ಬದಿಗೆ ನಿಲ್ಲಿಸು. ಇಲ್ಲವಾದರೆ ಕಾರು ಚಲಾಯಿಸುವಾಗ ಫೋನಿನಲ್ಲಿ ಮಾತಾಡುತ್ತಿರುವೆಯೆಂದು ಪೊಲೀಸರು ದಂಡ ಹಾಕುವರು" ಎಂದು ಹೇಳಿತು. ಕಪ್ಪು ಟೆಲಿಫೋನಿನ ಮಾತು ಆಲಿಸಲು ಸುಸ್ವಾಸನು ಕಾರನ್ನು ಬದಿಗೆ ನಿಲ್ಲಿಸಿ, ರೇಡಿಯೋವನ್ನು ಕೂಡ ಆಫ್ ಮಾಡಿದ.
ಟೆಲಿಫೋನಿನ ಗಡಸು ಧ್ವನಿ ತನ್ನ ಮಾತನ್ನು ಮುಂದುವರೆಸುತ್ತಾ, "ಈಗ ನಿನ್ನ ಆಶಯದಂತೆ ಸಕಲ ಸಂಪತ್ತು, ಮರ್ಯಾದೆಗಳು ನಿನಗೆ ದೊರೆಯುತ್ತವೆ. ಆದರೆ ಇದೆಲ್ಲವನ್ನು ಪಡೆಯಲು ಒಂದು ಕಟ್ಟಳೆಯನ್ನು ಪಾಲಿಸಬೇಕು" ಎನ್ನುತ್ತಿರುವಾಗ ಸುಸ್ವಾಸನು "ಏನದು ಕಟ್ಟಳೆ?" ಎಂದು ಕೇಳಿದನು. ಗಡಸು ಧ್ವನಿಯು ಮುಂದುವರೆಸುತ್ತಾ "ನಿನ್ನ ಮೊಬೈಲಿನಿಂದ 464 ಕ್ಕೆ 'ನೇಚರ್' ಎಂದು ಎಸ್ ಎಮ್ ಎಸ್ ಕಳುಹಿಸಬೇಕು ..." ಎಂದು ಹೇಳುತ್ತಿರುವಾಗಲೇ ಸುಸ್ವಾಸನು ಪುನಃ ಮಧ್ಯದಲ್ಲೇ "464 ಕ್ಕೆ ಕಳುಹಿಸಬೇಕಾ?" ಎಂದುಚ್ಚರಿಸಿದನು. ಆಗ ಫೋನಿನ ಧ್ವನಿಯು ಇನ್ನಷ್ಟು ಗಡಸಾಗಿ "ನನ್ನ ಮಾತುಗಳನ್ನು ಪೂರ್ತಿಯಾಗಿ ಕೇಳಿಸಿಕೊಳ್ಳದಿದ್ದರೆ ನಾನೀಗಲೇ ಪಾಳು ಜಾಗಕ್ಕೆ ವಾಪಾಸ್ಸಗುತ್ತೇನೆ. ಆದರೆ ನಿನಗೆ ಅಲ್ಲಿ ಪುನಃ ಕಾಣಿಸಿಕೊಳ್ಳಬೇಕಾದರೆ ಮರುದಿನದ ಸೂರ್ಯೋದಯದವರೆಗೆ ಕಾಯಬೇಕಾಗುತ್ತದೆ." ಎಂದು ಹೇಳಿ ತನ್ನ ಮಾತನ್ನು ಮುಂದುವರೆಸಿತು, "ಹೌದು, 464 ಕ್ಕೆ ಎಸ್ ಎಮ್ ಎಸ್ ಕಳುಹಿಸಬೇಕು. ಆಗ ನೋಂದಣಿಯನ್ನು ಖಾತ್ರಿ ಪಡಿಸಲು ನಿನಗೊಂದು ಮೆಸೇಜ್ ಬರುತ್ತದೆ. ಅದರಲ್ಲಿ ನಾಲ್ಕು ಆಯ್ಕೆಗಳಿರುತ್ತವೆ. 1,2,3 ಅಥವಾ ಸಂಖ್ಯೆ 4 ರ ಬಟನ್ ಒತ್ತುವ ಮೂಲಕ ನಿನ್ನ ಆಯ್ಕೆಯನ್ನು ಸೂಚಿಸಬೇಕು. ಆದರೆ ಕಟ್ಟಳೆ ಪ್ರಕಾರ ನೀನು ಕೇವಲ ಸಂಖ್ಯೆ 4 ನ್ನೇ ಒತ್ತಬೇಕು ಮತ್ತು ಮನೆ ತಲಪುವವರೆಗೂ ಮಾತನಾಡಕೂಡದು. ಈ ಕಟ್ಟಳೆಯನ್ನು ಮುರಿದರೆ , ತಕ್ಷಣವೇ ನಾನು ಮಾಯವಾಗುತ್ತೇನೆ. ಮತ್ತು ಆಗಲೇ ಹೇಳಿದಂತೆ ನಾನು ಪುನಃ ಕಾಣಿಸಿಕೊಳ್ಳುವುದು ಮಾರನೇ ದಿನದ ಸೂರ್ಯೋದಯದ ನಂತರವೇ."
ಇದೆಲ್ಲವನ್ನು ಕೇಳಿಸಿಕೊಂಡ ಸುಸ್ವಾಸನು ಕಪ್ಪು ಟೆಲಿಫೋನನ್ನು ಕಳೆದುಕೊಳ್ಳಲು ಇಚ್ಚಿಸದೆ, 464 ಕ್ಕೆ 'ನೇಚರ್' ಎಂದು ಕೂಡಲೇ ಎಸ್ ಎಮ್ ಎಸ್ ಮಾಡಿದ. ಮರುಕ್ಷಣವೇ ಅವನ ಮೊಬೈಲಿನ ಬೀಪ್ ಬೀಪ್ ಮೆಸೇಜ್ ಬಂದಿರುವುದನ್ನು ಸೂಚಿಸಿತು.
"ನಮ್ಮಲ್ಲಿ ನೋಂದಾಯಿಸಿಕೊಂಡದ್ದಕ್ಕಾಗಿ ವಂದನೆಗಳು. ಡೇಟಿಂಗ್ ಸೇವೆಗೆ ಸಂಖ್ಯೆ 1 ನ್ನು, ಭವಿಷ್ಯವನ್ನು ಕೇಳಲು ಸಂಖ್ಯೆ 2 ನ್ನು , ಆರೋಗ್ಯದ ಸಲಹೆಗಳಿಗಾಗಿ ಸಂಖ್ಯೆ 3 ನ್ನು ಮತ್ತು ಕಥೆ ಕೇಳಲು ಸಂಖ್ಯೆ 4 ನ್ನು ಒತ್ತಿರಿ" ಎಂದು ಬಂದಿದ್ದ ಮೆಸೇಜನ್ನು ಓದಿದ ಸುಸ್ವಾಸನು ಯಾವುದೇ ವಿಚಾರಕ್ಕೂ ಆಸ್ಪದ ಕೊಡದೆ ಸಂಖ್ಯೆ 4 ನ್ನು ಒತ್ತಿದ. ಆಗ ಗಡಸಾದ ಧ್ವನಿಯು "ಸುಸ್ವಾಸ ನೀನು ಒಳ್ಳೆಯ ಕೆಲಸವನ್ನೇ ಮಾಡಿರುವೆ, ಈಗ ನಿನ್ನ ಬ್ಲೂ ಟೂತ್ ಇಯರ್ ಫೋನನ್ನು ಕಿವಿಗೆ ಸಿಗಿಸಿಕೊಂಡು ಕಾರನ್ನು ಮನೆ ಕಡೆಗೆ ಚಲಾಯಿಸು. ಕೊನೆಯದಾಗಿ ಮತ್ತೊಮ್ಮೆ ನಿನಗೆ ಎಚ್ಚರಿಕೆ ಕೊಡುತ್ತೇನೆ. ನನ್ನನ್ನು ಲಿವಿಂಗ್ ರೂಮಿನಲ್ಲಿ ಸ್ಥಾಪಿಸುವವರೆಗೂ ಮಾತನಾಡಕೂಡದು" ಎಂದು ಹೇಳಿ ಸುಮ್ಮನಾದ ಕೊಡಲೇ ಸುಸ್ವಾಸನ ಇಯರ್ ಫೋನಿನಲ್ಲಿ ಕಥೆಯೊಂದು ಪ್ರಾರಂಭವಾಯಿತು.
ಕಳೆದೊಂದು ವರ್ಷದಿಂದ ಬಿಪಿಒ ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಪ್ರತಿ ನಿತ್ಯದ ಕೆಲಸದ ಒತ್ತಡದಿಂದಾಗಿ ಬಹಳ ಬೇಸರಗೊಂಡಿದ್ದ. ಹೀಗಾಗಿ ವಾರಾಂತ್ಯದ ಜೊತೆ ಬರಲಿರುವ ಹಬ್ಬಗಳ ರಜೆಯನ್ನೂ ಸೇರಿಸಿ ಮೈಮನಗಳ ಪುನಃಶ್ಚೇತನಕ್ಕೆ ಯಾವುದಾದರೂ ವಿಶ್ರಾಂತಿ ಧಾಮಕ್ಕೆ ಹೋಗಬೇಕೆಂದು ನಿರ್ಧರಿಸಿದ. ಇಂತಹ ಐಟಿ ಬಿಟಿ ಉದ್ಯೋಗಿಗಳಿಂದಾಗಿ ವಿಶ್ರಾಂತಿ ಧಾಮಗಳು ಯೋಗ, ಧ್ಯಾನ ಶಿಬಿರಗಳು, ಪ್ರಕೃತಿ ಚಿಕಿತ್ಸೆ, ಅರೋಮ ಥೆರಪಿ, ಆಯುರ್ವೇದ ಚಿಕಿತ್ಸೆಗಳ ಪ್ಯಾಕೆಜಗಳನ್ನು ನೀಡುತ್ತಾ ದೊಡ್ಡ ಉದ್ದಿಮೆಗಳಾಗಿ ಬೆಳೆದು ಬಿಟ್ಟಿವೆ. ಒಂದು ಸೂಕ್ತ ತಾಣವನ್ನು ಹುಡುಕಲು ಆ ಬಿಪಿಒ ಉದ್ಯೋಗಿಯು ಅಂತರ್ಜಾಲದ ಮೊರೆ ಹೊಕ್ಕ. ಗೂಗಲ್ ಸರ್ಚನಲ್ಲಿ 'ವಿಶ್ರಾಂತಿ ಧಾಮ' ಎಂದು ಟೈಪ್ ಮಾಡಿ ಮೌಸನ್ನು ಕ್ಲಿಕ್ಕಿಸಿದೊಡನೆ ಕಂಪ್ಯೂಟರ್ ಪರದೆಯ ಮೇಲೆ ಮೂಡಿದ ನೂರಾರು ಲಿಂಕುಗಳ ಪಟ್ಟಿಯನ್ನು ಕಂಡು ಗಲಿಬಿಲಿಗೊಳಗಾದ. ಅಷ್ಟು ಉದ್ದನೆಯ ಪಟ್ಟಿಯಿಂದ ತನಗೆ ಬೇಕಾದ ಮಾಹಿತಿಯನ್ನು ಹುಡುಕಲು ಸ್ಕ್ರೋಲ್ ಮಾಡುತ್ತ ಪಟ್ಟಿ ಮಾಡಲ್ಪಟ್ಟ ಲಿಂಕುಗಳನ್ನು ಪರಿಶೀಲಿಸತೊಡಗಿದ.
ಹೀಗೇ ಸ್ಕ್ರೋಲ್ ಮಾಡುತ್ತಾ ಹೋಗುವಾಗ ಆಕಸ್ಮಿಕವಾಗಿ ಲಿಂಕೊಂದರ ಮೇಲೆ ಕ್ಲಿಕ್ ಮಾಡಿದನು. ಅದು 'ಯು ಟ್ಯೂಬ್ ' ವೆಬ್ ಸೈಟಿನಲ್ಲಿ ಹಾಕಿದ್ದ ವಿಡಿಯೋ ತುಣುಕಾಗಿತ್ತು. ಅದರ ಶೀರ್ಷಿಕೆ "ಬಾಳೆ ಹಣ್ಣು ತಿನ್ನುವ ಸ್ಪರ್ಧೆ - ಧ್ಯಾನ ಶಿಬಿರದ ಕೊನೆಯ ದಿನ" ಎಂದಿತ್ತು. ಕೆಲವೇ ಗಳಿಗೆಯಲ್ಲಿ ವಿಡಿಯೋ ಡೌನ ಲೋಡ್ ಮಾಡಲ್ಪಟ್ಟು, ಚಿತ್ರಗಳು ಮೂಡತೊಡಗಿತು.
ಅದೊಂದು ದೊಡ್ಡ ಸಭಾಂಗಣ. ಸುಮಾರು ನಾನ್ನೂರು ಜನರು ಗುರುಗಳ ಬರುವಿಗೆ ಕಾಯುತ್ತಿದ್ದರು. ಒಂದು ವಾರದ ಧ್ಯಾನ ಶಿಬಿರದ ಮುಕ್ತಾಯ ಸಮಾರಂಭದ ಸಂದರ್ಭದಲ್ಲಿ ಗುರುಗಳು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡತೊಡಗಿದರು. "ನಲ್ಮೆಯ ಗೆಳೆಯರೇ, ಈಗ ಪರೀಕ್ಷೆಯ ಸಮಯ! ನೀವೆಲ್ಲರೂ ಈ ಒಂದು ವಾರದಿಂದ ಅನೇಕ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ್ದೀರಿ. ಅವುಗಳಿಂದ ನಿಮ್ಮನ್ನು ನೀವು ಎಷ್ಟು ಅರಿತಿದ್ದೀರಿ, ಎಷ್ಟು ಸಹಾಯಕವಾಗಿದೆ ಎಂದು ತಿಳಿಯುವುದಕ್ಕೆ ಈ ಪರೀಕ್ಷೆ. ಆದರೆ ಈ ಸಲದ ಪರೀಕ್ಷೆ ಹೊಸದಾಗಿದೆ. ಆದ್ದರಿಂದ ನೀವೇನಾದರೂ ಈ ಮುಂಚೆ ಭಾಗವಹಿಸಿದ್ದ ಅಭ್ಯರ್ಥಿಗಳಿಂದ ತಿಳಿದು ಈ ಪರೀಕ್ಷೆಗೆ ತಯಾರಾಗಿದ್ದಾರೆ ಅದು ವ್ಯರ್ಥವೆಂದೇ ತಿಳಿಯಿರಿ. ಇನ್ನು ಮುಂದೆ ಪ್ರತಿ ಶಿಬಿರದ ಕೊನೆಗೆ ಹೊಸ ಪರೀಕ್ಷೆ ಸಿದ್ಧವಾಗಿರುತ್ತದೆ. ಮುಂಬರುವ ಶಿಬಿರಾರ್ಥಿಗಳಿಗೆ ಇದನ್ನು ನೀವು ತಿಳಿಸುವಿರೆಂದು ನಂಬಿದ್ದೇನೆ.
ಈಗ ನೀವೆಲ್ಲರೂ ನಿಮಗೆ ಅನುಕೂಲವಾದ ಭಂಗಿಯಲ್ಲಿ ಆರಾಮವಾಗಿ ಕುಳಿತುಕೊಂಡು ಕಣ್ಣುಗಳನ್ನು ಮುಚ್ಚಿರಿ. ನಿಮ್ಮ ಹಸ್ತಗಳು ತೆರೆದಿರಲಿ. ನಿಮ್ಮ ಗಮನ ಉಸಿರಾಟದ ಕಡೆಗಿರಲಿ. ಎಲ್ಲಾ ತರಹದ ಯೋಚನೆಗಳನ್ನು ಸ್ವಾಗತಿಸಿ ಮತ್ತು ಹಾಗೇ ಹೋಗಲು ಬಿಡಿ."
ಕೆಲವು ಸಮಯ ಕಳೆದ ನಂತರ ಗುರುಗಳ ಸಂಜ್ಞೆಯ ಮೇರೆಗೆ ಅಲ್ಲಿದ್ದ ಸ್ವಯಂಸೇವಕರು ಪ್ರತಿಯೊಬ್ಬ ಶಿಬಿರಾರ್ಥಿಗಳ ಕೈಯಲ್ಲಿ ಒಂದೊಂದು ಬಾಳೆ ಹಣ್ಣನ್ನು ಇಡುತ್ತಾ ಸಾಗಿದರು. ಆಗ ಗುರುಗಳು "ನಿಮ್ಮ ಕಣ್ಣುಗಳು ಮುಚ್ಚೇ ಇರಲಿ. ನಿಮ್ಮ ಸುತ್ತ ಮುತ್ತ ನಡೆಯುತ್ತಿರುವ ವಿದ್ಯಮಾನಗಳಿಂದ ವಿಚಲಿತರಾಗಬೇಡಿ. ನಿಶ್ಚಲತೆಯಿಂದ ಕುಳಿತು ನಿಮ್ಮ ಗಮನವನ್ನು ಉಸಿರಾಟದ ಮೇಲೆ ಇರಿಸಿ ಧ್ಯಾನವನ್ನು ಮುಂದುವರೆಸಿ" ಎಂದು ಹೇಳಿದರು.
ಹಾಗೇ ಸ್ವಲ್ಪ ಸಮಯ ಕಳೆದ ನಂತರ ಗುರುಗಳು "ನಿಧಾನವಾಗಿ ಎಲ್ಲರೂ ಕಣ್ಣುಗಳನ್ನು ಬಿಡಿ. ನಿಮ್ಮ ಕೈಯಲ್ಲಿರುವ ಬಾಳೆ ಹಣ್ಣನ್ನು ಒಮ್ಮೆ ಗಮನಿಸಿ. ಈಗ ಬಾಳೆ ಹಣ್ಣು ತಿನ್ನುವ ಸ್ಪರ್ಧೆ! ಆದರೆ ಆ ಬಾಳೆ ಹಣ್ಣನ್ನು ಎಲ್ಲರೂ ನೋಡುವಂತಹ ಜಾಗದಲ್ಲಿ ತಿನ್ನಬೇಕು. ಇದಕ್ಕೆ ನಿಮಗಿರುವ ಕಾಲಾವಕಾಶ ಕೇವಲ ಹತ್ತು ನಿಮಿಷಗಳು ಮಾತ್ರ." ಎಂದರು.
ಎಲ್ಲಾ ಶಿಬಿರಾರ್ಥಿಗಳು ಬಾಳೆ ಹಣ್ಣಿನ ಸಿಪ್ಪೆ ಸುಲಿದು ಇತರರ ಗಮನ ಸೆಳೆಯುತ್ತಾ ತಿನ್ನತೊಡಗಿದರು. ಅಷ್ಟೊಂದು ಜನರ ಗಮನ ಸೆಳೆಯುವುದು ಕಷ್ಟದ ಕೆಲಸವೇ ಸರಿ. ಹೀಗಾಗಿ ಅಲ್ಲಿ ನೂಕು ನುಗ್ಗಲಾಟದ ಪರಿಸ್ಥಿತಿಯುಂಟಾಗಿತ್ತು. ಆಗ ಒಬ್ಬ ಶಿಬಿರಾರ್ಥಿಯು ಗುರುಗಳು ಕುಳಿತಿದ್ದ ವೇದಿಕೆಯ ಕಡೆ ಜೋರಾಗಿ ಓಡಿದನು. ಈ ಘಟನೆಯಿಂದ ಎಲ್ಲಾ ಶಿಬಿರಾರ್ಥಿಗಳ ಗಮನ ಗುರುಗಳ ಕಡೆ ತಿರುಗಿತು. ಆಗ ಗುರುಗಳ ಕಡೆ ಓಡಿದ್ದ ಶಿಬಿರಾರ್ಥಿಯು ಥಟ್ಟನೆ ಗುರುಗಳ ಹಿಂದೆ ಅವಿತುಕೊಂಡನು. ಒಂದೆರಡು ಕ್ಷಣದ ನಂತರ, ಬಾಳೆ ಹಣ್ಣಿನ ಸಿಪ್ಪೆಯನ್ನು ಎಲ್ಲರಿಗೂ ಕಾಣುವಂತೆ ತಿರುಗಿಸುತ್ತಾ ತನ್ನ ಸ್ಥಳಕ್ಕೆ ಬಂದು ಕುಳಿತ. ಇದೇನು ಹುಚ್ಚಾಟವೆಂದುಕೊಂಡ ಉಳಿದ ಶಿಬಿರಾರ್ಥಿಗಳು ಅಲ್ಲಿ ನೆರೆದಿದ್ದವರ ಗಮನ ಸೆಳೆಯುತ್ತಾ ಬಾಳೆ ಹಣ್ಣು ತಿನ್ನುವ ತಾಲೀಮನ್ನು ಮುಂದುವರೆಸಿದರು. ಹತ್ತು ನಿಮಿಷಗಳ ಕಾಲಾವಧಿ ಮುಗಿದ ನಂತರ ಗುರುಗಳು ಎಲ್ಲರಿಗೂ ತಮ್ಮ ತಮ್ಮ ಸ್ಥಾನಗಳಲ್ಲಿ ಶಾಂತವಾಗಿ ಕುಳಿತುಕೊಂಡು, ಒಬ್ಬಬ್ಬರೇ ತಮ್ಮ ಅನುಭವಗಳನ್ನು ಎಲ್ಲರೊಡನೆ ಮುಕ್ತವಾಗಿ ಹಂಚಿಕೊಳ್ಳುವಂತೆ ಹೇಳಿದರು.
ಮೊದಲನೆಯದಾಗಿ ವೇದಿಕೆಯನ್ನೇರಿ ಬಂದ ಶಿಬಿರಾರ್ಥಿಯು "ಗುರುಗಳೇ, ಬಾಳೆ ಹಣ್ಣು ತಿನ್ನುವ ಸ್ಪರ್ಧೆಯು ಮೇಲ್ನೋಟಕ್ಕೆ ಅತ್ಯಂತ ಸರಳವೆನಿಸಿದರೂ, ಇಪ್ಪತೈದು ಜನರು ಕೂಡ ನಾನು ಹಣ್ಣನ್ನು ತಿನ್ನುವಾಗ ನೋಡುವಂತೆ ಮಾಡಲು ಸಾಧ್ಯವಾಗದೆ ಹೋಯಿತು" ಎಂದನು.
ಎರಡನೆಯದಾಗಿ ಅನುಭವ ಹಂಚಿಕೊಳ್ಳಲು ಬಂದ ಅಭ್ಯರ್ಥಿಯು "ಗುರುಗಳೇ, ನನ್ನ ಎಣಿಕೆಯ ಪ್ರಕಾರ ಕನಿಷ್ಟ ಪಕ್ಷ ನೂರು ಜನರಾದರೂ ನಾನು ಹಣ್ಣು ತಿನ್ನುತ್ತಿರುವುದನ್ನು ನೋಡಿದ್ದಾರೆ. ಆದ್ದರಿಂದ ಈ ಸ್ಪರ್ಧೆಯಲ್ಲಿ ಗೆಲವು ನನ್ನದೇ" ಎಂದನು.
ಈ ವೇಳೆಗೆ ವೇದಿಕೆಯ ಬಳಿ ಅನೇಕರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಸೇರತೊಡಗಿದರು. ಅವರನ್ನೆಲ್ಲಾ ಸ್ವಯಂಸೇವಕರು ನಿಯಂತ್ರಿಸುತ್ತಾ ಸಾಲಾಗಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಆಗ ಗುರುಗಳು "ತುಂಬಾ ಹೊತ್ತಾಗುತ್ತಿದೆಯಾದ್ದರಿಂದ ಇನ್ನು ಮೂರು ಜನರಿಗೆ ಮಾತ್ರ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಸಮಯಾವಕಾಶವಿದೆ" ಎಂದರು.
ನಂತರ ಬಂದ ಅಭ್ಯರ್ಥಿಯು "ಗುರುಗಳೇ, ಒಬ್ಬ ಅಭ್ಯರ್ಥಿಯು ನಿಮ್ಮ ಪ್ರಶ್ನೆಯನ್ನು ತಪ್ಪಾಗಿ ಅರ್ಥೈಸಿಕೊಂಡು ನಿಮ್ಮ ಹಿಂದೆ ಅವಿತುಕೊಂಡು ಯಾರಿಗೂ ಕಾಣದಂತೆ ಹಣ್ಣನ್ನು ತಿಂದು ಬಿಟ್ಟ." ಎಂದು ಹೇಳಿದ.
ಛಂಗನೇ ನೆಗೆಯುತ್ತಾ ಬಂದ ನಾಲ್ಕನೇ ಅಭ್ಯರ್ಥಿಯು "ಗುರುಗಳೇ, ನಾನು ಹಣ್ಣು ತಿನ್ನುವುದು ನೋಡಲೆಂದು ಬೇರೆಯವರ ಗಮನ ಸೆಳೆಯುವುದಕ್ಕೆ ಬಹಳೇ ಕಷ್ಟವಾಯಿತು. ಪ್ರತಿಯೊಬ್ಬರ ಲಕ್ಷ್ಯವು ಇನ್ನೊಬ್ಬರ ಗಮನ ಸೆಳೆದು ಹಣ್ಣು ತಿನ್ನುವುದನ್ನು ನೋಡುವವರನ್ನು ಎಣಿಸುವುದರ ಕಡೆಗಿತ್ತೇ ವಿನಃ ನಾನು ತಿನ್ನುವ ಕಡೆ ಗಮನವೇ ಕೊಡಲಿಲ್ಲ!" ಎಂದಾಗ ಸಭಿಕರೆಲ್ಲ ಘೊಳ್ಳನೆ ನಕ್ಕರು.
"ಎಂಭತ್ತು, ಎಂಭತ್ತೊಂದು ಎಂದು ನಾನು ಹಣ್ಣು ತಿನ್ನುತ್ತಿರುವುದನ್ನು, ನೋಡುತ್ತಿದ್ದವರನ್ನು ಎಣಿಸುತ್ತಿರುವಾಗಲೇ, ಬಾಳೆ ಹಣ್ಣನ್ನು ಪೂರ್ತಿಯಾಗಿ ಮುಗಿಸಿರುವುದು ನನ್ನ ಗಮನಕ್ಕೆ ಬಂತು. ಆದ್ದರಿಂದ ಮುಂದುವರೆಸಲು ಸಾಧ್ಯವಾಗಲಿಲ್ಲ. ಇನ್ನೊಂದು ಹಣ್ಣನ್ನು ಕೊಡುವ ಏರ್ಪಾಡು ಮಾಡಿದ್ದರೆ ನಾನೇ ಈ ಸ್ಪರ್ಧೆಯಲ್ಲಿ ಗೆಲ್ಲುತ್ತಿದ್ದೆ ಗುರುಗಳೇ" ಎಂದಾಗ ಸಭಿಕರೆಲ್ಲಾ ಪುನಃ ನಗೆಗಡಲಲ್ಲಿ ಮುಳುಗಿದರು.
ಗುರುಗಳು ತಮ್ಮ ಆಸನದಿಂದ ಎದ್ದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಮೈಕಿನ ಬಳಿ ಬಂದರು. ಇದೇ ಸಮಯಕ್ಕೆ ಸರಿಯಾಗಿ ತಾಂತ್ರಿಕ ದೋಷದಿಂದಾಗಿ ಕಂಪ್ಯೂಟರಿನಿಂದ ಬರುತ್ತಿದ್ದ ಧ್ವನಿಯು ಸ್ಥಗಿತಗೊಂಡಿತು. ಕೇವಲ ದೃಶ್ಯ ಮಾತ್ರ ಸ್ಪಷ್ಟವಾಗಿ ಓಡುತ್ತಿತ್ತು. ಆದರೂ ಪೂರ್ಣ ತನ್ಮಯತೆಯಿಂದ ನೋಡುತ್ತಿದ್ದ ಬಿಪಿಒ ಉದ್ಯೋಗಿಯು ಧ್ವನಿರಹಿತ ವಿಡಿಯೋ ತುಣುಕನ್ನು ನೋಡುವುದನ್ನು ಮುಂದುವರೆಸಿದ.
ಆ ದೃಶ್ಯಾವಳಿಯಲ್ಲಿ ಗುರುಗಳು ಒಬ್ಬ ಅಭ್ಯರ್ಥಿಯನ್ನು ವೇದಿಕೆಯ ಮೇಲೆ ಕರೆದು ಕೆಲವು ಮಾತುಗಳಾಡಿದ ನಂತರ ಸಭಿಕರಲ್ಲಿ ಸ್ವಲ್ಪ ಜನ ಕೈಯೆತ್ತುವುದು, ಮತ್ತು ಇನ್ನೂ ನಾಲ್ಕು ಅಭ್ಯರ್ಥಿಗಳ ಜೊತೆ ನಿಂತಾಗಲು ಕೇವಲ ಕೆಲವೇ ಸಭಿಕರು ಕೈಯೆತ್ತಿದ್ದು ಕಂಡುಬಂತು. ನಂತರದ ದೃಶ್ಯದಲ್ಲಿ ಗುರುಗಳು ತಮ್ಮ ಹಿಂದೆ ಅವಿತು ಬಾಳೆ ಹಣ್ಣು ತಿಂದಿದ್ದವನ ಜೊತೆ ನಿಂತಿದ್ದರು. ಆಗ ಹೆಚ್ಚು ಕಮ್ಮಿ ಎಲ್ಲಾ ಸಭಿಕರು ಕೈ ಎತ್ತಿದರು. ನಂತರ ಗುರುಗಳು ತಮ್ಮ ಆಸನದ ಹಿಂದಿನಿಂದ ಬಾಳೆ ಹಣ್ಣಿನ ತಿರುಳನ್ನು ತೋರಿಸಿ ಕೆಲ ಮಾತುಗಳನ್ನಾಡುತ್ತಿದ್ದಂತೆ ಸಭಿಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿರುವ ದೃಶ್ಯದೊಂದಿಗೆ ಆ ವಿಡಿಯೋ ತುಣುಕು ಮುಕ್ತಾಯವಾಯಿತು.
ಸುಸ್ವಾಸನ ಇಯರ್ ಫೋನಿನ ಧ್ವನಿಯು ಹಾಗೇ ಮುಂದುವರೆಯುತ್ತಾ "ಸ್ವಾರಸ್ಯಕರ ಸಮಯದಲ್ಲೇ ವಿಡಿಯೋ ತುಣುಕಿನ ಧ್ವನಿ ಕೈಕೊಟ್ಟದ್ದರಿಂದ ಬಿಪಿಒ ಉದ್ಯೋಗಿಗಾದಷ್ಟೇ ನಿರಾಶೆ ನನಗೂ ಆಗಿದೆ. ಬಾಳೆ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಗೆದ್ದವರಾರು ಎಂಬ ಬಗ್ಗೆ ಒಂದು ಊಹೆ ಇದೆಯಾದರೂ, ಗೆದ್ದ ವ್ಯಕ್ತಿ ಹಾಗು ಅವನನ್ನು ಆರಿಸಿದ ಕಾರಣ ತಿಳಿಯಲು ಅತ್ಯಂತ ಕುತೂಹಲಿಯಾಗಿದ್ದೇನೆ. ಸುಸ್ವಾಸ ಈಗ ನೀನೇನಾದರೂ ತಿಳಿದೂ ನನ್ನ ಕುತೂಹಲವನ್ನು ತಣಿಸದಿದ್ದರೆ ಸ್ಪೋಟಕಗಳಿಂದ ತುಂಬಿರುವ ಭಯೋತ್ಪಾದಕ ಆತ್ಮಾಹುತಿ ಪಡೆಯವರ ಕಾರಿನಂತೆ ಸುಟ್ಟು ಬೂದಿಯಾಗುವುದು ಖಂಡಿತ!" ಎಂದು ಹೇಳುತ್ತಿದ್ದಂತೆ ನಿಶ್ಯಬ್ದ ಆವರಿಸಿತು.
ಸುಸ್ವಾಸ ತನ್ನ ವಿವೇಚನೆ ಹಾಗು ಬಾಳಿನ ನಿಗೂಢ ಅರ್ಥಗಳನ್ನು ಅರಿಯುವ ಬಗ್ಗೆ ಅವನಿಗಿರುವ ಹುರುಪಿನಿಂದಾಗಿ ವಿಡಿಯೋ ತುಣುಕಿನ ಕೊನೆಯ ಭಾಗದಲ್ಲಿ ನಡೆದಿರಬಹುದಾದ ಘಟನೆಯನ್ನು ಶೀಘ್ರವಾಗಿ ಗ್ರಹಿಸಿ ಹೇಳತೊಡಗಿದ. ಗುರುಗಳು ಮೊದಲಿಗೆ 'ನೂರು ಜನರು ಹಣ್ಣು ತಿನ್ನುವುದು ನೋಡಿದ್ದಾರೆ ಆದ್ದರಿಂದ ನನಗೇ ಈ ಸ್ಪರ್ಧೆಯಲ್ಲಿ ಗೆಲವು' ಎಂದ ವ್ಯಕ್ತಿಯನ್ನು ಕರೆದರು. ನಂತರ ಆ ವ್ಯಕ್ತಿ ಹಣ್ಣು ತಿನ್ನುವುದನ್ನು ನೋಡಿರುವ ಶಿಬಿರಾರ್ಥಿಗಳು ಕೈ ಎತ್ತುವ ಮೂಲಕ ಸೂಚಿಸಬೇಕೆಂದಾಗ ಕೇವಲ ಹತ್ತು ಹದಿನೈದು ಜನರು ಕೈಯೆತ್ತಿದರು. ಅದೇ ರೀತಿಯಾಗಿ ಇಪ್ಪತ್ತೈದು, ಎಂಭತ್ತೊಂದು ಜನಗಳು ನೋಡುವಂತೆ ತಿಂದಿದ್ದೇವೆ ಎಂದು ಹೇಳಿಕೊಂಡ ಅಭ್ಯರ್ಥಿಗಳಿಗೂ ಕೂಡ ಆಶ್ಚರ್ಯಕರವಾಗಿ ಕೇವಲ ಕೆಲವೇ ಕೈಗಳು ಮೇಲಕ್ಕೆ ಹೋದವು.ತದನಂತರ ಗುರುಗಳು ತಮ್ಮ ಹಿಂದೆ ಅವಿತುಕೊಂಡು ಎಲ್ಲರಿಗೂ ಬಾಳೆ ಸಿಪ್ಪೆಯನ್ನು ತೋರಿಸಿದ್ದ ಅಭ್ಯರ್ಥಿಯನ್ನು ವೇದಿಕೆಗೆ ಕರೆದು, ಈ ವ್ಯಕ್ತಿಯು ನನ್ನ ಹಿಂದೆ ಹಣ್ಣನ್ನು ತಿಂದಿರುವನೆಂದು ಖಾತ್ರಿಯಾಗಿರುವವರೆಲ್ಲ ಕೈಯೆತ್ತಿ ಎಂದಾಗ, ಹೆಚ್ಚು ಕಡಿಮೆ ಎಲ್ಲರೂ ಕೈ ಎತ್ತಿದರು. ಮುಗುಳ್ನಗೆ ಬೀರುತ್ತಿದ್ದ ಗುರುಗಳು ಅವನೇ ಸ್ಪರ್ಧೆಯನ್ನು ಗೆದ್ದಿದ್ದಾನೆ ಎಂದು ಘೋಷಿಸಿದರು ಮತ್ತು ತಮ್ಮ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಂಡರು.
ಬಾಳೆ ಹಣ್ಣು ತಿನ್ನುವ ಸ್ಪರ್ಧೆಯು ನಮ್ಮ ದಿನ ನಿತ್ಯದ ಜೀವನದಲ್ಲಿ ಕಾಡುವ ಉಭಯ ಸಂಕಟಗಳು ಮತ್ತು ವಿರೋಧಾಭಾಸಗಳನ್ನು ಬಿಂಬಿಸಲೆಂದೇ ಯೋಜಿಸಲಾಗಿದೆ. ಈ ಸ್ಪರ್ಧೆ ಗೆದ್ದ ವ್ಯಕ್ತಿಗೆ ಉಭಯ ಸಂಕಟಗಳ, ವಿರೋಧಾಭಾಸಗಳ ಅರಿವಿದ್ದುದರಿಂದಲೇ ಅವನ್ನು ನಿಭಾಯಿಸುವ ಉಪಾಯವೂ ಅವನಿಗೆ ಹೊಳೆಯಿತು. ನಾಲ್ಕು ನೂರು ಜನರೂ ನೋಡುವಂತೆ ಬಾಳೆ ಹಣ್ಣು ತಿನ್ನುವುದು ಅಸಾಧ್ಯವೇ ಸರಿ. ಏಕೆಂದರೆ ಪ್ರತಿಯೊಬ್ಬರೂ ಇತರರ ಗಮನ ಸೆಳೆದು ತಾವು ಹಣ್ಣು ತಿನ್ನುತ್ತಿರುವುದನ್ನು ನೋಡುವವರನ್ನು ಎಣಿಸುವ ಕಾತುರದಲ್ಲಿರುತ್ತಾರೆ. ಹೀಗಾಗಿ ಇನ್ನೊಬ್ಬರು ಹಣ್ಣು ತಿನ್ನುವುದನ್ನು ನೋಡಲು ಆಗುವುದೇ ಇಲ್ಲ! ಸ್ಪರ್ಧೆ ಗೆದ್ದ ವ್ಯಕ್ತಿ ಇದನ್ನು ತಿಳಿದುಕೊಂಡಿದ್ದರಿಂದ ತಾನು ಬಾಳೆ ಹಣ್ಣನ್ನು ತಿನ್ನದಿದ್ದರೂ, ಉಳಿದ ಶಿಬಿರಾರ್ಥಿಗಳಿಗೆ ಅವನು ತಿಂದಂತೆ ಭಾಸವಾಗುವ ಹಾಗೆ ಉಪಾಯ ಮಾಡಿದ್ದನು.
ಗುರುಗಳು ತಮ್ಮ ಆಸನದ ಹಿಂಬಾಗದಲ್ಲಿದ್ದ ಬಾಳೆ ಹಣ್ಣಿನ ತಿರುಳನ್ನು ತೋರಿಸುತ್ತಾ, ಸ್ಪರ್ಧೆ ಗೆದ್ದ ವ್ಯಕ್ತಿಯು ಬಹಳ ಚಾಣಾಕ್ಷತೆಯಿಂದ ಎಲ್ಲರೂ ನೋಡುವಂತಹ ಸ್ಥಳದಲ್ಲಿ ಬಾಳೆ ಹಣ್ಣನ್ನು ತಿನ್ನುವುದು ಅಸಾಧ್ಯವಾದುದರಿಂದ, ಅದನ್ನು ತಿನ್ನಲಿಲ್ಲ. ಆದರೆ ನನ್ನ ಹಿಂದೆ ಅವಿತುಕೊಂಡು ಬಾಳೆ ಹಣ್ಣಿನ ತಿರುಳನ್ನು ಇಲ್ಲೇ ಬಿಟ್ಟು, ಬರೇ ಸಿಪ್ಪೆಯನ್ನು ಕೈಯಲ್ಲಿ ತಿರುಗಿಸುತ್ತಾ ಎಲ್ಲರೂ ನೋಡುವಂತೆ ಮಾಡಿದ ಉಪಾಯ ಫಲಿಸಿ, ಉಳಿದೆಲ್ಲರಿಗೂ ಹಣ್ಣನ್ನು ತಿಂದಂತೆ ಭಾಸವಾಗುವ ಹಾಗೆ ಮಾಡಿದ ಎಂದು ತಿಳಿಸಿದರು. ಹಾಗೇ ತಮ್ಮ ಮಾತನ್ನು ಮುಂದುವರೆಸುತ್ತಾ, "ಈ ಸ್ಪರ್ಧೆಯಿಂದ ನಾವು ಕಲಿಯಬೇಕಾದ ಪಾಠವೇನೆಂದರೆ ನಮ್ಮ ಬಾಳಿನ ಉದ್ದೇಶದ ಅರಿವು ಮೂಡಿದರೆ, ಆ ಉದ್ದೇಶಗಳನ್ನು ಈಡೇರಿಸುವ ದಾರಿಗಳೂ ತಾವಾಗಿಯೇ ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಐವರು ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ. ಸ್ಪರ್ಧೆಯನ್ನು ಯಾವ ಸಂದೇಶದ ಅರಿವನ್ನು ಮೂಡಿಸಬೇಕೆಂದು ಯೋಜಿಸಲಾಗಿತ್ತೋ ಅದನ್ನು ತಮ್ಮ ಅನಿಸಿಕೆಗಳ ಮೂಲಕ ತೋರ್ಪಡಿಸಿ, ಬಾಳೆ ಹಣ್ಣು ತಿನ್ನುವ ಸ್ಪರ್ಧೆ ಯಶಸ್ವಿಯಾಗುವಲ್ಲಿ ಸಹಕರಿಸಿದ್ದಾರೆ.
ನಾವು ಯಾವುದೇ ಕಾರ್ಯ ಕೈಗೊಳ್ಳಬೇಕೆಂದಾಗ ಕೆಲವು ವಿಚಾರ ಸರಣಿಗಳು ಮೋಡಗಳಂತೆ ಕವಿದು ನಮ್ಮ ದೃಷ್ಟಿಯನ್ನು ಮಸುಕುಗೊಳಿಸಿ ಗುರಿ ಮುಟ್ಟುವ ದಾರಿ ಕಾಣದಂತೆ ಮಾಡುತ್ತವೆ. ಇಂತಹ ವಿಚಾರ ಸರಣಿಗಳಾವುವೆಂದರೆ :
ಆರಂಭ ಶೂರರಂತೆ ಎಲ್ಲಾ ಕಾರ್ಯಗಳು ಸುಲಭವೆಂದು ಎಣಿಸಿ ಬಲು ಉತ್ಸಾಹದಿಂದ ಆರಂಭಿಸುತ್ತೇವೆ. ಆದರೆ ಒಂದು ಸಣ್ಣ ಅಡ್ಡಿ ಎದುರಾದರೂ ನಮ್ಮ ಹೆಜ್ಜೆಯನ್ನು ಹಿಂದೆಗೆಯುತ್ತೇವೆ.
ಮೊದಲನೇ ಅಭ್ಯರ್ಥಿಯ ಅನಿಸಿಕೆ ಇದನ್ನು ಸ್ಪಷ್ಟವಾಗಿಸುತ್ತದೆ.
ಕೇವಲ ಕಷ್ಟಗಳೇ ಗೋಚರವಾಗಿ ಮುಂದುವರೆಯುವ ಉತ್ಸಾಹವನ್ನು ಕುಗ್ಗಿಸುತ್ತವೆ.
ಇದನ್ನು ನಾಲ್ಕನೇ ಅಭ್ಯರ್ಥಿಯ ಅನಿಸಿಕೆಯಿಂದ ತಿಳಿಯಬಹುದು.
ನಾವೆಂದಿಗೂ ಜಯಶಾಲಿಗಳು ಎಂದು ತೋರ್ಪಡಿಸಿಕೊಳ್ಳಲು ಇಚ್ಚಿಸುತ್ತೇವೆ.
ಅನೇಕ ವೇಳೆ ನಾವು ಮಾಡುವ ಕಾರ್ಯ ಇತರರ ಗಮನ ಸೆಳೆಯಲು ಮತ್ತು ತನ್ಮೂಲಕ ನಮ್ಮ ಯೋಗ್ಯತೆಯ ರುಜುವಾತುಪಡಿಸಲೆಂದೇ ಇರುತ್ತದೆ. ಈ ತರಹದ ವಿಚಾರ ಸರಣಿಯು ಎರಡನೇ ಅಭ್ಯರ್ಥಿಯ ಅನಿಸಿಕೆಯಲ್ಲಿ ಚೆನ್ನಾಗಿ ಅಭಿವ್ಯಕ್ತಿಸಲ್ಪಟ್ಟಿದೆ.
ನಮ್ಮ ವಿಫಲತೆಗಳನ್ನು ಮುಚ್ಚಿಕೊಳ್ಳಲು ಅನ್ಯರನ್ನು ದೂರುವ ಹಾಗು ಇತರರ ದೋಷಗಳನ್ನೆಣಿಸುವ ಪ್ರವೃತ್ತಿ.
ಈ ತರಹದ ವಿಚಾರ ಸರಣಿಯ ಅರಿವನ್ನು ಮೂರನೇ ಅಭ್ಯರ್ಥಿಯ ಅನಿಸಿಕೆಯು ತಿಳಿಸಿಕೊಡುತ್ತದೆ.
ನಮ್ಮ ಬಳಿ ಇರುವ ಸಂಪನ್ಮೂಲಗಳು ಯಾವಾಗಲೂ ಅಭಾವಪೂರಿತವಾದದ್ದು.
ಈ ರೀತಿಯ ವಿಚಾರ ಸರಣಿ ಉಂಟಾಗುವ ಬಗ್ಗೆ ಐದನೇ ಅಭ್ಯರ್ಥಿಯು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಮೂಲಕ ಅತ್ತ್ಯುತ್ತಮವಾಗಿ ತೋರಿಸಿಕೊಟ್ಟಿದ್ದಾರೆ.
ಬಾಳೆ ಹಣ್ಣು ತಿನ್ನುವ ಸ್ಪರ್ಧೆ ಗೆದ್ದ ವ್ಯಕ್ತಿಯ ನಡವಳಿಕೆಯು, ಸಾಮನ್ಯವಾಗಿ ಆರಂಭದಲ್ಲಿ ಬರುವ ಈ ತರಹದ ವಿಚಾರ ಸರಣಿಗಳ ಅರಿವು ಮೂಡಿದರೂ ಸಾಕು, ಅವುಗಳನ್ನು ಒತ್ತಟ್ಟಿಗಿರಿಸಿ ಹೊಸ ವಿಚಾರ ಸರಣಿಗೆ ನಂದಿ ಹಾಡಬಹುದು. ಮತ್ತು ಹೀಗೆ ಹುಟ್ಟುಹಾಕಿದ ಹೊಸ ವಿಚಾರ ಸರಣಿಯು ಬಾಳೆ ಹಣ್ಣನ್ನು ಎಲ್ಲರೂ ನೋಡುವಂತಹ ಸ್ಥಳದಲ್ಲಿ ತಿನ್ನಲು ಸಾಧ್ಯವಿಲ್ಲವೆಂಬ ತಿಳುವಳಿಕೆ ಮೂಡಿಸಿ, ಸ್ಪರ್ಧೆ ಗೆಲ್ಲುವ ಯುಕ್ತಿಯನ್ನೂ ಒದಗಿಸಿಕೊಡುತ್ತದೆ ಎಂಬ ಸತ್ಯವನ್ನು ತಿಳಿಸಿಕೊಟ್ಟಿತು." ಗುರುಗಳ ಈ ಸ್ಪಷ್ಟನೆ ಕೇಳಿ ಮೂಕವಿಸ್ಮಿತರಾಗಿದ್ದ ಸಭಿಕರೆಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆಯತೊಡಗಿದರು.
ಇಷ್ಟನ್ನು ಸುಸ್ವಾಸನು ಹೇಳಿ ಮುಗಿಸುತ್ತಿದ್ದಂತೆ, ಜೋರಾಗಿ ಗಹಗಹಿಸುತ್ತ ನಗುವ ಸದ್ದು ಕಪ್ಪು ಟೆಲಿಫೋನಿನಿಂದ ಹೊರಟಿತು. ಅದರ ಹಿಂದೆಯೇ ಗಡಸಾದ ಧ್ವನಿಯು "ಸುಸ್ವಾಸ ನೀನು ಮನೆ ತಲುಪುವ ಮುನ್ನವೇ ಮಾತನಾಡಿ ನನ್ನ ಕಟ್ಟಳೆಯನ್ನು ಮುರಿದಿದ್ದಿ. ನನ್ನನ್ನು ಪುನಃ ಕಾಣಬೇಕಾದರೆ ನಾಳೆ ಸೂರ್ಯೋದಯವಾದ ನಂತರವೇ" ಎಂದು ಹೇಳುತ್ತಾ ಮಾಯವಾಯಿತು. ________________________________________________________________________________
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ